

ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ತಾಲೂಕಿನ ರೈತರ ಜಮೀನುಗಳಿಗೆ ಮಲಪ್ರಭಾ ಬಲದಂಡೆ ಕಾಲುವೆಗಳ ಮೂಲಕ ನೀರು ಹರಿಸಬೇಕು ಎಂದು ರೈತ ಸಂಘದ ಸದಸ್ಯರು ತಹಸೀಲ್ದಾರ್ ಶ್ರೀಶೈಲ ತಳವಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ಮಹದಾಯಿ ಮಹಾವೇದಿಕೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ನರಗುಂದ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಹೆಸರು, ಗೋವಿನಜೋಳ, ಹತ್ತಿ, ಇನ್ನಿತರ ಬೆಳೆ ಬೆಳೆದಿದ್ದಾರೆ. ಆದರೆ, ಸಕಾಲಿಕ ಮಳೆ ಆಗದ್ದರಿಂದ ಬೆಳೆಗಳಿಗೆ ನೀರಿನ ಅಗತ್ಯತೆ ಇದೆ. ಹೀಗಾಗಿ ನೀರಾವರಿ ಕಾಲುವೆಗಳಿಗೆ ಮಲಪ್ರಭಾ ನವಿಲುತೀರ್ಥ ಅಣೆಕಟ್ಟೆಯಿಂದ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಬಸವರಾಜ ಸಾಬಳೆ, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ, ಈರಣ್ಣ ಸೊಪ್ಪಿನ, ಪ್ರವೀಣ ಯರಗಟ್ಟಿ, ಚನ್ನು ನಂದಿ, ರವಿ ಒಡೆಯರ್, ಡಿ.ಎಸ್. ಗುಡಿಸಾಗರ, ಮನೋಹರ ಹುಯಿಲಗೋಳ, ಕೆ.ಕೆ. ಹೂಗಾರ, ಇತರರಿದ್ದರು.