ನೀರು ಪರೀಕ್ಷೆ ಜಿಲ್ಲೆಯಲ್ಲಿ ಸವಾಲು

water test
water testing
Published on

ನಾಲ್ಕು ತಾಲೂಕಿಗೆ ಒಂದೇ ಲ್ಯಾಬ್

ವಾಟರ್ ಟೆಸ್ಟಿಂಗ್ ಮೇಲ್ದರ್ಜೆಗೆ ಆಗ್ರಹ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಾಲ್ಕೂ ತಾಲೂಕುಗಳನ್ನೊಳಗೊಂಡ ಗ್ರಾಮಾಂತರ ಜಿಲ್ಲೆಯಲ್ಲಿ ನೀರು ಪರೀಕ್ಷಾ ಘಟಕ (ವಾಟರ್ ಟೆಸ್ಟಿಂಗ್ ಲ್ಯಾಬ್) ಒಂದೇ ಇರುವುದರಿಂದ ನೀರಿನ ಗುಣಮಟ್ಟ ಪರೀಕ್ಷೆ ಸವಾಲಿನ ಕೆಲಸವಾಗಿ ಪರಿಣಮಿಸಿದೆಯೇ? ಇಂಥಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಘವಿಸಿದೆ.
ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿ ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಇರುವುದೊಂದೆ ನೀರು ತಪಾಸಣಾ ಲ್ಯಾಬ್ ಆಗಿರುವುದರಿಂದ 104 ಗ್ರಾಪಂ ವ್ಯಾಪ್ತಿಯಲ್ಲಿ ನಿಗಧಿತ ಸಮಯದಲ್ಲಿ ಅಷ್ಟೂ ಕಡೆಗಳಲ್ಲಿ ತಪಾಸಣೆ ನಡೆಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ.
ದೊಡ್ಡಬಳ್ಳಾಪುರದಲ್ಲಿ ಲ್ಯಾಬ್: ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಹಿಂಭಾಗದಲ್ಲಿನ ಕಟ್ಟಡದಲ್ಲಿ ಪ್ರಸ್ತುತ ನೀರಿನ ಗುಣಮಟ್ಟ ಪರೀಕ್ಷೆಯ ಲ್ಯಾಬ್ ಕಾರ್ಯನಿರ್ವಹಿಸುತ್ತಿದೆ. ಸುಮಾರು 8 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳು, ಸರ್ಕಾರಿ ಸಾಮ್ಯದ ಕೊಳವೆಬಾವಿಗಳು, ಕೆರೆಗಳಿಗೆ ಹರಿಯುವ ನೀರು ಸೇರಿ ಇನ್ನಿತರ ನೀರಿನ ಮೂಲಗಳ ಪರೀಕ್ಷೆ ಸವಾಲಿನ ಕೆಲಸವಾಗಿದೆ. ದೊಡ್ಡಬಳ್ಳಾಪುರದಲ್ಲಿನ ಲ್ಯಾಬ್‌ನ್ನು ಮೇಲ್ದರ್ಜೆಗೇರಿಸಬೇಕು ಜತೆಗೆ ತಾಲೂಕು ವ್ಯಾಪ್ತಿಗೂ ಒಂದೊಂದು ಲ್ಯಾಬ್‌ಗಳನ್ನು ತೆರೆದರೆ ನೀರಿನ ಗುಣಮಟ್ಟ ಪರೀಕ್ಷೆಗೆ ಎದುರಾಗಿರುವ ಒತ್ತಡ ತಗ್ಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ತಾಲೂಕುವಾರು ಲ್ಯಾಬ್ ಬೇಕು: ಸರ್ಕಾರಿ ಸೌಮ್ಯದ ಕಚೇರಿಗಳು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆ ಮಾಡಬೇಕಾಗಿದೆ, ನೂರಾರು ಶಾಲೆ, ಅಂಗನವಾಡಿಗಳು ಸೇರಿ ಸರ್ಕಾರಿ ಕಚೇರಿಗಳಲ್ಲಿ ನೀರಿನ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ ಎಂಬಂತ ಪರಿಸ್ಥಿತಿ ಇದೆ. ಮೂರು ತಿಂಗಳಿಗೆ ಅಥವಾ 6 ತಿಂಗಳಿಗೆ ಒಮ್ಮೆಯಂತೆ ಪರೀಕ್ಷೆ ನಡೆಸುವುದರಿಂದ ನೀರಿನ ಗುಣಮಟ್ಟ ಅರಿಯಲು ಸಾಧ್ಯವಾಗಲಿದೆ ಆದರೆ ಇಷ್ಟು ಕಡಿಮೆ ಸಮಯದಲ್ಲಿ ಅಷ್ಟೂ ಕಡೆಗಳಲ್ಲಿ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಆದ್ದರಿಂದ ತಾಲೂಕು ಮಟ್ಟದಲ್ಲಿಯೇ ಲ್ಯಾಬ್‌ಗಳು ಕಾರ್ಯನಿರ್ವಹಿಸಿದರೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಖಾಸಗಿಗೂ ಟೆಸ್ಟಿಂಗ್: ಸರ್ಕಾರಿ ಅಲ್ಲದೆ ಖಾಸಗಿಯಾಗಿಯೂ ನೀರಿನ ಗುಣಮಟ್ಟ ಪರೀಕ್ಷೆ ನಡೆಸಲಾಗುತ್ತಿದೆ ಇದಕ್ಕೆ ದರ ನಿಗಧಿಪಡಿಸಲಾಗುತ್ತದೆ. ರೈತರು ಸೇರಿ ಇನ್ನಿತರ ಕಡೆಗಳಿಂದ ನೀರಿನ ಗುಣಮಟ್ಟ ಪರೀಕ್ಷೆಗೆ ದೊಡ್ಡಬಳ್ಳಾಪುರವನ್ನೇ ಅವಲಂಬಿಸಬೇಕಾಗಿದೆ. ಕೆಲವು ಸಂದರ್ಭಗಳಲ್ಲಿ ಖಾಸಗಿಯವರು ತಂದ ನೀರಿನ ಮಾದರಿ ಬಗ್ಗೆ ಅನುಮಾನ ಬಂದರೆ ಖುದ್ದು ಸಿಬ್ಬಂದಿಯೇ ಸ್ಥಳಕ್ಕೆ ತೆರಳಿ ನೀರಿನ ಮಾದರಿ ಸಂಗ್ರಹಿಸುವಂತ ಸಂದರ್ಭಗಳು ಬರುತ್ತವೆ. ಇದರಿಂದ ದೂರದ ಪ್ರದೇಶಗಳಿಗೆ ಹೋಗಿಬರುವುದು ತ್ರಾಸದಾಯ ಎಂಬ ಮಾತು ಕೇಳಿಬರುತ್ತಿದೆ.
ನೀರಿನ ಘಟಕಗಳ ಬಗ್ಗೆ ನಿಗಾ: ಗ್ರಾಮೀಣ ಪ್ರದೇಶಗಳೂ ಸೇರಿ ಜಿಲ್ಲೆಯಲ್ಲಿ ಪ್ರಸ್ತುತ ಕುಡಿಯಲು ಬಹುತೇಕ ಎಲ್ಲರೂ ಶುದ್ಧ ನೀರಿನ ಘಟಕಗಳನ್ನೇ ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುದ್ಧ ನೀರಿನ ಘಟಕಗಳ ನಿರ್ವಹಣೆ, ಅವುಗಳಲ್ಲಿ ದೊರೆಯುತ್ತಿರುವ ನೀರಿನ ಗುಣಮಟ್ಟ ತಪಾಸಣೆ ಮುಖ್ಯವಾಗಿದೆ. ಆಗಾಗ ಘಟಕಗಳ ಪರಿಶೀಲನೆ ಅತ್ಯಗತ್ಯವಾಗಿದೆ. ನೀರಿನಲ್ಲಿರುವ ಗಡಸು ಸೇರಿ ಇನ್ನಿತರ ಅಂಶಗಳ ಆಧಾರದ ಮೇಲೆ ಕುಡಿಯಲು ನೀರು ಯೋಗ್ಯವೇ ಇಲ್ಲವೆ ಎಂಬುದನ್ನು ದೃಢಪಡಿಸಬೇಕಿದೆ. ಇರುವುದೊಂದು ಲ್ಯಾಬ್‌ನಲ್ಲಿ ಇವೆಲ್ಲ ನಿರ್ವಹಣೆ ಕಷ್ಟ ಎಂಬಂತಾಗಿದೆ.
ಸಾರಿಗೆ ವ್ಯವಸ್ಥೆ ಇಲ್ಲ: ನಾಲ್ಕೂ ತಾಲೂಕುಗಳನ್ನೊಳಗೊಂಡ ಜಿಲ್ಲೆಗೆ ಇರುವುದೊಂದೆ ಲ್ಯಾಬ್ ಜತೆಗೆ ಇಲ್ಲಿನ ಸಿಬ್ಬಂದಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ಸ್ವಂತ ವಾಹನಗಳಲ್ಲಿ ಹೋಗಿ ಬಂದು ಕರ್ತವ್ಯ ನಿರ್ವಹಿಸಬೇಕಿದೆ. ಇದರಿಂದ ದೂರದ ಪ್ರದೇಶಗಳಿಗೆ ಹೋಗಿಬರುವುದು, ನೀರಿನ ಮಾದರಿಗಳನ್ನು ಸಂಗ್ರಹಿಸಿ ತರುವುದು ಸಾಹಸದ ಕೆಲಸವಾಗಿದೆ. ನೀರಿನ ಗುಣಮಟ್ಟ ಪರೀಕ್ಷೆ ವಿಭಾಗಕ್ಕೆ ವಾಹನದ ಸೌಲಭ್ಯ ಕಲ್ಪಿಸಿದರೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.
ಮೇಲ್ದರ್ಜೆಗೇರಿಸುವಂತೆ ಮನವಿ: ಇತ್ತೀಚಿಗೆ ಕೇಂದ್ರ ಜಲಶಕ್ತಿ ತಂಡದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನ ವಿಭಾಗದ ವತಿಯಿಂದ ಲ್ಯಾಬ್ ಮೇಲ್ದರ್ಜೆಗೇರಿಸುವ ಸಂಬಂಧ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಇದು ಅನುಷ್ಟಾನಗೊಂಡರೆ ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಅಳೆಯಲು ಸಹಕಾರಿಯಾಗಲಿದೆ ಎಂಬ ಆಶಾಭಾವ ಅಧಿಕಾರಿಗಳದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net