

ರಾಯಚೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಹೆಚ್ಚಿನ ಹಣ ಖರ್ಚು ಮಾಡಲಾಗಿದ್ದರೂ, ನಗರ ಮತ್ತು ಸ್ಥಳೀಯ ಸಂಸ್ಥೆಗಳಿಂದ ನೀರಿನ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಆಶಪ್ಪ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೀರಿನ ತೆರಿಗೆ ಏರಿಕೆ ಕ್ರಮಕೈಬಿಡಲು ಮಾಜಿ ಮೇಯರ್ ಒತ್ತಾಯ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಮಾತನಾಡಿದರು. ಕುಡಿಯುವ ನೀರಿನ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ನಗರದ ಗಂಗಾನಿವಾಸದ ಹತ್ತಿರ 15 ಲಕ್ಷ ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದರೂ ಅದರಿಂದ ನೀರು ಸರಬರಾಜು ಆಗುತ್ತಿಲ್ಲ. ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆ ಇರುವುದರಿಂದ ನೀರಿನ ಲಭ್ಯತೆ ಕಡಿಯಾಗಿದೆ. ಮನೆಗಳಿಗೆ ಅಳವಡಿಸಿದ ನಳಗಳಿಗೆ ಟ್ಯಾಪ್ ಅಳವಡಿಸದೆ ಇರುವುದರಿಂದ ನೀರು ಪೋಲಾಗುತ್ತಿದೆ ಎಂದರು.
ಮಡ್ಡಿಪೇಟೆ ಬಡಾವಣೆಯಲ್ಲಿ ಟ್ಯಾಂಕ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಬಡಾವಣೆಯಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ಒಂದು ಟ್ಯಾಂಕ್ ನೀರು ಸಾಕಾಗುತ್ತಿಲ್ಲ. ಎರಡು ಟ್ಯಾಂಕ್ ನೀರು ಸರಬರಾಜು ಮಾಡಬೇಕಾಗಿದೆ.
ಬಹುತೇಕ ಬಡಾವಣೆಗಳಲ್ಲಿ ನೀರಿನ ಕೊರತೆ ಎದುರಾಗುತ್ತಿದ್ದು, ಕೃಷ್ಣಾ ನದಿಯಿಂದ ಆರ್‌ಟಿಪಿಎಸ್, ವೈಟಿಪಿಎಸ್ ಜತೆಗೆ ಕೈಗಾರಿಕೆ ಪ್ರದೇಶಗಳಿಗೆ ನೀರು ಸರಬರಾಜು ಮಾಡುತ್ತಿರುವುದರಿಂದ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆ.
ದಿನದ 24ಗಂಟೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಹೆಚ್ಚಿನ ಅನುದಾನ ಬಳಕೆಯಾಗಿದೆ. ಆದರೆ, ಕಾಮಗಾರಿ ಇನ್ನೂ ಮುಗಿದಿಲ್ಲ. ಹೊಸ ಪೈಪ್ ಜತೆಗೆ ಹಳೆಯ ಪೈಪ್‌ನಿಂದಲೂ ನೀರು ಸರಬರಾಜು ಮಾಡಿದರೆ ನೀರಿನ ಕೊರತೆ ಎದುರಾಗಲಿದೆ.
ನಗರದಲ್ಲಿ ಯುಜಿಡಿ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎನ್ನುವ ದೂರುಗಳಿದ್ದು, ಪರಿಶೀಲನೆ ವೇಳೆಯೂ ಕಳಪೆ ಗುಣಮಟ್ಟ ಕಂಡು ಬಂದಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ರಾಯಚೂರು ಜಿಲ್ಲೆಯ ಪ್ರಗತಿ ತೀರಾ ಕಡಿಮೆಯಾಗಿದೆ ಎಂದು ಆಶಪ್ಪ ಪೂಜಾರ ಹೇಳಿದರು.