

ಸಂತೋಷ ವೈದ್ಯ ಹುಬ್ಬಳ್ಳಿ
ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಕಾಣದಿದ್ದರೂ ನೀರಿನ ಕರ ಪಾವತಿಸುವಲ್ಲಿ ಬಳಕೆದಾರರು ಬಹುತೇಕ ಪೂರ್ಣ ಬದ್ಧತೆಯನ್ನು ತೋರಿಸಿದ್ದಾರೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2024-25ರ ಸಾಲಿನಲ್ಲಿ ನೀರಿನ ಕರ ಸಂಗ್ರಹದಲ್ಲಿ ಶೇ. 92.54 ರಷ್ಟು ಪ್ರಗತಿ ಸಾಧಿಸಿರುವುದು ಗಮನಾರ್ಹವೆಂದೇ ಪರಿಗಣಿಸಬಹುದು.
51.13 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿ 47.32 ಕೋಟಿ ರೂ. ಸಂಗ್ರಹವಾಗಿದೆ. 2023-24ರಲ್ಲಿ 51.06 ಕೋಟಿ. ರೂ. ಗಳಲ್ಲಿ 44.47 ಕೋಟಿ ರೂ. ಸಂಗ್ರಹವಾಗಿ ಶೇ. 87.06 ರಷ್ಟು ಗುರಿ ಸಾಧಿಸಲಾಗಿತ್ತು. ಗಣೇಶಪೇಟ ಕುಲಕರ್ಣಿ ಹಕ್ಕಲ್ ಗೂಡ್ಸ್‌ಶೆಡ್ ರಸ್ತೆ, ಗೋಕುಲ ರಸ್ತೆ ಕೋಟಿಲಿಂಗನಗರ ಸೇರಿ ಹಲವು ಬಡಾವಣೆಗಳಲ್ಲಿ ಈಗಲೂ ಪ್ರತಿ 7-8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯಾನಗರ, ಉಣಕಲ್ಲ ಸೇರಿ ಇನ್ನಿತರ ಪ್ರದೇಶಗಳಿಗೆ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಸುವುದು ಮುಂದುವರಿದಿದೆ. ಇದರ ನಡುವೆಯೂ ನೀರಿನಕರ ಪಾವತಿಸುವಲ್ಲಿ ಬದ್ಧತೆ ತೋರಿರುವ ಅವಳಿ ನಗರದ ನಿವಾಸಿಗಳಿಗೆ ಭೇಷ್ ಹೇಳಲೇಬೇಕು.
ಅವಳಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸುವ ಹೊಣೆಗಾರಿಕೆ ಹು-ಧಾ ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಹಾಗೂ ನಿರಂತರ ನೀರು ಯೋಜನೆಯ ಕಾಮಗಾರಿಯ ಗುತ್ತಿಗೆ ಹಿಡಿದಿರುವ ಎಲ್ ಆ್ಯಂಡ್ ಟಿ ಕಂಪನಿಯದ್ದಾಗಿದೆ. ಇವರು ಈ ವರ್ಷ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಹಲವು ಕ್ರಮ ಕೈಗೊಂಡಿದ್ದರ ಫಲವಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದೆ.
ಆನ್‌ಲೈನ್ ಮೂಲಕ ನೀರಿನ ಕರ ಪಾವತಿಸುವಲ್ಲಿ ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ತಿಂಗಳಿಂದ ತಿಂಗಳಿಗೆ ನೀರಿನ ಕರ ಪಾವತಿಸುವವರ ಸಂಖ್ಯೆ ಹೆಚ್ಚುತ್ತಿದೆ. ಏಪ್ರಿಲ್ (2024)ನಲ್ಲಿ ಶೇ. 21ರಷ್ಟಿದ್ದ ಆನ್‌ಲೈನ್ ಪಾವತಿದಾರರ ಸಂಖ್ಯೆ 2025ರ ಮಾರ್ಚ್ ತಿಂಗಳಲ್ಲಿ ಶೇ. 46ಕ್ಕೆ ತಲುಪಿದೆ. ಪಾಲಿಕೆ ವಲಯ ಕಚೇರಿ, ಹು-ಧಾ ಒನ್ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ನೀರಿನ ಕರ ಪಾವತಿಸುವುದಕ್ಕಿಂತ ಅನ್‌ಲೈನ್ ಹೆಚ್ಚು ಸೂಕ್ತವೆನಿಸಿದೆ. ಒಟ್ಟಾರೆಯಾಗಿ ನೀರಿನ ಕರ ಸಂಗ್ರಹದಲ್ಲಿ ಏರಿಕೆಯಾಗಲು ಈ ಉಪಕ್ರಮವು ಕಾರಣ ಎನ್ನಬಹುದು. ಸ್ಕಾೃನ್ ಮಾಡಿ ಯುಪಿಐ (ಫೋನ್ ಪೇ, ಗೂಗಲ್ ಪೇ) ಮೂಲಕ ನೀರಿನ ಕರ ಪಾವತಿಸುತ್ತಿದ್ದಾರೆ.
‘ಅವಳಿ ನಗರದಲ್ಲಿ 1.82 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ನೀರು ಬಳಸಿದ ಆಧಾರದ ಮೇಲೆ ಪ್ರತಿ ತಿಂಗಳು ನೀರಿನ ಶುಲ್ಕ ಸಂಗ್ರಹಿಸಲಾಗುತ್ತಿದೆ. ಎಲ್ ಆ್ಯಂಡ್ ಟಿ ಸಂಸ್ಥೆ ನಿಯೋಜಿಸಿರುವ ನೆರವು ಸಂಸ್ಥೆಯ ಸಿಬ್ಬಂದಿ ನೀರಿನ ಕರ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ ಗ್ರಾಹಕರಿಗೆ ಮಾಹಿತಿ ನೀಡಿ, ಕರ ತುಂಬಲು ಮನವೊಲಿಸುತ್ತಿದ್ದಾರೆ. ಕೇಂದ್ರೀಕೃತ ನೀರು ಸರಬರಾಜು ಗ್ರಾಹಕರ ಕೇಂದ್ರದ ಮೂಲಕ ಕಟಬಾಕಿದಾರರಿಗೆ ಕರೆ ಹಾಗೂ ಎಸ್‌ಎಂಎಸ್ ಮಾಡಿ ಬಾಕಿ ಇರುವ ನೀರಿನ ತೆರಿಗೆ ಪಾವತಿಸಲು ಮನವೊಲಿಸಲಾಗುತ್ತಿದೆ. ಅದಕ್ಕೆ ನೀರು ಬಳಕೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’’ ಎಂದು ಕೆಯುಐಡಿಎಫ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024-25ರಲ್ಲಿ 3 ತಿಂಗಳು ನಿಗದಿತ ಗುರಿಗಿಂತ ಹೆಚ್ಚು ನೀರಿನ ಕರ ಸಂಗ್ರಹವಾಗಿದೆ. ಜೂನ್‌ನಲ್ಲಿ ಶೇ. 107, ಜುಲೈನಲ್ಲಿ ಶೇ. 102 ಹಾಗೂ ಡಿಸೆಂಬರ್‌ನಲ್ಲಿ ಶೇ. 101ರಷ್ಟು ಗುರಿ ಸಾಧಿಸಲಾಗಿದೆ.