ಹಣ ಖರ್ಚಾದರೂ ನೀರು ಪೂರೈಕೆ ವ್ಯತ್ಯಯ

03 LXR 1
Published on

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಸೋಮವಾರ ಏರ್ಪಾಟಾಗಿದ್ದ ಸಾಮಾನ್ಯ ಸಭೆ ಆಡಳಿತ- ವಿರೋಧ ಪಕ್ಷಗಳ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ವೇದಿಕೆಯಾಯಿತು. ನೀರಿನ ವಿಷಯದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದರು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಪ್ರವೀಣ ಬಾಳಿಕಾಯಿ ಹಾಗೂ ಸದಸ್ಯರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಬಳಿಕ ಮಾತನಾಡಿ, ಪಟ್ಟಣದಲ್ಲಿ ನೀರು ಸರಬರಾಜು ವಿಷಯದಲ್ಲಿ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ನದಿ ತುಂಬಿ ಹರಿದರೂ 15ರಿಂದ 20 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನೀರು ಸರಬರಾಜಿಗಾಗಿ ಹಣ ಖರ್ಚು ಮಾಡಲಾಗುತ್ತಿದೆ. ಆದರೂ ಸರಿಯಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಆಡಳಿತ ಪಕ್ಷದ ಹಿರಿಯ ಸದಸ್ಯ ರಾಜಣ್ಣ ಕುಂಬಿ ಮಾತನಾಡಿ, ತುಂಗಭದ್ರಾ ನದಿ ಪಾತ್ರದ ಮೇವುಂಡಿ ಜಾಕ್‌ವೆಲ್‌ನಿಂದ ಲಕ್ಷ್ಮೇಶ್ವರಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾಳಾಗಿದೆ. ಹೊಸ ಪೈಪ್‌ಲೈನ್ ಅಳವಡಿಕೆಗೆ ಎಲ್ಲರೂ ಸೇರಿ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರು. ಕೆಲವು ಸದಸ್ಯರು ನೀರಿನ ಸಮಸ್ಯೆ ಬಗೆಹರಿಸುವುದು ಅಗತ್ಯವಾಗಿದ್ದು, ಇದ್ದ ಪೈಪ್‌ಲೈನ್ ನವೀಕರಣ ಅಥವಾ ದುರಸ್ತಿಗೆ ಆದ್ಯತೆ ನೀಡಿ ಎಂದು ಹೇಳಿದರು.
15ನೇ ಹಣಕಾಸು, ಸಾಮಾನ್ಯ ಅನುದಾನದಲ್ಲಿ ಮುಕ್ತ ನಿಧಿಯ ಒಟ್ಟು 76 ಲಕ್ಷ ರೂ.ಗಳಲ್ಲಿ ರಸ್ತೆ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್ ರದ್ದುಪಡಿಸಿ ಬದಲಿ ಕಾಮಗಾರಿಗೆ ಹೊಸ ಕ್ರಿಯಾಯೋಜನೆ ರೂಪಿಸುವ ಕುರಿತು ಚರ್ಚೆಗಳು ನಡೆದವು. ಪರ- ವಿರೋಧ ಚರ್ಚೆಗಳ ನಡುವೆ ವಾಗ್ವಾದಗಳು ನಡೆದು, ಆಡಳಿತ-ವಿರೋಧ ಪಕ್ಷಗಳ ಸದಸ್ಯರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡರು.
ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಕೆಂಚಲಾಪುರ ಶಾಲೆಯ ವರೆಗಿನ ರಸ್ತೆಯನ್ನು ನಿರ್ಮಿಸಲು ಅನೇಕ ಸಂಘಟನೆಗಳು ಒತ್ತಾಯಿಸಿವೆ. ಅದೇ ರಸ್ತೆಗೆ ಮರು ಟೆಂಡರ್ ಕರೆಯುವಂತೆ ಆಡಳಿತ ಪಕ್ಷದವರು ಒತ್ತಾಯಿಸಿದರು. ಇದನ್ನು ಒಪ್ಪದ ವಿಪಕ್ಷಗಳ ಸದಸ್ಯರು, ಈ ರಸ್ತೆ ಪೂರ್ಣಗೊಳಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈ ಮೊದಲು ಶಾಸಕರ ನೇತೃತ್ವದ ಕ್ರಿಯಾಯೋಜನೆಯಂತೆ ಕರೆಯಲಾದ ಕಾಮಗಾರಿಗಳ ಟೆಂಡರ್ ಜಾರಿಗೆ ತರುವ ಮೂಲಕ ಅವರ ನಿರ್ಣಯಕ್ಕೆ ಗೌರವ ಕೊಡಬೇಕು ಎಂದು ಸದಸ್ಯೆಯರಾದ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ, ವಾಣಿ ಹತ್ತಿ ಆಗ್ರಹಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸಹಮತ ಸೂಚಿಸಲಿಲ್ಲ. ಆಡಳಿತ ಪಕ್ಷದ 11 ಸದಸ್ಯರು, ವಿರೋಧ ಪಕ್ಷಗಳ 7 ಸದಸ್ಯರು ಪರ-ವಿರೋಧದ ಮನವಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದರು. ಬಹುಮತವಿದ್ದ ಆಡಳಿತ ಪಕ್ಷದ ಮನವಿ ಪುರಸ್ಕರಿಸಲಾಗಿದೆ ಎಂದು ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಘೋಷಿಸಿದರು. ಪಟ್ಟಣದ ಚಾವಡಿ ಜಾಗವನ್ನು ಸರ್ಕಾರದಿಂದ ಲೀಸ್‌ಗೆ ಪಡೆದುಕೊಂಡು, ಅಲ್ಲಿ ಮಳಿಗೆ ನಿರ್ಮಿಸುವ ಕುರಿತು ಚರ್ಚೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net