

ಹಾಸನ: ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಮುಂದಾಗಿದ್ದ ಸರ್ಕಾರದ ನಡೆಗೆ ಜಿಲ್ಲೆಯ ಜೆಡಿಎಸ್ ಶಾಸಕರಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆ ಸರ್ಕಾರ ಆದೇಶ ತಡೆ ಹಿಡಿದಿದ್ದು, ರಾಜಕೀಯ ಹಗ್ಗಜಗ್ಗಾಟ ಆರಂಭವಾಗಿದೆ.
ಜಿಲ್ಲಾಧಿಕಾರಿಗೆ ಗುರುವಾರ ಪತ್ರ ಬರೆದ ಜಲಾಶಯ ಯೋಜನೆಯ ಮುಖ್ಯ ಇಂಜಿನಿಯರ್, ಶುಕ್ರವಾರ ತುಮಕೂರು ಭಾಗಕ್ಕೆ ನೀರು ಹರಿಸುವುದರಿಂದ ಎಡದಂಡೆ ನಾಲೆಯ ಸರಪಳಿಯಿಂದ 72 ಕಿ.ಮೀ.ವರೆಗಿನ ನಾಲೆಯ ತೂಬುಗಳಿಗೆ ಹಾಗೂ ಬಾಗೂರು-ನವಿಲೆ ಸುರಂಗದ ಆಗಮನ, ನಿರ್ಗಮನ ಭಾಗಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಿಕೊಡಬೇಕು ಹಾಗೂ ಈ ಕಾರ್ಯಕ್ಕೆ ಅಗತ್ಯವಿರುವ ವಾಹನಗಳನ್ನು ಬಿಡುಗಡೆ ಮಾಡುವಂತೆ ಕೋರಿದ್ದರು.
ಅದನ್ನು ಆಧರಿಸಿ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಭದ್ರತೆ ಒದಗಿಸುವಂತೆ ಸೂಚಿಸಿದ್ದರು.
ಕೆರಳಿದ ಜೆಡಿಎಸ್ ಶಾಸಕರು: ಸರ್ಕಾರದ ನಿರ್ಧಾರದಿಂದ ಕೆರಳಿದ ಶಾಸಕರು, ತುಮಕೂರಿಗೆ ಮಾತ್ರ ನೀರು ಹರಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕರು ಸರ್ಕಾರದ ನಿರ್ಧಾರ ಖಂಡಿಸಿದ್ದಲ್ಲದೆ, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಸಮಾನವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.ಗೊರೂರು ಹಾಗೂ ಕಾರ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಧರಣಿಗೂ ಸಿದ್ಧತೆ ಆರಂಭಿಸಿದ್ದರು. ಅಷ್ಟರಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಜನ ಗುಂಪುಗೂಡದಂತೆ ತಡೆದರು.ಶಾಸಕರ ಅಸಮಾಧಾನ ಪ್ರಕಟವಾಗುತ್ತಲೇ ಎಚ್ಚೆತ್ತ ಪೊಲೀಸರು, ಜೆಡಿಎಸ್ ಪ್ರತಿಭಟನೆಗೆ ಮುಂದಾಗುವ ಸೂಚನೆ ಅರಿತು ಡಿಸಿ ಕಚೇರಿ ಸುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಏರ್ಪಡಿಸಿದರು.
ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕರೆ ಮಾಡಿ ಸರ್ಕಾರದಿಂದ ಬಂದಿರುವ ಸೂಚನೆ ಏನು? ಆದೇಶ ಪ್ರತಿ ಎಲ್ಲಿದೆ? ನೀರಾವರಿ ಸಲಹಾ ಸಮಿತಿ ಸಭೆಯನ್ನೇ ಕರೆಯದೆ ಹೇಗೆ ನೀರು ಹರಿಸುತ್ತೀರಿ? ಎಂದು ಪ್ರಶ್ನಿಸಿದರು. ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸೂಚನೆ, ಇನ್ನೊಂದೆಡೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ವಿರೋಧಗಳ ನಡುವೆ ಸಿಲುಕಿದ ಅಧಿಕಾರಿಗಳು ನೀರು ಬಿಡುಗಡೆ ಮಾಡುವ ಕೆಲಸವನ್ನು ಮುಂದೂಡಿದರು.
55 ಪೊಲೀಸರ ನಿಯೋಜನೆಗೆ ಮನವಿ: ಮುಖ್ಯಇಂಜಿನಿಯರ್, ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಾಟ್ಸ್‌ಆ್ಯಪ್ ಸಂದೇಶದಂತೆ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ಎಡದಂಡೆ ನಾಲೆ ಮೂಲಕ ತುಮಕೂರು ಜಿಲ್ಲೆಯ ನಗರಗಳಿಗೆ ಮೇ ಮೊದಲ ವಾರದಲ್ಲಿ ನೀರು ಹರಿಸುವ ಸಾಧ್ಯತೆಯಿರುವುದರಿಂದ ಎಲ್ಲ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಏ.28ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಮೇ 1 ರಿಂದ ಹೇಮಾವತಿ ಎಡದಂಡೆ ನಾಲೆಗೆ ತುಮಕೂರು ಜಿಲ್ಲೆಯ 8 ನಗರಗಳು ಹಾಗೂ ಮಾರ್ಗ ಮಧ್ಯದ ಹಳ್ಳಿಗಳ ಜನರ ಕುಡಿಯುವ ಉದ್ದೇಶದ ಬಳಕೆಗಾಗಿ ನೀರು ಬಿಡುಗಡೆ ಮಾಡಲು ಸೂಚಿಸಿದ್ದಾರೆ.ಈ ಕಾರ್ಯವನ್ನು ಪ್ರಸ್ತುತ ಸನ್ನಿವೇಶದಲ್ಲಿ ನಿರ್ವಹಿಸಲು ಕಷ್ಟವಾಗಬಹುದು. ಆದ್ದರಿಂದ ಮೇ 1 ರಿಂದ 15ರವರೆಗೆ 46 ನಾಲಾ ತೂಬುಗಳ ಬಳಿ ಒಟ್ಟು 55 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸುವಂತೆ ಮನವಿ ಮಾಡಿದ್ದಾರೆ.ಸಾಮಾನ್ಯವಾಗಿ ಈವರೆಗೂ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆಂದು ನೀರು ಹರಿಸಿದಾಗ ಮಾತ್ರವೇ ಸಾರ್ವಜನಿಕರು, ರಾಜಕಾರಣಿಗಳ ವಿರೋಧ ಎದುರಾಗುತ್ತಿತ್ತು. ತುಮಕೂರು, ಮಂಡ್ಯ ಜಿಲ್ಲೆಗಳಿಗೆ ನೀರು ಹರಿಸುವಾಗ ಯಾರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿರಲಿಲ್ಲ. ಅಲ್ಲದೆ ಪೊಲೀಸ್ ಭದ್ರತೆ ಒದಗಿಸಿ ನೀರು ಬಿಡುಗಡೆ ಮಾಡಿಸಿದ ಉದಾಹರಣೆಯೂ ಇರಲಿಲ್ಲ.
ಮಾಧುಸ್ವಾಮಿಯಿಂದ ವಿವಾದ: ಹೇಮಾವತಿ ಅಣೆಕಟ್ಟೆಯಲ್ಲಿ ಬಳಕೆಗೆ ಯೋಗ್ಯವಾದ 11 ಟಿಎಂಸಿ ನೀರು ಲಭ್ಯವಿದ್ದು, ಹಾಸನ ಹಾಗೂ ಮಂಡ್ಯ ಜಿಲ್ಲೆಯ ಭಾಗಕ್ಕೂ ಬೇಡಿಕೆಯಷ್ಟು ನೀರು ಹರಿಸಲು ಅವಕಾಶವಿತ್ತು. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೇವಲ ತುಮಕೂರಿಗೆ ಮಾತ್ರವೇ ನೀರು ಬಿಡಲು ಸೂಚಿಸಿದ್ದು ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದೆ. ಮುಂಜಾಗ್ರತೆಯಾಗಿ ಭದ್ರತೆ ಪಡೆಯಲು ಹೇಳಿರುವುದು ವಿರೋಧಿಸುವ ಧ್ವನಿಗಳಿಗೆ ಅಸ್ತ್ರ ದೊರಕಿಸಿಕೊಟ್ಟಿದೆ. ಸಚಿವರು, ಜಿಲ್ಲೆಯ ಶಾಸಕರ ಬೇಡಿಕೆಯನ್ನು ಒಪ್ಪಿ ಮೂರೂ ಜಿಲ್ಲೆಗಳಿಗೆ ನೀರು ಹರಿಸಿದರೆ ವಿವಾದದ ಕಿಡಿ ಸುಲಭವಾಗಿ ಆರಿ ಹೋಗುತ್ತದೆ.