

ಮೈಸೂರು: ಕುಡಿಯುವ ನೀರಿನ ಸಮಸ್ಯೆ ಇರುವ ಹಾಡಿಗಳ ಜನರಿಗೆ ವಾಟರ್ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಖುದ್ದು ಭೇಟಿ ನೀಡಿ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಬಗೆಹರಿಸಬೇಕು. ಗಂಭೀರವಾದ ಸಮಸ್ಯೆಗಳೇನಾದರೂ ಇದ್ದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಸಂಬಂಧಪಟ್ಟ ಕಚೇರಿಯ ಮುಖ್ಯಸ್ಥರು ಜನರ ಕಷ್ಟವನ್ನು ಆಲಿಸಿ ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೊದಲು ಗ್ರಾಮಗಳಲ್ಲಿ ಇರುವ ಬಾವಿ, ಕೆರೆ, ಬೋರ್‌ವೆಲ್‌ಗಳ ನೀರಿನ ಮಟ್ಟವನ್ನು ಪರೀಕ್ಷಿಸಿ ಕಡಿಮೆಯಾಗಿರುವುದು ಕಂಡುಬಂದರೆ ನೀರನ್ನು ಮರು ತುಂಬಿಸಬೇಕು ಎಂದು ತಿಳಿಸಿದರು.
ಹಾಡಿಯಲ್ಲಿ ಸ್ಮಶಾನ, ಗೋಮಾಳ ಇತ್ಯಾದಿ ಕುಂದುಕೊರತೆಗಳು ಕಂಡುಬಂದರೆ ತಕ್ಷಣವೇ ತಮ್ಮ ಗಮನಕ್ಕೆ ತರಬೇಕು. ಸಮಸ್ಯೆ ಹುಡುಕಿ ಬಗೆಹರಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದೇ ದೂರುಗಳಾಗಿ ಹೊರಹೊಮ್ಮಲಿವೆ. ಆಗ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಬೇಸಿಗೆ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡುಬರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಗ್ರಾಮ ಂಚಾಯಿತಿ ವ್ಯಾಪ್ತಿಗೆ ಬರುವ ಜನರಿಗೆ ವೈದ್ಯಕೀಯ ಇಲಾಖೆಯಿಂದ ಬಂದ ಮಾಹಿತಿ ತಲುಪಿಸಬೇಕು. ಅವರಿಗೆ ಸರಿಯಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಚರಂಡಿಗಳು, ರಸ್ತೆ ಬದಿಗಳು, ನೀರಿನ ಟ್ಯಾಂಕರ್, ಬೋರ್‌ವೆಲ್ ಹಾಗೂ ತೊಂಬೆಗಳನ್ನು ಸ್ವಚ್ಛಗೊಳಿಸಿ ಗ್ರಾಮವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯು ಒಂದು ಅಭಿಯಾನದಂತೆ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಗಾಯತ್ರಿ ಹೇಳಿದರು.
ಮೇವು ಅನ್ಯ ಜಿಲ್ಲೆಗಳಿಗೆ ಸರಬರಾಜು ಮಾಡುವಂತಿಲ್ಲ. ಹಾಗೆ ಮಾಡಿದ್ದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಅಧಿಕಾರಿಗಳು ತಾವು ಮಾಡುವ ಪ್ರತಿಯೊಂದು ಕೆಲಸದ ದಾಖಲೆ ಕುರಿತು ಪ್ರತ್ಯೇಕ ಕಡತದಲ್ಲಿ ಇರಬೇಕು. ಇದರಿಂದ ಎಲ್ಲ ಕೆಲಸಗಳ ಚಿತ್ರಣ ಹುಡುಕುವುದು ಸುಲಭವಾಗುತ್ತದೆ ಎಂದರು.
ಕೆಲಸ ಬಾಕಿ ಉಳಿಯಬಾರದು:
ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಡಿ.ಎಸ್.ಕೃಷ್ಣರಾಜು ಮಾತನಾಡಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೂ ಶೌಚಗೃಹ ನಿರ್ಮಿಸಬೇಕಾಗಿದೆ. ವಸತಿ ಯೋಜನೆಯಡಿ ಸೂರಿಗಾಗಿ ಅರ್ಹರಿಂದ ಅರ್ಜಿ ಸ್ವೀಕರಿಸಿ, ಸರಿಯಾದ ದಾಖಲೆ ಪಡೆಯಬೇಕು. ಇದರಿಂದ ಸ್ವೀಕರಿಸಿದ ಅರ್ಜಿಗಳ ಸಂಖ್ಯೆ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆಯಲ್ಲಿ ಅಂತರ ಕಡಿಮೆಯಾಗಬೇಕು. ಅವಶ್ಯಕತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಸೌಲಭ್ಯ ದೊರಕುವಂತೆ ಮಾಡಬೇಕು ಎಂದು ಹೇಳಿದರು. ಜಿಲ್ಲೆಯ ಪಿಡಿಒ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿದಂತೆ ಇನ್ನಿತರರಿದ್ದರು.