59 ಕೆರೆಗಳಿಗೆ ನೀರು ಪೂರೈಕೆ ಶೀಘ್ರ

12 Nandagudi 1 rm Veternary Hospitial
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಎನ್.ಹೊಸಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಪಶು ಇಲಾಖೆ ಉಪನಿರ್ದೇಶಕ ಡಾ.ಜಗದೀಶ್, ಇಒ ಡಾ.ಸಿ.ಎನ್.ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಬಿ.ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವೀಂದ್ರ, ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾರಾಯಣಗೌಡ ಇತರರು ಇದ್ದರು.
Published on

ಶಾಸಕ ಶರತ್ ಬಚ್ಚೇಗೌಡ ಭರವಸೆ -ಎನ್.ಹೊಸಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ

ನಂದಗುಡಿ: ನಂದಗುಡಿ, ಸೂಲಿಬೆಲೆ ಹೋಬಳಿಯಲ್ಲಿ ಅಂತರ್ಜಲ ಮಟ್ಟ ವೃದ್ಧಿಸಲು 2 ಹೋಬಳಿಗಳ 59 ಕೆರೆಗಳಿಗೆ ನೀರು ತುಂಬಿಸಿ, ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ವಾತಾವರಣ ಸೃಷ್ಟಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಹೋಬಳಿಯ ಎನ್.ಹೊಸಹಳ್ಳಿಯಲ್ಲಿ ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಶುಪಾನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅನುದಾನದಡಿ 50 ಲಕ್ಷ ರೂ. ವೆಚ್ಚದ ಪಶು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೃಷಿ ಹಾಗೂ ಹೈನೋದ್ಯಮ ಕ್ಷೀಣಿಸುತ್ತಿದ್ದರೂ, ಪಶು ಇಲಾಖೆ ಅಧಿಕಾರಿಗಳು ಹಾಗೂ ಹೈನು ಸಾಕಾಣೆದಾರರ ಶ್ರಮದ ಫಲವಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳ ಕಂಡಿರುವುದು ಪ್ರಶಂಸನೀಯ. ತಾಲೂಕಿನ ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಚಟುವಟಿಕೆಗಳೊಂದಿಗೆ ಹೈನುಗಾರಿಕೆಯನ್ನು ಒಂದು ಮುಖ್ಯ ಉಪ ಕಸುಬನ್ನಾಗಿಸಿ ಜೀವನ ಸಾಗಿಸುತ್ತಿದ್ದಾರೆ.

ಹೈನುಗಾರಿಕೆ ಪ್ರೋತ್ಸಾಹಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ ಎಂದರು.

ರಾಜ್ಯದೆಲ್ಲೆಡೆ ಒಂದೇ ಮಾದರಿಯ ಪಶು ಚಿಕಿತ್ಸಾಲಯಗಳನ್ನು ಹೊಂದಿರಬೇಕೆಂಬುದು ಸರ್ಕಾರದ ಆಶಯ. ತಾಲೂಕಿನಲ್ಲಿ 3 ಭಾಗಗಳಲ್ಲಿ ಪಶು ಆಸ್ಪತ್ರೆ ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ತಾಲೂಕಿನ 9 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಹೈನುಗಾರಿಕೆಯಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಜಿಲ್ಲಾ ಪಶು ಉಪನಿರ್ದೇಶಕ ಜಗದೀಶ್ ಮಾತನಾಡಿ, ಶಾಸಕರ ಅವಿರತ ಹೋರಾಟದ ಫಲವಾಗಿ ತಾಲೂಕಿಗೆ 3 ಪಶು ಆಸ್ಪತ್ರೆಗಳು ಮಂಜೂರಾಗಿದ್ದು, ಪ್ರಥಮವಾಗಿ ಎನ್.ಹೊಸಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇಲ್ಲಿನ ರೈತರ ಹಲವಾರು ವರ್ಷಗಳ ಬೇಡಿಕೆ ಈಡೇರಿದೆ ಎಂದರು.

ವಿಮೆ ಇಲ್ಲದ ರಾಸುಗಳಿಗೆ ಸಹಾಯಧನ: ಇಒ ಡಾ.ಸಿ.ಎನ್ .ನಾರಾಯಣಸ್ವಾಮಿ ಮಾತನಾಡಿ, ಕಾಲುಬಾಯಿ ರೋಗ, ಚರ್ಮಗಂಟು ರೋಗಕ್ಕೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿಮೆ ಇಲ್ಲದೆ ಹಸು ಸತ್ತರೆ ಹಾಗೂ ಕುರಿ ಸತ್ತರೆ ಇಲಾಖೆಯಿಂದ ಸಹಾಯಧನ ಕೊಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರ ರೈತರಿಗೆ ಹೈನುಗಾರಿಕೆ ನಡೆಸಲು ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ನಿರ್ದೇಶಕರಾದ ಧರ್ಮೇಶ್, ಎನ್.ಡಿ.ಬೈರೇಗೌಡ, ಉದ್ಯಮಿ ಎಂ.ಮಂದೀಪ್‌ಗೌಡ, ಗ್ರಾಪಂ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಉಪಾಧ್ಯಕ್ಷೆ ಮಜರ್‌ಉನ್ನೀಸಾ, ಸದಸ್ಯ ನಾರಾಯಣಸ್ವಾಮಿ, ಹೊಸಕೋಟೆ ಪಶು ಇಲಾಖೆಯ ಡಾ.ಮಂಜುನಾಥ್, ಡಾ.ಸತೀಶ್, ಪಿಡಿಒ

ಕೆಂಪಣ್ಣ, ಗುತ್ತಿಗೆದಾರ ವಿನಯ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net