ಕುಡಿವ ನೀರಿಗಾಗಿ ಮರವಂಜಿ ಗ್ರಾಪಂ ಕಚೇರಿಗೆ ಬೀಗ

Water, supply, protest,
Published on

ಚನ್ನಗಿರಿ: ಕುಡಿಯುವ ನೀರು ಪೂರೈಸುತ್ತಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾದ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ತಾಲೂಕಿನ ಮರವಂಜಿ ತಾಂಡಾದ ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಎಂ.ಎನ್. ಸಂತೋಷ್ ಮಾತನಾಡಿ, ತಾಪಂ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮರವಂಜಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ನೀಡಿದ್ದಾರೆ. ಆದರೆ, ಪ. ಜಾತಿ ಜನರು ವಾಸಿಸುವ ತಾಂಡಾಕ್ಕೆ ನೀರು ನೀಡದೆ ವಂಚನೆ ಮಾಡಿದ್ದಾರೆ ಎಂದು ಆಪಾದಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಮನೆಗೆ ನಲ್ಲಿ ನೀರು ಹೋಗುತ್ತದೆ. ನಮಗೆ ಬರುವುದಿಲ್ಲ. ಆದರೆ, ಮಹಿಳೆಯರು, ಮಕ್ಕಳು 2 ಕಿ.ಮೀ. ದೂರ ನಡೆದುಕೊಂಡು ಹೋಗಿ ನೀರು ತರಬೇಕಾಗಿದೆ. ಅಧಿಕಾರಿಗಳು ಗ್ರಾಮದತ್ತ ಒಮ್ಮೆಯೂ ನೋಡಿಲ್ಲ. ಕುಡಿಯುವ ನೀರು ಕೊಡುವ ತನಕ ಗ್ರಾಪಂ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಆಗ್ರಹಿಸಿದರು.

ಮರವಂಜಿ ತಾಂಡಾದಲ್ಲಿ ನಾಲ್ಕು ನೀರಿನ ಟ್ಯಾಂಕ್ ನಿರ್ಮಿಸಿ ಮನೆಗಳಿಗೆ ನೀರು ಕೊಡಲಾಗುತ್ತಿತ್ತು. ಆದರೆ, ಕಳೆದ ಸಾಲಿನಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ಅಳವಡಿಸಿದ ಮೇಲೆ ನೀರು ಇಲ್ಲದಂತಾಗಿದೆ. ಗ್ರಾಮದಲ್ಲಿ ಮೂವರು ಚುನಾಯಿತ ಸದಸ್ಯರಿದ್ದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ಚುನಾವಣೆ ಬಹಿಷ್ಕಾರ ಮಾಡಿದಾಗ ಗ್ರಾಮಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾರೊಬ್ಬರೂ ಬಂದಿಲ್ಲ. ಮೊದಲು ನಮಗೆ ಕುಡಿಯುವ ನೀರು ಕೊಡಿ ಎಂದು ಆಗ್ರಹಿಸಿದರು.

ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಡಿ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಮಂಜೂರಾದರೂ ಯಾವುದೇ ಕೆಲಸಗಳು ನಡೆದಿಲ್ಲ. ಆದರೆ, ಬಿಡುಗಡೆಯಾದ ಹಣ ಎಲ್ಲಿ ಹೋಯಿತು? ಎಂಬುದು ಯಾರಿಗೂ ಗೊತ್ತಿಲ್ಲ. ಗ್ರಾಮದ ಕೀರ‌್ಯಾನಾಯ್ಕ ಎಂಬುವವರ ಜಮೀನಿಗೆ ಹೋಗುವ ರಸ್ತೆ, ಮುಳ್ಡ ಬಸಪ್ಪ ಜಮೀನಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಇದೆ. ಯಾವುದೇ ಕೆಲಸ ನಡೆದಿಲ್ಲ. ಮಂಜೂರಾದ ಹಣ ಎಲ್ಲ ಹೋಯಿತು. ಈ ಬಗ್ಗೆ ತನಿಖೆ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ಬೀಗ ತೆರೆಯುವಂತೆ ಕೇಳಿಕೊಂಡರೂ. ತೆಗೆಯದೇ ಇದ್ದಾಗ ಅಧಿಕಾರಿಗಳು ಬೀಗ ಒಡೆದರು. ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಗ್ರಾಪಂ ಕಾರ್ಯ ನಿರ್ವಾಹಣಾಧಿಕಾರಿ ಪಿ.ಕೆ. ಉತ್ತಮ್ ಮಾತನಾಡಿ, ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು, ನೀರು ಕೊಡುವ ವ್ಯವಸ್ಥೆ ಮಾಡುತ್ತೇನೆ ಮತ್ತು ಕಾಮಗಾರಿ ಆಗದೆ ಇರುವ ಬಗ್ಗೆ ತನಿಖೆ ಮಾಡಿಸಲಾಗುವುದು ಮತ್ತು ಅಕ್ರಮವಾಗಿ ನಲ್ಲಿ ನೀರು ಪಡೆದವರ ವಿರುದ್ಧವೂ ಕ್ರಮ ಕೈಗೊಂಡು ನಲ್ಲಿ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಸ್ಥರಾದ ಎನ್. ಸಂದೀಪ, ಬಿ.ಎಸ್. ಗಿರೀಶ್, ಬಸವರಾಜ್ ನಾಯ್ಕ, ಯತೀಶ್, ಸಂಜು, ದಿನೇಶ್, ಲಕ್ಷ್ಮೀಬಾಯಿ, ಪಾಪಿಬಾಯಿ, ಅಮ್ನಿಬಾಯಿ, ಪುಷ್ಪಾ ಬಾಯಿ, ಈರೀಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net