

ಜಗಳೂರು: ಮುಂಬರುವ ಬೇಸಿಗೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳು ಕುಡಿವ ನೀರಿನ ಕೊರತೆಯನ್ನು ಎದುರಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಪಂ ಇಒ ಕೆಂಚಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ ಬೇಸಿಗೆಯಲ್ಲಿ ಕುಡಿವ ನೀರು ಪೂರೈಕೆ ಹಿನ್ನೆಲೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮ ಮಳೆಯಾಗಿ ಕೆರೆ, ಗೋಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ವೃದ್ಧಿಯಾಗಿದೆ. ಆದರೂ ಬೇಸಿಗೆ ಆರಂಭವಾಗಲಿದ್ದು, ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವುದರಿಂದ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ನಿಗಾ ವಹಿಸಬೇಕು. ತುರ್ತು ಇದ್ದರೆ ತಕ್ಷಣವೇ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದರು.
ಈವರೆಗೆ ಕುಡಿವ ನೀರಿನ ಕೊರತೆಯ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಕೆಲ ಪ್ರದೇಶಗಳಲ್ಲಿ ನೀರಿನ ಪೈಪ್ಲೈನ್ಗಳು ಹಾನಿಗೊಳಗಾಗಿರುವ ವರದಿಗಳು ಕೇಳಿಬಂದಿವೆ. ಸಂಬಂಧಿತ ಅಧಿಕಾರಿಗಳು ಕೂಡಲೇ ದುರಸ್ತಿ ಕಾರ್ಯಗಳನ್ನು ಕೈಗೊಂಡು ನೀರು ಸರಬರಾಜನ್ನು ಪುನಃ ಸ್ಥಾಪಿಸಬೇಕು ಎಂದು ತಿಳಿಸಿದರು.
ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್ಉಲ್ಲಾ ಮಾತನಾಡಿ, ಕುಡಿವ ನೀರಿನ ಅಭಾವ ಕಡಿಮೆ ಇದ್ದರೂ ನಿರ್ಲಕ್ಷಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಬಹುದಾದ 38 ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. ಸಣ್ಣ, ಪುಟ್ಟ ಸಮಸ್ಯೆಗಳಿದ್ದರೆ ಗ್ರಾಪಂ ಪಿಡಿಒಗಳು ಗಮನಹರಿಸಿ ಪರಿಹರಿಸುವ ಕೆಲಸ ಮಾಡಬೇಕು ಎಂದರು.
ಜೆಜೆಎಂ ಕಾಮಗಾರಿ ವಿಳಂಬ ಆರೋಪ: ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿವ ನೀರು ಪೂರೈಕೆ ಕಾಮಗಾರಿ ಬಹುತೇಕ ಗ್ರಾಮಗಳಲ್ಲಿ ವಿಳಂಬವಾಗಿವೆ. ಓವರ್ ಟ್ಯಾಂಕ್ಗಳು ಪೂರ್ಣಗೊಂಡಿಲ್ಲ. ಕಾಮಗಾರಿಗಳು ಬೇಕಾಬಿಟ್ಟಿಯಾಗಿ ನಡೆದಿವೆ. ಆದಷ್ಟು ಬೇಗ ಸರಿಪಡಿಸಬೇಕು. ಇಲ್ಲದಿದ್ದರೆ ಜನರಿಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ದೂರಿದರು.
ಎಇಇ ಸಾದಿಕ್ಉಲ್ಲಾ ಪ್ರತಿಕ್ರಿಯಿಸಿ, ಕಾಮಗಾರಿ ಪೂರ್ಣಗೊಂಡಿದೆ. ತಾಂತ್ರಿಕ ಕಾರಣಗಳಿಂದ ಕೆಲವು ಕಡೆ ಸಮಸ್ಯೆಯಾಗಿದೆ. ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿ ಸರಿಪಡಿಸಲಾಗುವುದು. ತೊಂದರೆ ಕಂಡು ಬಂದರೆ ತಕ್ಷಣವೇ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಇಒ ಬೀರೇಂದ್ರಕುಮಾರ್, ನರೇಗಾ ಎಡಿಎ ಮರುಳಸಿದ್ದಪ್ಪ, ಪಿಡಿಒ ಅರವಿಂದ್, ಶಿವಕುಮಾರ್, ಕೊಟ್ರೇಶ್, ಸುನೀತಾ ಇತರರಿದ್ದರು.