

ಆಲಮಟ್ಟಿ (ವಿಜಯಪುರ) : ಜಲಾಶಯದ ಒಳಹರಿವು ಇರುವವರೆಗೆ ಮಳೆಯನ್ನಾಧರಿಸಿ ಸತತವಾಗಿ ಹಾಗೂ ಒಳಹರಿವು ಸ್ಥಗಿತವಾದ ನಂತರ 14 ದಿನ ಚಾಲೂ ಹಾಗೂ 8 ದಿನ ಬಂದ್ ಪದ್ಧತಿ ಅನುಸರಿಸಿ ಜು. 26ರಿಂದ ನವೆಂಬರ್ 23ರ ವರೆಗೆ ಮುಂಗಾರು ಹಂಗಾಮಿಗೆ ಕಾಲುವೆಗಳಿಗೆ ನೀರು ಪೂರೈಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಕೆಬಿಜೆಎನ್‌ಎಲ್ ವ್ಯವಸ್ಥಾಪಕರ ಕಚೇರಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿನ ಪ್ರಸ್ತುತ ಲಭ್ಯವಿರುವ ನೀರಿನ ಲೆಕ್ಕಾಚಾರ ಬಗ್ಗೆ ಚರ್ಚಿಸಿದ ಬಳಿಕ ಮುಂಗಾರು ಹಂಗಾಮಿಗೆ ಜು.26ರಿಂದಲೇ ಅನ್ವಯವಾಗುವಂತೆ ಕಾಲುವೆಗಳಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಸಮಿತಿ ಸಭೆಯಲ್ಲಿ ನೀರಿನ ಲಭ್ಯತೆ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಮುಂಗಾರು ಹಂಗಾಮಿನ 120 ದಿನಗಳಿಗೆ ಯೋಜನಾ ವರದಿಯಂತೆ 67 ಟಿಎಂಸಿ ನೀರಿನ ಪ್ರಮಾಣದ ಅಗತ್ಯವಿದೆ. ಅಗತ್ಯ ಬಳಕೆಗೆ ಮುಂಗಾರು ಹಂಗಾಮಿಗೆ 13 ಟಿಎಂಸಿ ನೀರು ಬೇಕಾಗುತ್ತದೆ. ಇವೆರಡೂ ಸೇರಿ ಒಟ್ಟು ಬಳಕೆಗೆ 80 ಟಿಎಂಸಿ ನೀರು ಬೇಕಾಗುತ್ತದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ನೀರಿನ ಪ್ರಮಾಣ ಜಲಾಶಯದಲ್ಲಿ ಸಂಗ್ರಹಣೆಯಾಗಿದೆ. ಮುಂಬರುವ ದಿನಗಳಲ್ಲಿ ಒಳಹರಿವನ್ನು ಗಮನದಲ್ಲಿರಿಸಿಕೊಂಡು ಮುಂಗಾರು ಹಂಗಾಮಿಗೆ ಅಚ್ಚುಕಟ್ಟು ಪ್ರದೇಶದ ಕಾಲುವೆ ಜಾಲಗಳಿಗೆ ನೀರು ಹರಿಸಲಾಗುತ್ತದೆ. ಮುಂಗಾರು ಮುಗಿದ ಕೂಡಲೇ ಕ್ಲೋಸರ್ ವರ್ಕ್ ಪೂರ್ಣಗೊಳಿಸಲು ಕೂಡ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಸಚಿವರು ತಿಳಿಸಿದರು.
ರೈತರಲ್ಲಿ ಮನವಿ : ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಬೇಕು. ಹಿತಮಿತವಾಗಿ ನೀರು ಬಳಸುವ ಮೂಲಕ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಸಚಿವ ಸಿ. ಸಿ. ಪಾಟೀಲ ಮನವಿ ಮಾಡಿದರು.
ಎರಡೂ ಜಲಾಶಯಗಳಲ್ಲಿಯ ನೀರಿನ ಪ್ರಮಾಣ ಗಮನದಲ್ಲಿರಿಸಿಕೊಂಡು 2022-23ನೇ ಸಾಲಿಗೆ ಹಿಂಗಾರು ಹಂಗಾಮಿನ ನೀರು ಪೂರೈಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ನವೆಂಬರ್ ತಿಂಗಳಲ್ಲಿ ಮತ್ತೆ ಸಭೆ ನಡೆಸಲು ಸಮಿತಿ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ಅರಣ್ಯ, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಶಾಸಕರಾದ ಅಮರೇಗೌಡ ಬಯ್ಯಪುರ, ರಮೇಶ ಭೂಸನೂರ, ಶಿವನಗೌಡ ನಾಯಕ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ, ಬಸನಗೌಡ ದದ್ದಲ್, ಡಿ.ಎಸ್. ಹೂಲಗೇರಿ, ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ, ಪಿ. ಸುನೀಲಕುಮಾರ್, ನಿಗಮದ ಮುಖ್ಯ ಇಂಜಿನಿಯರ್ ಎಚ್. ಸುರೇಶ, ಅಧೀಕ್ಷಕ ಇಂಜಿನಿಯರ್ ಬಿ. ಬಸವರಾಜ ಭಾಗವಹಿಸಿದ್ದರು.
ಕಾಲುವೆಗೆ ನೀರು ಹರಿಸುವ ವೇಳಾಪಟ್ಟಿ
ಚಾಲೂ ಅವಧಿ
27.07.2022- 09.08.2022
18.08.2022- 31.08.2022
09.09.2022- 22.09.2022
01.10.2022- 14.10.2022
23.10.2022 -05.11.2022
14.11.2022 -23.11.2022
ಬಂದ್ ಅವಧಿ
10.08.2022- 17.08.2022
01.09.2022 -08.09.2022
23.9.2022 - 30.09.2022
15.10.2022 - 22.10.2022
06.11.2022 - 13.11.2022