ಅಸಮರ್ಪಕ ನೀರು ಪೂರೈಕೆ ಬಾಳ್ನಿ ಪ್ರತಿಭಟನೆ

Water-Strike
Published on

ಕಾರವಾರ: ಅಸಮರ್ಪಕ ಕುಡಿಯುವ ನೀರಿನ ಪೂರೈಕೆಯನ್ನು ಖಂಡಿಸಿ ತಾಲೂಕಿನ ಬಾಳ್ನಿ ಗ್ರಾಮಸ್ಥರು ಸೋಮವಾರ ಗೋಟೆಗಾಳಿ ಕುಡಿಯುವ ನೀರಿನ ಘಟಕದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಬೇಸಿಗೆಯ ಬಿಸಿ ಹೆಚ್ಚಿದೆ. ನೀರಿನ ವಿಪರೀತ ಬೇಡಿಕೆ ಇದೆ. ಬಾವಿಗಳು ಬತ್ತಿವೆ. ಇಂಥ ಸಂದರ್ಭದಲ್ಲಿ ಗೋಟೆಗಾಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 3 ದಿನಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ ಎಂದು ಗ್ರಾಮಸ್ಥರು ಆಕ್ಷೇಪಿಸಿದರು. ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಬಾಳ್ನಿ ಗ್ರಾಮದ ಅಭಿವೃದ್ಧಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದಲೇ ಕಾಳಿ ನದಿಯ ಬಲ ದಂಡೆಯ ಹಲವು ಗ್ರಾಮ ಪಂಚಾಯಿತಿಗಳಿಗೆ ನೀರು ಪೂರೈಸಲಾಗುತ್ತದೆ. ಆದರೆ, ಗೋಟೆಗಾಳಿ ಗ್ರಾಪಂ ವ್ಯಾಪ್ತಿಯಲ್ಲೇ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಬಾಳ್ನಿ ಗ್ರಾಮದಲ್ಲಿ ಎಲ್ಲ ಮನೆಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಕಳೆದ ಐದಾರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದೇವೆ. ಅದರ ನಂತರ ಈಗ ಒಂದು ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ.
ಜಲ ಜೀವನ ಮಿಷನ್ ಯೋಜನೆಯಡಿ ಹಳೆಯ ಟ್ಯಾಂಕ್ ಹಾಗೂ ಪೈಪ್‌ಲೈನ್‌ಗೇ ಹೊಸ ಸಂಪರ್ಕ ನೀಡಲಾಗುತ್ತಿದೆ. ಮೂರು ದಿನದ ಹಿಂದೆ ಪೈಪ್ ಒಡೆದು, ಗೋಟೆಗಾಳಿ ಕುಡಿಯುವ ನೀರು ಮೂರು ದಿನ ಪೂರೈಕೆ ಇರಲಿಲ್ಲ. ಈ ಹಿಂದೆಯೂ ಹಲವು ಬಾರಿ ಮತ್ತೆ, ಮತ್ತೆ ಮಷಿನ್, ಪೈಪ್‌ಲೈನ್ ಹಾಳಾಗುತ್ತಿದೆ ಈ ಸಮಸ್ಯೆಯನ್ನು ಮೊದಲು ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಉದಯಕಾಂತ ನಾಯ್ಕ, ಅಶೋಕ ರಾಮದಾಸ ಗಾಂವಕರ್, ಸತೀಶ ಮಿರಾಶಿ, ಶಂಕರ ನಾಯ್ಕ, ರಮಾಕಾಂತ ನಾಯ್ಕ, ಜಗದೀಶ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net