

ಚಿತ್ರದುರ್ಗ: ಪ್ರಸಕ್ತ ಬಾರಿಯ ಶೋಭಕೃತ್ ಸಂವತ್ಸರದ ‘ಯುಗಾದಿ’ ಹಬ್ಬವನ್ನು ಸಂತಸದಿಂದ ಸ್ವಾಗತಿಸಿದ ಕೋಟೆನಗರಿಯ ಮಂದಿ ಚಂದ್ರದರ್ಶನ ಪಡೆದ ಮರುದಿನ ನೀರೆರಚುವ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಶುಕ್ರವಾರ ನಗರದ ವಿವಿಧ ಬಡಾವಣೆಗಳಲ್ಲಿ ಚಿಣ್ಣರು, ಮಹಿಳೆಯರು, ತರುಣ-ತರುಣೆಯರು ಪರಸ್ಪರ ನೀರು ಎರಚಿ ಸಡಗರದಲ್ಲಿ ಕುಣಿದು ಕುಪ್ಪಳಿಸಿದರು. ಹೊಸದಾಗಿ ನೆಂಟರಾದವರು ಅದರಲ್ಲೂ ಅತ್ತೆ, ಮಾವ, ಅಳಿಯ, ಸೊಸೆಯಂದಿರು ಹೆಚ್ಚಾಗಿ ಪಾಲ್ಗೊಂಡು ಸಂಭ್ರಮಸಿದರು.
ದೊಡ್ಡಪೇಟೆ, ಚಿಕ್ಕಪೇಟೆ, ಕೋಳಿ ಬುರುಜನಹಟ್ಟಿ, ಕೆಳಗೋಟೆ, ಬುರುಜನಹಟ್ಟಿ, ಪ್ರಶಾಂತ ನಗರ, ಜೋಗಿಮಟ್ಟಿ ರಸ್ತೆ, ಹೊಳಲ್ಕೆರೆ ರಸ್ತೆ, ಮುನ್ಸಿಪಲ್ ಕಾಲನಿ, ಗೋಪಾಲಪುರ ರಸ್ತೆ, ದರ್ಜೆ ಕಾಲನಿ, ಧರ್ಮಶಾಲಾ ರಸ್ತೆ, ಗಾರೆಹಟ್ಟಿ, ಫಿಲ್ಟರ್ ಹೌಸ್, ಕೋಟೆ ಮಾರ್ಗ ಸೇರಿ ಗ್ರಾಮೀಣ ಭಾಗಗಳಲ್ಲೂ ಜನ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೂ ನೀರೆರಚುವ ಆಟವಾಡಿದರು.
ಸುಣ್ಣದ ಗುಮ್ಮಿ, ಕರುವಿನಕಟ್ಟೆ, ಉಜ್ಜಿನಿಮಠದ ರಸ್ತೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮೂಹ ನೀರೆರಚುವ ಆಟದಲ್ಲಿ ತೊಡಗಿಸಿಕೊಂಡಿತ್ತು. ನೆರೆಹೊರೆಯ ಮನೆಯವರಿಗೆ, ಸ್ನೇಹಿತರಿಗೂ ಎರಚಿ ಖುಷಿಪಟ್ಟರು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಗೆಳೆಯರನ್ನು ತಡೆದು ನೀರೆರಚಾಡಿದರು. ಬೇಸಿಗೆಯಲ್ಲಿ ನೀರಿನ ಬವಣೆಯ ನಡುವೆಯೂ ಹಬ್ಬದಾಟ ಹಲವೆಡೆ ಜೋರಾಗಿಯೇ ನಡೆಯಿತು.
ವರ್ಷದಡುಗು ಆಚರಣೆ
ಯುಗಾದಿಯಂದು ಸಿಹಿಯೂಟ ಸವಿದ ಮೇಲೆ ಮಾಂಸಾಹಾರ ಪ್ರಿಯರಿಗೆ ಮಾರನೇ ದಿನ ಮೀಸಲಾಗಿದ್ದು, ಸಿಹಿ-ಖಾರಗಳೆರಡೂ ವರ್ಷಪೂರ್ತಿ ದೊರಕಲೆಂಬ ಆಶಯದೊಂದಿಗೆ ಜಿಲ್ಲೆಯ ಹಲವೆಡೆ ವರ್ಷದಡುಗು ಆಚರಿಸಲಾಯಿತು.