

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯವರೆ ಆದ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಹಣಕಾಸು ಸಚಿವವರೂ ಆಗಿರುವ ಅವರು 15ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಈ ಬಾರಿಯ ಆಯ-ವ್ಯಯದಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಗಳು ಸಿಗಬಹುದೆಂಬ ನಿರೀಕ್ಷೆ ಹೆಚ್ಚಿದೆ. ಆದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಘೋಷಣೆಯಾಗಿದ್ದ ಮಹತ್ವ್ವಾಕಾಂಕ್ಷೆಯ ಯೋಜನೆಯೊಂದು ಘೋಷಣೆ ಹಂತದಲ್ಲಿಯೇ ಉಳಿದಿದೆ.
ನಗರದಲ್ಲಿ ‘ಜಲ ಸಾಹಸ ಕ್ರೀಡಾ ಕೇಂದ್ರ’ ಸ್ಥಾಪನೆ ಘೋಷಣೆ ಹಂತದಲ್ಲಿಯೇ ಕೊನೆಗೊಂಡಿದೆ. 8 ವರ್ಷಗಳ ಹಿಂದೆಯೇ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ ವರುಣ ಕೆರೆಯಲ್ಲಿ ಶಾಶ್ವತ ‘ಜಲ ಸಾಹಸ ಕ್ರೀಡಾ ಕೇಂದ್ರ’ ಸ್ಥಾಪಿಸುವ ಯೋಜನೆ ಭರವಸೆಯಾಗಿಯೇ ಉಳಿದಿದೆ. ಇದಕ್ಕಾಗಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಆಯ-ವ್ಯಯದಲ್ಲಿ 5 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಇಷ್ಟು ಹೊತ್ತಿಗೆ ಕೇಂದ್ರ ಸ್ಥಾಪನೆಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಿತ್ತು. ಆದರೆ ಯೋಜನೆ ಪ್ರಾರಂಭದ ಹಂತದಲ್ಲೇ ನಿಂತಿದೆ.
ಸಾಹಸ ಪ್ರಿಯರಿಗೆ ದಸರಾ ಮಹೋತ್ಸವದ ದಿನಗಳಲ್ಲಿ ಮಾತ್ರ ಸಿಗುತ್ತಿದ್ದ ಜಲಸಾಹಸ ಕ್ರೀಡೆಗಳ ಖುಷಿ ಈ ಯೋಜನೆ ಮೂಲಕ ವರ್ಷಪೂರ್ತಿ ಸಿಗಬೇಕಿತ್ತು. ಆದರೆ, ಸದರಿ ಯೋಜನೆ ಏನಾಗಿದೆ ಎಂಬ ಮಾಹಿತಿಯೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಇಲ್ಲವಾಗಿದೆ. ‘ಶಾಶ್ವತ ಜಲ ಸಾಹಸ ಕ್ರೀಡಾ ಕೇಂದ್ರ ಯೋಜನೆ ಬಗ್ಗೆ ತಮ್ಮ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ. ಯೋಜನೆ ಘೋಷಣೆಯಾಗಿದೆ ಅಷ್ಟೇ, ಅದು ಜಾರಿಯಾಗಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದ್ದರಿಂದ 15ನೇ ಬಾರಿಗೆ ಬಜೆಟ್ ಮಂಡನೆ ಸಿದ್ಧರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಹೊಸ ಹೊಸ ಯೋಜನೆ ನೀಡುವ ಜತೆಗೆ ಈ ಹಿಂದೆ ತಮ್ಮ ಅವಧಿಯಲ್ಲೇ ಘೋಷಣೆಯಾಗಿ ಜಾರಿಯಾಗದ ಯೋಜನೆಗಳ ಜಾರಿಗೂ ಕ್ರಮ ಕೈಗೊಳ್ಳಬೇಕಿದೆ.
ಗೋವಾ ಮತ್ತಿತರ ಬೀಚ್‌ಗಳಲ್ಲಿ ಜಲ ಸಾಹಸ ಕ್ರೀಡೆಗೆ ಮಹತ್ವ ನೀಡಿರುವುದರಿಂದ ಹೆಚ್ಚಿನ ಜನರು ಅಲ್ಲಿಗೆ ಹೋಗಲು ಬಯಸುತ್ತಾರೆ. ಕಡಲ ಕಿನಾರೆಯ ಬಹುತೇಕ ಸ್ಥಳಗಳಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರ ಸ್ಥಾಪಿಸಿ ಸಾಹಸಪ್ರಿಯರು, ಕ್ರೀಡಾಪಟುಗಳು ಹಾಗೂ ಪ್ರವಾಸಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅದಕ್ಕಾಗಿ ವಿದೇಶಗಳಿಂದಲೂ ಜನರು ಬರುತ್ತಾರೆ. ಈಗಂತೂ ಎಲ್ಲೆಡೆ ಸಾಹಸ ಕ್ರೀಡೆಗಳತ್ತ ಜನರ ಆಸಕ್ತಿ ಹೆಚ್ಚುತ್ತಿದೆ. ಹೀಗಾಗಿ ಜಲ ಸಾಹಸಪ್ರಿಯರ ಜತೆಗೆ ಪ್ರವಾಸೋದ್ಯಮಕ್ಕೂ ನೆರವಾಗಲಿ ಎಂಬ ಉದ್ದೇಶದಿಂದ 2013-18ನೇ ಸಾಲಿನ ಕಾಂಗ್ರೆಸ್ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ತಿ.ನರಸೀಪುರ ರಸ್ತೆಯ ವರುಣ ಕೆರೆಯಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಉಳಿದ ಹಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಭರಿಸಲು ಚಿಂತಿಸಬೇಕು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.
ಜಲ ಸಾಹಸ ಕ್ರೀಡೆಗಳಾದ ಪ್ಯಾರಾಸೈಲಿಂಗ್, ವಾಟರ್ ಜೆಟ್, ಫ್ರೋಟಿಂಗ್ ಜೆಟ್, ಕೆನೊಯಿಂಗ್, ವಿಂಡ್ ಸರ್ಫಿಂಗ್, ಜೆಟ್‌ಸ್ಕೀ ರೈಡ್, ರ‌್ಯಾಫ್ಟಿಂಗ್, ಬನಾನಾ ರೈಡ್, ಸ್ಪೀಡ್ ಬೋಟ್, ಕಯಾಕಿಂಗ್‌ಗಳನ್ನು ಆಯೋಜಿಸಲು ಉದ್ದೇಶಿಸಲಾಗಿತ್ತು. ವರುಣ ಕೆರೆ ನಗರದಿಂದ 10 ಕಿ.ಮೀ. ದೂರದಲ್ಲಿದ್ದು, ಸುಮಾರು 165 ಎಕರೆ ಪ್ರದೇಶದಲ್ಲಿರುವ ಈ ಕೆರೆಯಲ್ಲಿ ವರ್ಷಪೂರ್ತಿ ನೀರಿರುತ್ತದೆ. ಈಗಾಗಲೇ ಸಾಕಷ್ಟು ಸವಲತ್ತುಗಳಿವೆ. ಜತೆಗೆ ಇನ್ನಷ್ಟು ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ವಿಶಾಲ ಸ್ಥಳಾವಕಾಶ ಹಾಗೂ ಈ ಭಾಗಕ್ಕೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೆರೆಯು ಮೈಸೂರು-ತಿ.ನರಸೀಪುರ ಹೆದ್ದಾರಿ ಬದಿಯಲ್ಲೇ ಇರುವುದು ಕೇಂದ್ರ ಸ್ಥಾಪನೆಗೆ ಸೂಕ್ತವಾಗಿತ್ತು.
ಒಂದು ವೇಳೆ ವರುಣ ಕೆರೆಯಲ್ಲಿ ಜಲ ಸಾಹಸ ಕ್ರೀಡಾ ಕೇಂದ್ರ ಸ್ಥಾಪನೆಯಾಗಿದ್ದರೆ ಮೈಸೂರು ಭಾಗದ ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತಿತ್ತು. ಜಲ ಸಾಹಸ ಕ್ರೀಡೆಗಳ ಥ್ರಿಲ್‌ಗಾಗಿ ಅನೇಕ ಸಾರ್ವಜನಿಕರು ಮಂಗಳೂರು, ಗೋವಾಗಳಿಗೆ ಹೋಗುತ್ತಿದ್ದಾರೆ. ನಮ್ಮಲ್ಲಿಯೇ ಅಂತಹ ಕೇಂದ್ರ ಆರಂಭವಾಗಿದ್ದರೆ, ಮೈಸೂರಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿತ್ತು.
ಮೈಸೂರು-ತಿ.ನರಸೀಪುರ ಹೆದ್ದಾರಿಯ ವರುಣ ಕೆರೆಯಲ್ಲಿ ಶಾಶ್ವತ ‘ಜಲ ಸಾಹಸ ಕ್ರೀಡಾ ಕೇಂದ್ರ’ ಸ್ಥಾಪಿಸುವ ಯೋಜನೆ ಬಗ್ಗೆ ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ.ಭಾಸ್ಕರ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ 15ನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಜೆಟ್‌ನಲ್ಲಿ ಮೈಸೂರಿಗೆ ಹೊಸ ಯೋಜನೆ ನೀಡುವ ಜತೆಗೆ ಈ ಹಿಂದೆ ತಮ್ಮ ಅವಧಿಯಲ್ಲೇ ಘೋಷಣೆಯಾಗಿ ಜಾರಿಯಾಗದ ಯೋಜನೆಗಳ ಜಾರಿಗೂ ಕ್ರಮ ಕೈಗೊಳ್ಳಬೇಕಿದೆ. ಮುಖ್ಯವಾಗಿ ಈ ಹಿಂದೆ ಅವರೇ ಘೋಷಣೆ ಮಾಡಿದ್ದ ಶಾಶ್ವತ ‘ಜಲ ಸಾಹಸ ಕ್ರೀಡಾ ಕೇಂದ್ರ’ ಸ್ಥಾಪಿಸಲು ಮುಂದಾಗಬೇಕು.ಹರೀಶ್‌ಗೌಡ, ಸಾರ್ವಜನಿಕ