ಜಲಕ್ರೀಡೆ: ಫಿಟ್‌ನೆಸ್ ಪ್ರಮಾಣಪತ್ರ ಪಡೆದು ಕಾರ್ಯನಿರ್ವಹಿಸಿ

rafting
Published on

ಮಡಿಕೇರಿ: ಜಿಲ್ಲೆಯ ದುಬಾರೆ ಹಾಗೂ ಬರಪೊಳೆಯಲ್ಲಿ ರಿವರ್ ರ‌್ಯಾಪ್ಟಿಂಗ್(ಜಲಕ್ರೀಡೆ) ನಡೆಸುವ ರ‌್ಯಾಪ್ಟ್ ಮಾಲೀಕರು ಕಡ್ಡಾಯವಾಗಿ ಪರವಾನಗಿ ನವೀಕರಣ ಹಾಗೂ ಫಿಟ್‌ನೆಸ್ ಪ್ರಮಾಣಪತ್ರ ಪಡೆದು ಜಲಕ್ರೀಡೆ ನಡೆಸಲು ರಿವರ್ ರ‌್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಹಾರಂಗಿ ಜಲಾಶಯದ ಬಳಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ರಿವರ್ ರ‌್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ರಿವರ್ ರ‌್ಯಾಪ್ಟಿಂಗ್ ಸ್ಥಳದ ಟಿಕೆಟ್ ಕೌಂಟರ್ ಪ್ರದೇಶದಲ್ಲಿ ಸೆಲ್ಟರ್ ಅಳವಡಿಕೆ, ಪ್ರವಾಸಿಗರ ಸುರಕ್ಷತೆಗೆ ಸೋಪಾನ್ ಕಟ್ಟೆ ರೈಲಿಂಗ್ಸ್ ಅಳವಡಿಕೆ, ಗೈಡ್‌ಗಳ ಬಟ್ಟೆ ಬದಲಿಸುವ ಕೊಠಡಿ, ಬೆಂಚ್‌ಗಳ ಅಳವಡಿಕೆ, ಕುಡಿಯುವ ನೀರು, ಮಾಹಿತಿ ಫಲಕ, ಶೌಚಾಲಯ ನಿರ್ಮಾಣ ಜೊತೆಗೆ ಸಿಸಿಟಿವಿ ಅಳವಡಿಕೆಗೆ ಸಭೆಯಲ್ಲಿ ಅನುಮೋದಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ರಿವರ್ ರ‌್ಯಾಪ್ಟಿಂಗ್ ಸಂದರ್ಭದಲ್ಲಿ ಪ್ರತಿಯೊಬ್ಬರ ಸುರಕ್ಷತೆ ಮತ್ತು ಜೀವರಕ್ಷಣೆ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ರಿವರ್ ರ‌್ಯಾಪ್ಟ್‌ಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ಕಡ್ಡಾಯವಾಗಿ ಪಡೆಯಬೇಕು. ಜೊತೆಗೆ ಪ್ರತೀ ವರ್ಷ ನವೀಕರಣ ಮಾಡಿಕೊಳ್ಳಬೇಕು. ನಂತರ ರಿವರ್ ರ‌್ಯಾಪ್ಟಿಂಗ್ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಮುಂಗಾರು ಸಂದರ್ಭದಲ್ಲಿ ಜಲಪಾತ ವೀಕ್ಷಣೆ ಹಾಗೂ ಜಲಸಾಹಸ ಕ್ರೀಡೆ ಒಂದು ಆಕರ್ಷಣೀಯ ಹಾಗೂ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಿವರ್ ರ‌್ಯಾಪ್ಟಿಂಗ್ ಒಂದು ಭಾಗವಾಗಿದ್ದು, ಆ ನಿಟ್ಟಿನಲ್ಲಿ ರಿವರ್ ರ‌್ಯಾಪ್ಟಿಂಗ್ ಸಂದರ್ಭದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕರು ತಿಳಿಸಿದರು.

ರ‌್ಯಾಪ್ಟಿಂಗ್ ಫಿಟ್‌ನೆಸ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ) ಯಿಂದ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಿದರು. ಜೊತೆಗೆ ಪೊಲೀಸ್ ಇಲಾಖೆಯಿಂದಲೂ ಸಹ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಹೇಳಿದರು.

ಜಲಕ್ರೀಡೆ ಸಂದರ್ಭದಲ್ಲಿ ಜೀವರಕ್ಷಕ ಜಾಕೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಗೈಡ್‌ಗಳು ಕೌಶಲ್ಯ ಪರೀಕ್ಷೆ ಮಾಡಿಸಿರಬೇಕು. ಸಮವಸ್ತ್ರವನ್ನು ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕರು ಸೂಚಿಸಿದರು.

ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ನಿಟ್ಟಿನಲ್ಲಿ ಹುಣಸೂರು ತಾಲೂಕಿನ ಬಿಳಿಕೆರೆ, ಮೈಸೂರು ರಸ್ತೆಯ ಹುಣಸೂರು-ಗೋಣಿಕೊಪ್ಪ ಜಂಕ್ಷನ್, ಪಿರಿಯಾಪಟ್ಟಣ ಸಿದ್ದಾಪುರ ಬಳಿಯ ಜಂಕ್ಷನ್‌ಗಳಲ್ಲಿ ಸೈನ್‌ಬೋರ್ಡ್‌ಗಳನ್ನು ಅಳವಡಿಸುವಂತೆ ಡಾ.ಮಂತರ್ ಗೌಡ ಅವರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ರಿವರ್ ರ‌್ಯಾಪ್ಟಿಂಗ್ ಸಂದರ್ಭದಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಕೊಡಗು ಜಿಲ್ಲೆಯ ಇಡೀ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕು. ರಿವರ್ ರ‌್ಯಾಪ್ಟಿಂಗ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಲಸಾಹಸ ಕ್ರೀಡೆ ನಡೆಸುವ ಗೈಡ್‌ಗಳು ಸೂಕ್ತ ತರಬೇತಿ ಪಡೆದಿರಬೇಕು. ಹಾಗೆಯೇ ವೃತ್ತಿ ಕೌಶಲ್ಯ ಹೊಂದಿರಬೇಕು. ಜೊತೆಗೆ ಜೇತ್ನ ಸಂಸ್ಥೆ ಈ ಬಗ್ಗೆ ದೃಡೀಕರಿಸಬೇಕು. ಸೋಮವಾರಪೇಟೆ ತಾಲೂಕಿನ ಕುಮಾರಳ್ಳಿ(ಬೀದಳ್ಳಿ) ರಿವರ್‌ರ‌್ಯಾಪ್ಟಿಂಗ್ ನಡೆಸುವ ಸಂಬಂಧ ಈಗಾಗಲೇ ಅನುಮತಿ ನೀಡಲಾಗಿದೆ. ಆದರೆ, ಇನ್ನೂ ಕಾರ್ಯರೂಪಕ್ಕೆ ಬರದಿರುವ ಹಿನ್ನೆಲೆ ಸ್ಥಳಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅನಿತಾ ಭಾಸ್ಕರ್ ಮಾತನಾಡಿ, ದುಬಾರೆಯಲ್ಲಿ ಒಟ್ಟು ೭೫ ರ‌್ಯಾಪ್ಟಿಂಗ್ ಕಾರ್ಯನಿರ್ವಹಿಸುತ್ತಿದ್ದು, ಬರಪೊಳೆಯಲ್ಲಿ ೨೪ ರ‌್ಯಾಫ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೪-೨೯ ರಡಿ ಜಲ ಸಾಹಸ ಕ್ರೀಡೆಯಲ್ಲಿ ಒಂದಾದ ಕಾಯಕಿಂಗ್ ನಡೆಸಲು ಅವಕಾಶವಿದೆ. ಈ ಸಂಬಂಧ ಜಿಲ್ಲೆಯಲ್ಲಿ ೧೧ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಮಾಹಿತಿ ನೀಡಿದರು.

ಹೇಮಾವತಿ ನದಿ ಪಾತ್ರ ಕೊಡ್ಲಿಪೇಟೆ ದೊಡ್ಡಕುಂದ, ಹಟ್ಟಿಹೊಳೆ ಬಳಿಯ ದೇವಸ್ತೂರು ನದಿ, ಕಾವೇರಿ ನದಿ ಪಾತ್ರದ ಐವತ್ತೊಕ್ಲು, ಹೊದ್ದೂರು, ಹಾರಂಗಿ ಹಿನ್ನೀರು ಪ್ರದೇಶದ ಹೆರೂರು, ನಾಕೂರು ಶಿರಂಗಾಲ, ಬೈರಂಪಾಡ, ಚಿಕ್ಕಬೆಟ್ಟಗೇರಿ ಈ ಪ್ರದೇಶಗಳಲ್ಲಿ ಕಾಯಕಿಂಗ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ಸಂಬಂಧ ಕಾರ್ಯಸಾಧ್ಯತಾ ವರದಿ ನೋಡಿಕೊಂಡು ಮುಂದಿನ ಕ್ರಮವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಜೇನು ಕುರುಬ ಜನಾಂಗದ ಯುವಕರಿಗೆ ರ‌್ಯಾಪ್ಟಿಂಗ್ ಸಲಕರಣೆಗಳನ್ನು ವಿತರಿಸಲು ತಲಾ ೨ ಲಕ್ಷ ರೂ.ನಂತೆ ೯ ಜನ ಫಲಾನುಭವಿಗಳಿಗೆ ೧೮ ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಯುವಕರು ಈಗಾಗಲೇ ತಲಾ ಒಂದು ರ‌್ಯಾಪ್ಟ್ ಖರೀದಿ ಮಾಡಿದ್ದಾರೆ. ಈ ಸಂಬಂಧ ದುಬಾರೆಯಲ್ಲಿ ರ‌್ಯಾಪ್ಟಿಂಗ್ ನಡೆಸಲು ಪರವಾನಗಿ ನೀಡುವಂತೆ ಕೋರಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಹೊಸದಾಗಿ ರಿವರ್ ರ‌್ಯಾಪ್ಟಿಂಗ್ ನಡೆಸಲು ಅನುಮತಿಗಾಗಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವ ಹಿನ್ನೆಲೆ ಈಗಾಗಲೇ ರಿವರ್ ರ‌್ಯಾಪ್ಟಿಂಗ್ ನಡೆಸುತ್ತಿರುವವರು ಹೊಸದಾಗಿ ರಿವರ್ ರ‌್ಯಾಪ್ಟಿಂಗ್‌ಗೆ ಅನುಮತಿ ನೀಡಬಾರದು ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಸದ್ಯ ತೀರ್ಪು ಪ್ರಕಟವಾದ ನಂತರ ಮುಂದಿನ ಕ್ರಮ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಿವರ್ ರ‌್ಯಾಪ್ಟಿಂಗ್ ನಡೆಸುವವರು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಕೌಶಲ್ಯ ತರಬೇತಿ ಪಡೆಯಲು ಇದೇ ಸಂದರ್ಭದಲ್ಲಿ ಸಲಹೆ ನೀಡಲಾಯಿತು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಉಪ ಅರಣ್ಯ ಸಂರಕ್ಷಾಣಧಿಕಾರಿ ಅಭಿಷೇಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಅರಣ್ಯ ಇಲಾಖೆಯ ರತನ್, ಅಗ್ನಿಶಾಮಕ ಅಧಿಕಾರಿ ರಾಜೇಶ್, ಜೇತ್ನಾ ಸಂಸ್ಥೆಯ ಕೀರ್ತಿ ಪಯಾಸ್, ದುಬಾರೆ ರಿವರ್ ರ‌್ಯಾಪ್ಟಿಂಗ್‌ನ ವಿಜು ಚಂಗಪ್ಪ, ಪಿ.ಸಿ.ವಸಂತ್, ಬರಪೊಳೆಯ ಸಿ.ಎಸ್.ರತನ್, ನಿತಿನ್, ಕುಮಾರಳ್ಳಿಯ ಪ್ರದೀಪ್, ಹಾರಂಗಿ ಜಲಾಶಯದ ಕಾರ್ಯಪಾಲಕ ಅಭಿಯಂತರರಾದ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಇಇ ಸತೀಶ್, ತಹಶೀಲ್ದಾರ್ ಕಿರಣ್ ಗೌರಯ್ಯ, ಐಟಿಡಿಪಿ ಅಧಿಕಾರಿ ಎಸ್.ಹೊನ್ನೇಗೌಡ, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ನಂಜರಾಯಪಟ್ಟಣ ಪಿಡಿಒ ರಾಜಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net