ನಂ.ಗೂಡಿನಲ್ಲಿ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು

18NGD1
Published on

ನಂಜನಗೂಡು : ಕಬಿನಿ ಜಲಾಶಯದಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನಂಜನಗೂಡು ನಗರದ ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಮೈಸೂರು-ನಂಜನಗೂಡು ಮುಖ್ಯರಸ್ತೆ ಮಲ್ಲನಮೂಲೆ ಮಠದ ಸಮೀಪ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ತೊಡಕಾಗುವ ಆತಂಕ ಎದುರಾಗಿದೆ.


ಕಬಿನಿ ಜಲಾಶಯದಿಂದ ಹೊರ ಬಿಡಲಾಗುತ್ತಿದ್ದ ನೀರಿನ ಪ್ರಮಾಣ 75 ಸಾವಿರ ಕೂಸೆಕ್‌ಗೆ ಏರಿಕೆಯಾಗಿತ್ತು. ಜತೆಗೆ ನುಗು ಅಣೆಕಟ್ಟೆಯಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಕಪಿಲಾ ನದಿ ಪ್ರವಾಹದಿಂದಾಗಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನ ಘಟ್ಟ, ಪರಶುರಾಮ ದೇವಾಲಯ, ಲಿಂಗಾಭಟ್ಟರ ಗುಡಿ ಹಾಗೂ ನದಿ ತೀರದ ಆಂಜನೇಯ ಸ್ವಾಮಿ ಗುಡಿಗಳು ನೀರಿನಲ್ಲಿ ಮುಳುಗಿವೆ.
ಕಪಿಲಾ ನದಿ ತೀರದಿಂದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ತೆರಳಲು ನಿರ್ಮಿಸಿರುವ ಕೆಳ ಸೇತುವೆಯೂ ಸಂಪೂರ್ಣ ಜಲಾವೃತಗೊಂಡಿದ್ದು, ದೇಗುಲದ ಭಕ್ತಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ಇನ್ನು ತಾಲೂಕಿನ ಸಂಗಮ ಕ್ಷೇತ್ರದಲ್ಲಿರುವ ಮಹದೇವ ತಾತಾ ಗದ್ದುಗೆ ಆವರಣವನ್ನು ಪ್ರವಾಹದ ನೀರು ಸುತ್ತುವರಿದಿದ್ದರೆ ಮಲ್ಲನಮೂಲೆ ಮಠದ ಶ್ರೀ ಗುರು ಕಂಬಳೀಶ್ವರ ಗದ್ದುಗೆ ಸಹಾ ಜಲಾವೃತಗೊಂಡಿದೆ.


ಕಪಿಲಾ ನದಿ ಪ್ರವಾಹದಿಂದಾಗಿ ತಾಲೂಕಿನ ದೇಬೂರಿನಲ್ಲಿರುವ ಕುಡಿಯುವ ನೀರೆತ್ತುವ ಕಾರ್ಯಾಗಾರವೂ ಮುಳುಗಿದೆ ಇದರಿಂದಾಗಿ ನಂಜನಗೂಡು ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನರು ಕುಡಿಯುವ ನೀರು ಸಂಗ್ರಹಿಸಲು ಪರದಾಡುವಂತಾಗಿದೆ. ಇನ್ನು ಹುಲ್ಲಹಳ್ಳಿಯಲ್ಲಿರುವ ಬಹು ಗ್ರಾಮ ಕುಡಿಯುವ ನೀರು ಪೂರೈಸುವ ಘಟಕವೂ ಜಲಾವೃತಗೊಂಡಿದ್ದು ನೀರೆತ್ತುವ ಕಾರ್ಯ ಸ್ಥಗಿತಗೊಂಡಿದೆ. ಇದರೊಂದಿಗೆ ತಾಲೂಕಿನ ಮಲ್ಲನಮೂಲೆ ಬಳಿ ಇರುವ ಕೆಐಡಿಬಿಗೆ ಸೇರಿದ ಕೈಗಾರಿಕೆಗಳಿಗೆ ನೀರು ಪೂರೈಸುವ ಘಟಕ ಸಹಾ ಜಲಾವೃತಗೊಂಡಿರುವುದರಿಂದ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿದೆ.


ಇನ್ನು ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಕಪಿಲಾ ನದಿ ತೀರದಲ್ಲಿರುವ ವಿವಿಧ ಸಮುದಾಯಗಳ ಸ್ಮಶಾನಗಳೂ ಪ್ರವಾಹದಿಂದ ಮುಳುಗಡೆಯಾಗಿದ್ದು, ಸತ್ತವರ ಅಂತ್ಯಸಂಸ್ಕಾರಕ್ಕೂ ಜನರು ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net