108 ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ

water
Published on

ಕಾರ್ಕಳ: 108 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಏತ ನೀರಾವರಿ ಯೋಜನೆ, ಅವಿಭಜಿತ ಜಿಲ್ಲೆಯಲ್ಲಿ ಪ್ರಥಮವಾಗಿ ನಿರ್ಮಾಣಗೊಳ್ಳಲಿದೆ. ಆ ಮೂಲಕ ಕರಿಯಕಲ್ಲು ಕಾರ್ಕಳವನ್ನು ಹಸಿರಾಗಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ಭಾನುವಾರ ಸ್ವರ್ಣ ನದಿಯ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ 108 ಕೋಟಿ ರೂ. ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ 50ರಿಂದ 60 ವರ್ಷ ಕಾಲ ಈ ಯೋಜನೆ ಶಾಶ್ವತವಾಗಿ ಉಳಿಯಲಿದ್ದು, ಮುಂದಿನ ಪೀಳಿಗೆಗೆ ಮಹತ್ತರ ಕೊಡುಗೆಯಾಗಲಿದೆ ಎಂದರು.

125 ಮೀಟರ್ ಉದ್ದ ಹಾಗೂ 3 ಮೀಟರ್ ಎತ್ತರ ಹೊಂದಿರುವ ಈ ಡ್ಯಾಂನ ಎಡಭಾಗಕ್ಕೆ 3 ಕಿ.ಮೀ.ವ್ಯಾಪ್ತಿ, ಬಲಭಾಗಕ್ಕೆ 9.93 ಕಿ.ಮೀ. ವ್ಯಾಪ್ತಿಗೆ ನೀರು ಹರಿಸಲಾಗುವುದು. 40ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳು ಡ್ಯಾಂನ ಪರಿಸರದಲ್ಲಿ ನಿರ್ಮಾಣವಾಗಲಿದ್ದು, 1500 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಕ್ಕೆ ಅನುಕೂಲವಾಗಲಿದೆ. ಜತೆಗೆ ಕೆರೆಗಳಿಗೂ ಜಲಪೂರಣವಾಗಲಿದೆ ಎಂದರು.

ಜಿ.ಪಂ.ಸದಸ್ಯ ಉದಯ ಎಸ್.ಕೋಟ್ಯಾನ್ ಕಾರ್ಕಳ ಕ್ಷೇತ್ರದಲ್ಲಿ ಬಹು ದೊಡ್ಡ ಯೋಜನೆಯನ್ನು ಜಾರಿಗೆ ತಂದಿರುವ ಶಾಸಕರನ್ನು ಅಭಿನಂದಿಸಿದರು. ಮುಂಬೈ ಉದ್ಯಮಿ ದೇವಸ್ಯ ಶಿವರಾಂ ಶೆಟ್ಟಿ ಶಾಸಕರ ಕಾರ್ಯಸಾಧನೆಯನ್ನು ಶ್ಲಾಘಿಸಿದರು.

ತಾ.ಪಂ.ಅಧ್ಯಕ್ಷೆ ಸೌಭಾಗ್ಯ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ನಾಯಕ್, ಜಿ.ಪಂ. ಸದಸ್ಯರಾದ ಜ್ಯೋತಿ ಹರೀಶ್, ರೇಷ್ಮಾ ಶೆಟ್ಟಿ, ತಾ.ಪಂ. ಸದಸ್ಯೆ ಮಾಲಿನಿ ಜೆ. ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಅಭಿಯಂತರಾದ ಪ್ರವೀಣ್, ಪ್ರಸನ್ನ, ಹಿರ್ಗಾನ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಶೆಟ್ಟಿ, ಮರ್ಣೆ ಗ್ರಾ.ಪಂ. ಅಧ್ಯಕ್ಷ ದಿನೇಶ್ ಕುಮಾರ್, ಪ್ರಮುಖರಾದ ಭವಾನಿ ಶಂಕರ್, ಬಾಬಣ್ಣ ವಾಗ್ಳೆ, ಅಂಡಾರು ಮಹಾವೀರ ಹೆಗ್ಡೆ, ಸಿರಿಯಣ್ಣ ಶೆಟ್ಟಿ, ಪ್ರೇಮಾನಂದ ನಾಯಕ್, ಪಿಡಿಒ ತಿಲಕ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಈಜುಪಟು ವಿದ್ಯಾ ಪೈ ಅವರನ್ನು ಅಭಿನಂದಿಸಲಾಯಿತು.

ಹರೀಶ್ ನಾಯಕ್ ಸ್ವಾಗತಿಸಿದರು. ನಂದ ಕುಮಾರ್ ಹೆಗ್ಡೆ ಪ್ರಸ್ತಾವಿಸಿದರು. ವೈ.ಪಾಂಡುರಂಗ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಸ್ವರ್ಣ ಕಾರ್ಕಳ-ಸ್ವಚ್ಛ ಕಾರ್ಕಳ ಎಂಬ ಕಲ್ಪನೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾದಾಗ ಅಭಿವೃದ್ಧಿಗೆ ಹೆಚ್ಚಿನ ವೇಗ ನೀಡಲಾಗಿದೆ. 5 ವರ್ಷದಲ್ಲಿ 55 ಕಿಂಡಿ ಅಣೆಕಟ್ಟು ನಿರ್ಮಾಣ ಮೂಲಕ ರಾಜ್ಯದಲ್ಲಿ ದಾಖಲೆ ಮಾಡಿದ್ದರೆ, ಮುಂದಿನ ವರ್ಷದಲ್ಲಿ 100 ಕಿಂಡಿ ಅಣೆಕಟ್ಟುಗಳ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಪ್ರತಿಯೊಂದು ಇಲಾಖೆಯಲ್ಲೂ ಒಂದು ಮಾದರಿ ಕಾರ್ಯಕ್ರಮ ರೂಪಿಸಿ, ಕಾರ್ಕಳ ಕ್ಷೇತ್ರದಕ್ಕೆ ಹೆಚ್ಚಿನ ಅನುದಾನ ಒದಗಿಸಿಕೊಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇನೆ.

-ವಿ.ಸುನೀಲ್ ಕುಮಾರ್, ಶಾಸಕ, ಸರ್ಕಾರದ ಮುಖ್ಯ ಸಚೇತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net