

ಮಂಜುನಾಥ ಅಂಗಡಿ ಧಾರವಾಡ
ಜಿಲ್ಲೆಗೆ ಇನ್ನೂ ಮುಂಗಾರು ಮಳೆಯ ಆಗಮನವಾಗಿಲ್ಲ. ಈಗಷ್ಟೇ ನೈಋತ್ಯ ಮುಂಗಾರು ಮಾರುತ ಕೇರಳ ಪ್ರವೇಶಿಸಿದ್ದು, ೪- ೫ ದಿನಗಳಲ್ಲಿ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಮುಂಗಾರು ವಿಳಂಬದಿAದ ಬೇಸಿಗೆ ವಾತಾವರಣ ಮುಂದುವರಿದ ಪರಿಣಾಮ ನೀರಿನ ಸಮಸ್ಯೆ ಸಾಮಾನ್ಯ. ಜಿಲ್ಲೆಯ ೧೬ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ನವಲಗುಂದ ತಾಲೂಕಿನ ೮, ಹುಬ್ಬಳ್ಳಿ ತಾಲೂಕಿನ ೩, ಕುಂದಗೋಳದ ೪, ಧಾರವಾಡದ ೧೧, ಕಲಘಟಗಿಯ ೨೦ ಗ್ರಾಮಗಳನ್ನು ಬೇಸಿಗೆಯಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳುವ ಗ್ರಾಮಗಳೆಂದು ಗುರುತಿಸಲಾಗಿದೆ. ಆದರೆ, ಸಂಬAಧಪಟ್ಟ ಇಲಾಖೆಗಳ ಮುಂಜಾಗ್ರತಾ ಕ್ರಮದಿಂದಾಗಿ ಸದ್ಯ ೧೬ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ.
ನವಲಗುಂದ ತಾಲೂಕಿನ ಶಾನವಾಡ, ಗುಮ್ಮಗೋಳ, ಹುಬ್ಬಳ್ಳಿ ತಾಲೂಕಿನ ವರೂರ, ಬಿ. ಅರಳಿಕಟ್ಟಿ, ಛಬ್ಬಿ, ಮಂಟೂರ, ನಾಗರಹಳ್ಳಿ, ಕುಸುಗಲ್, ಕುಂದಗೋಳ ತಾಲೂಕಿನ ಬಸಾಪೂರ, ಚಿಕ್ಕನರ್ತಿ, ಗುಡೇನಕಟ್ಟಿ, ಹೊಸಳ್ಳಿ, ಕಲಘಟಗಿ ತಾಲೂಕಿನ ದೇವಿಕೊಪ್ಪ, ನೆಲ್ಲಿಹರವಿ ತಾಂಡಾ, ಯಲವದಾಳ, ಹುಲಗಿನಕೊಪ್ಪ ಗ್ರಾಮಗಳಲ್ಲಿ ಜೂನ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ಗ್ರಾಮಗಳಲ್ಲಿ ನೀರು ಪೂರೈಕೆಗಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ. ಕೆಲವೆಡೆ ಮೋಟರ್, ಪಂಪ್ ಹಾಗೂ ವಿದ್ಯುತ್ ದುರಸ್ತಿ ಕೆಲಸವಾಗಬೇಕಿದೆ. ಹೀಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತುರ್ತು ಕಾಮಗಾರಿ ಕೈಗೊಳ್ಳುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ ತುರ್ತಾಗಿ ಕೊಳವೆಬಾವಿಗಳ ದುರಸ್ತಿ, ಮೋಟರ್- ಪಂಪ್ ರಿಪೇರಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಅನುದಾನ ೪೨೧೫ ಲೆಕ್ಕಶೀರ್ಷಿಕೆಯಡಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರತಿ ತಾಲೂಕಿಗೆ ೨೦ ಲಕ್ಷ ರೂ.ಗಳಂತೆ ೧ ಕೋಟಿ ರೂ. ತುರ್ತು ನಿರ್ವಹಣೆ ಅನುದಾನವಿದ್ದು, ವಿನಿಯೋಗಿಸಲಾಗುತ್ತಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೆಲ್ಲೂ ನೀರಿಗಾಗಿ ಹಾಹಾಕಾರವಿಲ್ಲ. ಆದರೆ, ಮಳೆ ವಿಳಂಬದಿAದ ಜಲಮೂಲಗಳು ಬತ್ತುತ್ತ್ತಿರುವುದರಿಂದ ೧೬ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಇತ್ಯರ್ಥಕ್ಕೆ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇರುವ ಬೋರ್‌ವೆಲ್‌ಗಳನ್ನು ಫ್ಲಶಿಂಗ್ ಮಾಡಿಸುವುದು, ಮೋಟರ್- ಪಂಪ್ ರಿಪೇರಿ, ವಿದ್ಯುತ್ ಸಂಪರ್ಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ತುರ್ತು ನಿರ್ವಹಣೆಗಾಗಿ ರಾಜ್ಯ ಅನುದಾನವನ್ನು (೪೨೧೫ ಲೆಕ್ಕಶೀರ್ಷಿಕೆ) ವಿನಿಯೋಗಿಸಲಾಗುತ್ತದೆ.
- ಆರ್.ಎಂ. ಸೊಪ್ಪಿಮಠ, ಕಾರ್ಯನಿರ್ವಾಹಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ