ಮಲಪ್ರಭಾ ದಂಡೆಯಲ್ಲಿ ಜಲ ಭಯ

29-NRD-1a MALAPRABHA
Published on

ರಾಜು ಹೊಸಮನಿ ನರಗುಂದ

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶ ಹಾಗೂ ಬೆಣ್ಣೆಹಳ್ಳದ ಅಚ್ಚುಕಟ್ಟು ಪ್ರದೇಶದಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ನವಿಲುತೀರ್ಥ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ತಾಲೂಕಿನ ಮಲಪ್ರಭಾ ನದಿ ಪಾತ್ರದ ಹಲವು ಗ್ರಾಮಗಳ ಜನರು, ಜಾನುವಾರು ಕಟ್ಟಿಕೊಂಡು ಸ್ಥಳಾಂತರಗೊಳ್ಳುವ ಆತಂಕ ಸೃಷ್ಟಿಯಾಗಿದೆ.

ಮಲಪ್ರಭಾ ನದಿ ಪ್ರವಾಹಪೀಡಿತ ಪ್ರದೇಶದಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದ ಹಿಂದಿನ ಸರ್ಕಾರಗಳು ಈವರೆಗೂ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದರಿಂದ ನದಿ ಪಾತ್ರದ ಜನರು ಪ್ರವಾಹ ಬಂದಾಗಲೆಲ್ಲ ಊರೂರು ಅಲೆದಾಡುವಂತಾಗಿದೆ.

ಭಾರಿ ಮಳೆ ಸುರಿದಾಗ ಉಕ್ಕಿ ಹರಿಯುವ ನದಿಯಿಂದ ತಾಲೂಕಿನ ಗಡಿಗ್ರಾಮ ಲಖಮಾಪೂರ ಸಂಪೂರ್ಣ ನಡುಗಡ್ಡೆಯಂತಾಗುತ್ತದೆ. ತಾಲೂಕಿನ ವಾಸನ, ಬೆಳ್ಳೆರಿ, ಕೊಣ್ಣೂರು, ಬೂದಿಹಾಳ, ಕಪ್ಪಲಿ, ಕಲ್ಲಾಪೂರ, ಶಿರೋಳ, ಸುತ್ತಲಿನ ಗ್ರಾಮಗಳ ರೈತರು ಸದ್ಯ ಮಲಪ್ರಭಾ ಪ್ರವಾಹಕ್ಕೆ ತುತ್ತಾಗುವ ಪಂಪ್​ಸೆಟ್​ಗಳನ್ನು ಸಂರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

2079.50 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ನವಿಲುತೀರ್ಥ ಜಲಾಶಯದಲ್ಲಿ ಈಗಾಗಲೇ 2074 ಅಡಿಯಷ್ಟು ನೀರು ಸಂಗ್ರಹಗೊಂಡಿದೆ. ಪ್ರತಿದಿನ 14,277 ಕ್ಯೂಸೆಕ್ ಒಳಹರಿವು ಇದೆ. ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಕೊಣ್ಣೂರಿನ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ಹಾಗೂ ಕಾಲುವೆಗಳಿಗೆ 400 ಕ್ಯೂಸೆಕ್, ಕುಡಿಯಲು 194 ಕ್ಯೂಸೆಕ್ ಸೇರಿ ಒಟ್ಟು,5,594 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.

ಈ ಸಲವೂ ನವಿಲುತೀರ್ಥ ಜಲಾಶಯ ಭರ್ತಿಯಾಗುವುದು ನಿಶ್ಚಿತ ಎಂದು ಭಾವಿಸಲಾಗಿದೆ. ನಿರಂತರ ಮಳೆ ಮುಂದುವರಿದರೆ ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ವ್ಯಾಪ್ತಿಗೊಳಪಡುವ ವಿವಿಧ ಗ್ರಾಮಗಳ ಜನರು, ಜಾನುವಾರು ಹಾಗೂ ದಿನಬಳಕೆ ಅಗತ್ಯ ವಸ್ತುಗಳನ್ನು ಕಟ್ಟಿಕೊಂಡು ಸುರಕ್ಷಿತ ಸ್ಥಳ ಹುಡುಕಲು, ತಲುಪಲು ಪರದಾಡಬೇಕಾಗುತ್ತದೆ.

ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗುವ ಮೊದಲ ಗ್ರಾಮವೇ ಲಖಮಾಪೂರ. ಅಂತರ ಜಿಲ್ಲಾ ಗಡಿ ಸಮಸ್ಯೆ ಎದುರಾಗುವುದರಿಂದ ತಾತ್ಕಾಲಿಕವಾಗಿ ಈ ಗ್ರಾಮದಲ್ಲಿ ರಸ್ತೆ ಹಾಗೂ ಸೇತುವೆ ನಿರ್ವಿುಸಲಾಗಿದೆ. ಆದರೆ, ನದಿಯಲ್ಲಿ ತುಂಬಿರುವ ವಿಪರೀತ ಹೂಳು ತೆಗೆಯಲಾಗಿಲ್ಲ. ನದಿ ಪಾತ್ರದ ಒತ್ತುವರಿಯಾಗಿರುವುದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ.

2019ರಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿತ್ತು. ಈ ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಪೈಕಿ ಅನೇಕರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಣ್ಣೂರಿನ 50ಕ್ಕೂ ಹೆಚ್ಚು ಕುಟುಂಬಗಳು ಇನ್ನೂ ಶೆಡ್​ಗಳಲ್ಲೇ ವಾಸಿಸುತ್ತಿವೆ. ಕಷ್ಟಪಟ್ಟು ಬೆಳೆಗಳನ್ನು ಉಳಿಸಿಕೊಂಡಿದ್ದ ರೈತರಿಗೆ ಮತ್ತೊಮ್ಮೆ ಪ್ರವಾಹ ಎದುರಾದರೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗುತ್ತದೆ.

ಸಮೀಪದ ರಾಮದುರ್ಗ ಸರಹದ್ದಿನ ಜಮೀನೊಂದರಲ್ಲಿ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಈವರೆಗೂ ಈಡೇರಿಸಿಲ್ಲ. ಈಗ ತಾಲೂಕಾಡಳಿತದಿಂದ ಮತ್ತೆ ಪ್ರವಾಹ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಾಗೃತಿ ಮೂಡಿಸುವುದರ ಬದಲು ಜಿಲ್ಲಾಡಳಿತದಿಂದ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. | ಶಂಕರಗೌಡ ನಡಮನಿ ಲಖಮಾಪೂರ ಗ್ರಾಮಸ್ಥ

ನರಗುಂದ ತಾಲೂಕಿನ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಪ್ರವಾಹ ಉಂಟಾದರೆ ಅಗತ್ಯಕ್ಕೆ ತಕ್ಕಂತೆ ಕಾಳಜಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ಶಾಶ್ವತ ಪರಿಹಾರದ ಬಗ್ಗೆ ಯಾರಾದರೂ ಮನವಿ ನೀಡಿದರೆ ಜಿಲ್ಲಾಡಳಿತ, ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಲಾಗುವುದು. | ಶ್ರೀಶೈಲ ತಳವಾರ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net