

ಸಂಬರಗಿ: ಗಡಿಭಾಗದ ಗ್ರಾಮಗಳಲ್ಲಿ ಕಳೆದ 3 ತಿಂಗಳಿನಿಂದ ಹರಿಯುತ್ತಿದ್ದ ಅಗ್ರಾಣಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ಸ್ಥಳೀಯರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರು ನೀರಿನ ಕೊರತೆಯಿಂದ ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷ ಉತ್ತಮವಾಗಿ ಮಳೆ ಸುರಿದಿದ್ದರಿಂದ ಅಗ್ರಾಣಿ ತೀರದಲ್ಲಿರುವ ಬಾಂದಾರಗಳು ತುಂಬಿ ಹರಿಯುತ್ತಿದ್ದವು. ಇದರಿಂದ ನದಿ ತೀರದಲ್ಲಿರುವ ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರು ಮಟ್ಟ ಹೆಚ್ಚಾಗಿತ್ತು. ಆದರೆ, ಈ ವರ್ಷ ಬೇಸಿಗೆ ಮುನ್ನ ನದಿ ಹಾಗೂ ಬಾಂದಾಗಳು ಬತ್ತಿ ಹೋಗಿದ್ದು, ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.
ಸದ್ಯ ರೈತರು ಆತಂಕದಲ್ಲಿದ್ದು, ದ್ರಾಕ್ಷಿ ಬೆಳೆಗೆ ಟ್ಯಾಂಕರ್ ಮುಖಾಂತರ ನೀರು ಪೂರೈಕೆ ಮಾಡುವ ಪರಿಸ್ಥಿತಿ ಬಂದಿದೆ. ಪಾಂಡೇಗಾಂವ, ಖಿಳೇಗಾಂವ, ಶಿರೂರ, ಸಂಬರಗಿ, ನಾಗನೂರ, ತಾಂವಶಿ, ಶಿವನೂರ, ಕಲ್ಲುತ್ತಿ ಸೇರಿವ ವಿವಿಧ ಗ್ರಾಮಗಳಲ್ಲಿ ಸುಮಾರು 15- 20 ಬಾಂದಾರಗಳಿದ್ದು, ಇವೂ ಕೂಡ ಬತ್ತಿ ಹೋಗಿವೆ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ರೈತರು ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಗೋಧಿ, ಕುಸುಬಿ ಸೇರಿ ಅನೇಕ ಬೆಳೆಗಳ ರಾಶಿ ಮಾಡಿ ಬೇಸಿಗೆ ಬೆಳೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಆದರೆ, ನೀರಿನ ಕೊರತೆಯಿಂದ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರದ ಗಡಿಯಿಂದ ಕೇವಲ ನೂರು ಮೀಟರ್ ಅಂತರದಲ್ಲಿ ತಾಕಾರಿ ಮಹಿಷಾಳ ಕಾಲುವೆ ಮುಖಾಂತರ ನೀರನ್ನು ಮಹಾರಾಷ್ಟ್ರದ ಜತ್ತ ತಾಲೂಕಿನ ಕವಟೆಮಹಾಂಕಾಳ ತಾಲೂಕಿಗೆ ತಲುಪುತ್ತಿದೆ. ಸ್ವಲ್ಪ ಮಟ್ಟಿಗೆ ಮಾನವೀಯತೆ ದೃಷ್ಟಿಯಿಂದ ಅಗ್ರಾಣಿ ನದಿಗೆ ಮಹಾರಾಷ್ಟ್ರ ಸರ್ಕಾರ ನೀರು ಹರಿಯಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಕೊಡಬೇಕು ಎಂದು ವಿವಿಧ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸದ್ಯ ಬಾಂದಾರಗಳು ನೀರು ಬತ್ತಿ ಹೋಗಿವೆ. ಕೃಷ್ಣಾ ನದಿ ಮೂಲಕ ಬಾಂದಾರಗಳಿಗೆ ನೀರು ಹರಿಬಿಟ್ಟರೆ. ಸಮಸ್ಯೆ ನಿವಾರಣೆಯಾಗಲಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. |ಶ್ರೀಕಾಂತ ಅಭಿಯಂತ, ಚಿಕ್ಕ ನೀರಾವರಿ ಇಲಾಖೆ