ವಾಣಿಜ್ಯ ನಗರಿ ಕುಶಾಲನಗರದಲ್ಲಿ ಜಲಕ್ಷಾಮ

Water scarcity in commercial city Kushalanagar
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ಜೀವನದಿ ಕಾವೇರಿಯ ಹರಿವು ಸ್ಥಗಿತ ಆಗಿರುವುದರಿಂದ ಜಿಲ್ಲೆಯ ವಾಣಿಜ್ಯ ನಗರಿ ಕುಶಾಲನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಸದ್ಯಕ್ಕೆ ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಬೇಕಾಗಿದೆ. ನೀರಿನ ಅಗತ್ಯತೆಗಳಿಗೆ ಕಾವೇರಿ ನದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗಿದ್ದೇ ಇಂದಿನ ಈ ದುಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಲೂಕು ಕೇಂದ್ರ ಕುಶಾಲನಗರ ಭೌಗೋಳಿಕವಾಗಿ ಕೊಡಗಿನಲ್ಲಿದ್ದರೂ ಇಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳ ಪ್ರಭಾವ ವಾತಾವರಣ ಮಾತ್ರವಲ್ಲದೆ ಜನಜೀವನ, ಸಂಸ್ಕೃತಿ, ಹಬ್ಬ ಹರಿದಿನಗಳ ಮೇಲೂ ಕಾಣುತ್ತದೆ. ಕೊಡಗಿನ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚು ಮಳೆ ಬರುವುದಿಲ್ಲ. ಚಳಿಯೂ ಕಡಿಮೆ. ಮೈಸೂರು, ಹಾಸನದ ಪ್ರದೇಶಗಳಂತೆ ಬೇಸಿಗೆಯಲ್ಲಿ ಜಾಸ್ತಿ ಬಿಸಿಲೂ ಕಂಡುಬರುವುದಿಲ್ಲ. ಮೈಸೂರು, ಹಾಸನ, ಮಡಿಕೇರಿಗೆ ಇಲ್ಲಿಂದ ಹೆಚ್ಚೇನೂ ದೂರವೂ ಇಲ್ಲ. ಉತ್ತಮ ರಸ್ತೆ ಮತ್ತು ಸಾರಿಗೆ ಸಂಪರ್ಕವೂ ಇದೆ. ಹಾಗಾಗಿ ಈ ಮೂರು ಜಿಲ್ಲೆಗಳ ಜನರೂ ಕುಶಾಲನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಮಾಜಿ ಸೈನಿಕರು, ನಿವೃತ್ತ ಸರ್ಕಾರಿ ನೌಕರರೂ ತಮ್ಮ ವಿಶ್ರಾಂತ ಜೀವನ ಕಳೆಯಲು ಕುಶಾಲನಗರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ವರ್ಷದಿಂದ ವರ್ಷಕ್ಕೆ ಕುಶಾಲನಗರದ ಜನಸಂಖ್ಯೆ ಏರುಗತಿಯಲ್ಲಿದೆ. ೧೯೬೧ರ ಜನಗಣತಿ ಪ್ರಕಾರ ಕುಶಾಲನಗರದ ಜನಸಂಖ್ಯೆ ಕೇವಲ ೨,೯೦೨. ೨೦೧೧ರ ಜನಗಣತಿಯಲ್ಲಿ ಇಲ್ಲಿಯ ಜನಸಂಖ್ಯೆ ೨೩,೨೦೦, ೧೯೬೧ ಮತ್ತು ೧೯೭೧ರ ಮಧ್ಯೆ ಕುಶಾಲನಗರದ ಜನಸಂಖ್ಯೆ ಶೇ.೭೨.೨೯ರಷ್ಟು ಏರಿಕೆಯಾಗಿ ಒಮ್ಮಿಂದೊಮ್ಮೆಲೆ ೫ ಸಾವಿರಕ್ಕೆ ತಲುಪಿತು. ೧೯೮೧ ಜನಸಂಖ್ಯೆ ಪ್ರಕಾರ ಕುಶಾಲನಗರದಲ್ಲಿ ೬,೯೩೬ರಷ್ಟು ಜನಸಂಖ್ಯೆ ಇತ್ತು. ಈ ೧೦ ವರ್ಷಗಳಲ್ಲಿ ಶೇ.೩೮.೭೨ರಷ್ಟು ಜನಸಂಖ್ಯೆ ಏರಿಕೆ ಆಗಿತ್ತು. ೧೯೯೧ರಲ್ಲಿ ಶೇ.೩೬.೫೦ಯಷ್ಟು ಜನಸಂಖ್ಯೆ ಏರಿಕೆ ಆಗುವ ಮೂಲಕ ಇಲ್ಲಿಯ ಜನಸಂಖ್ಯೆ ೯,೪೭೨ಕ್ಕೆ ತಲುಪಿತು. ೨೦೦೧ಕ್ಕೆ ಶೇ. ೬೩.೪೯ರಷ್ಟು ಜನಸಂಖ್ಯೆ ಏರುವ ಮೂಲಕ ೧೫,೪೮೬ ಆಯಿತು. ೨೦೦೧ ಮತ್ತು ೨೦೧೧ರ ಮಧ್ಯೆ ೧೦ ವರ್ಷಗಳಲ್ಲಿ ಶೇ.೪೯.೮೨ರಷ್ಟು ಪ್ರಮಾಣದಲ್ಲಿ ಏರಿದ ಜನಸಂಖ್ಯೆ ೨೩,೨೦೦ಕ್ಕೆ ಬಂದು ನಿಂತಿತು. ೨೦೨೧ರಲ್ಲಿ ಜನಗಣತಿ ನಡೆದಿಲ್ಲ. ಆದರೆ ನಗರ ಯೋಜನಾ ಪ್ರಾಧಿಕಾರದ ಅಂದಾಜು ಲೆಕ್ಕಾಚಾರದ ಪ್ರಕಾರ ೨೦೨೧ಕ್ಕೆ ಪಟ್ಟಣದ ಜನಸಂಖ್ಯೆ ೨೭,೫೧೫ಕ್ಕೆ ತಲುಪಿರುವ ಅಂದಾಜಿದೆ. ೨೦೩೧ಕ್ಕೆ ಈ ಪ್ರಮಾಣ ೩೬,೮೨೦ಕ್ಕೆ ತಲುಪಬಹುದು ಎಂದು ಊಹಿಸಲಾಗಿದೆ.

೨೦೧೧ರಲ್ಲಿ ಕುಶಾಲನಗರದಲ್ಲಿ ೩,೭೮೮ ಮನೆಗಳಿದ್ದವು. ೨೦೩೧ರಕ್ಕೆ ಈ ಸಂಖ್ಯೆ ೬,೨೦೦ ಮೀರಬಹುದು ಎನ್ನುವ ಅಂದಾಜಿದೆ. ಪಟ್ಟಣದ ಜನಸಂಖ್ಯೆ ಈ ಪ್ರಮಾಣದಲ್ಲಿ ಏರುತ್ತಿದ್ದರೂ ಅದಕ್ಕೆ ಪೂರಕವಾಗಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮೇಲ್ದರ್ಜೆಗೆ ಏರಿಸುವ ಕೆಲಸ ಆಗಿರಲಿಲ್ಲ. ಪಟ್ಟಣವನ್ನು ಮೂರು ಕಡೆಗಳಿಂದ ಸುತ್ತುವರಿದು ಹರಿವ ಕಾವೇರಿ ನದಿಯ ನೀರನ್ನೇ ಇಲ್ಲಿಯ ಪ್ರಮುಖ ನೀರಿನ ಮೂಲವಾಗಿ ಪರಿಗಣಿಸಲಾಗಿದೆ. ೧೯೮೫ರಲ್ಲಿ ಕಾವೇರಿ ಮೊದಲ ಹಂತದ ಯೋಜನೆಯನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಯಿತು. ಇದರ ಸಂಸ್ಕರಣಾ ಸಾಮರ್ಥ್ಯ ದಿನಕ್ಕೆ ೧.೫ ದಶಲಕ್ಷ ಲೀಟರ್. ೨೦೦೧ರಲ್ಲಿ ದಿನಕ್ಕೆ ೨.೨೭ ದಶಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯದ ಕಾವೇರಿ ೨ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂತು.

ಪ್ರತಿದಿನ ಒಬ್ಬರಿಗೆ ೧೩೫ ಲೀಟರ್ ನೀರು ಪೂರೈಸುವ ಚಿಂತನೆಯಲ್ಲಿ ೨೦೧೫ರ ಅಂದಾಜು ೨೩,೭೩೭ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಈ ಯೋಜನೆ ರೂಪಿಸಲಾಗಿದೆ. ಆದರೆ ಈಗಿನ ಜನಸಂಖ್ಯೆಗೆ ಈ ಯೋಜನೆ ಸಾಕಾಗುತ್ತಿಲ್ಲ. ೨೦೩೩ರ ಹೊತ್ತಿಗೆ ಪ್ರತಿದಿನ ೬.೩ ದಶಲಕ್ಷ ಲೀಟರ್ ನೀರು ಪೂರೈಸುವ ಸಂಸ್ಕರಣಾ ಘಟಕದ ಯೋಜನೆಯ ಅಗತ್ಯ ಕುಶಾಲನಗರಕ್ಕೆ ಇದೆ ಎನ್ನುತ್ತಾರೆ ತಜ್ಞರು. ಪಟ್ಟಣದಲ್ಲಿ ೧೦೯ ಕೊಳವೆಬಾವಿಗಳಿದ್ದು, ೫ ಬೋರ್‌ವೆಲ್‌ಗಳು ಯಾಂತ್ರೀಕೃತ ನೀರೆತ್ತುವ ವ್ಯವಸ್ಥೆ ಹೊಂದಿದೆ. ಉಳಿದವುಗಳಲ್ಲಿ ಕೈಪಂಪ್‌ಗಳ ಮೂಲಕ ನೀರೆತ್ತಬೇಕಿದೆ.

ಸಂಸ್ಕರಣೆಯಾದ ನೀರನ್ನು ಸಂಗ್ರಹಿಸಲು ತಲಾ ೨.೫ಲಕ್ಷ ಲೀಟರ್ ಸಾಮರ್ಥ್ಯದ ೨ ಮತ್ತು ೧.೫ ಲಕ್ಷ ಲೀಟರ್ ಸಾಮರ್ಥ್ಯದ ೧ ಟ್ಯಾಂಕ್ ಸೇರಿ ಒಟ್ಟು ೬.೫ ಲಕ್ಷ ಲೀಟರ್ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಹೀಗೆ ಸಂಗ್ರಹಿಸಲಾಗುವ ನೀರನ್ನು ೧.೫ ಕಿಮೀ ಉದ್ದದ ಮುಖ್ಯ ವಿತರಣಾ ಕೊಳವೆ, ೩೧.೫ ಕಿಮೀನ ಉದ್ದದ ವಿತರಣಾ ಜಾಲದ ಮೂಲಕ ಪಟ್ಟಣದ ಶೇ.೮೯ರಷ್ಟು ಮನೆಗಳಿಗೆ ಕಾವೇರಿ ನೀರು ಪೂರೈಸುವ ವ್ಯವಸ್ಥೆ ಇದೆ. ಇವೆಲ್ಲವೂ ೨೦೧೫ರ ಜನಸಂಖ್ಯೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದ್ದು, ೨೦೩೧ರ ಜನಸಂಖ್ಯೆಗೆ ಈ ವ್ಯವಸ್ಥೆ ಏನೇನೂ ಸಾಲುವುದಿಲ್ಲ. ಸಂಸ್ಕರಣಾ ಘಟಕದ ಸಾಮರ್ಥ್ಯ ದಿನಕ್ಕೆ ೬.೩ ದಶಲಕ್ಷ ಲೀಟರ್‌ಗೂ ಅಧಿಕ ಆಗಬೇಕಿದೆ. ನೀರಿನ ವಿತರಣಾ ಜಾಲದ ಪೈಪ್‌ಲೈನ್ ವ್ಯವಸ್ಥೆ ಕೂಡ ಮೇಲ್ದರ್ಜೆಗೆ ಏರಬೇಕಿದೆ. ಸಂಸ್ಕರಣೆಯಾದ ನೀರಿನ ಸಂಗ್ರಹಕ್ಕೆ ೧೫ ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗಳ ಅವಶ್ಯಕತೆ ಇದೆ.

ಕುಶಾಲನಗರದಲ್ಲಿ ಏರಿಕೆಯಾಗಿರುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಪಟ್ಟಣದ ೯ ಕಿಮೀ ದೂರದ ಹಾರಂಗಿಯಿಂದ ನೀರಿನ ಪೂರೈಕೆ ಯೋಜನೆಯೊಂದು ಈ ಹಿಂದೆ ಸಿದ್ಧವಾಗಿತ್ತು. ೨೦೫೦ರ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಮುಂದಾಲೋಚನೆಯಿಂದ ೮೧ ಕೋಟಿಯ ರೇಖಾ ಅಂದಾಜನ್ನು ಕೂಡ ಮಾಡಲಾಗಿತ್ತು. ೯ ಕಿಮೀ ಉದ್ದದ ಮುಖ್ಯ ಪೈಪ್‌ಲೈನ್, ೮೦ ಕಿಮೀ ಉದ್ದದ ನೀರು ಸರಬರಾಜು ಪೈಪ್‌ಲೈನ್, ದಿನಕ್ಕೆ ೮ ದಶಲಕ್ಷ ಲೀಟರ್ ಸಾಮರ್ಥ್ಯದ ಸಂಸ್ಕರಣಾ ಘಟಕ, ೫ ಟ್ಯಾಂಕ್‌ಗಳ ನಿರ್ಮಾಣ ಈ ಯೋಜನೆಯಲ್ಲಿ ಸೇರಿತ್ತು. ಆದರೆ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ.

ಕುಶಾಲನಗರದ ಕುಡಿಯುವ ನೀರಿನ ಬೇಡಿಕೆ ಪೂರೈಸಲು ಅಮೃತ್ ೨.೦ ಯೋಜನೆ ಅಡಿಯಲ್ಲಿ ಯೋಜನೆ ಸಿದ್ಧವಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಚಾಲನೆ ನೀಡಿದ್ದು, ಟೆಂಡರ್ ಪೂರ್ವಭಾವಿ ಕೆಲಸಗಳು ನಡೆಯುತ್ತಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಳು ಶುರುವಾಗಲಿದೆ. ಕೂಡಿಗೆಯಲ್ಲಿ ಕಾವೇರಿ ಮತ್ತು ಹಾರಂಗಿ ನದಿ ಸಂಗಮ ಸ್ಥಳದಿಂದ ೩೦೦ ಮೀ ಕೆಳಭಾಗದಲ್ಲಿ ನೀರೆತ್ತಲು ಉದ್ದೇಶಿಸಲಾಗಿದೆ. ಪಿರಿಯಾಪಟ್ಟಣಕ್ಕೂ ಇಲ್ಲಿಂದಲೇ ನೀರು ಪೂರೈಕೆ ಆಗಲಿದೆ. ೪೦ ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಪ್ರತಿಯೊಬ್ಬನಿಗೂ ದಿನಕ್ಕೆ ೧೩೫ ಲೀ ನೀರು ಪೂರೈಕೆ ಯೋಜನೆಯ ಉದ್ದೇಶವಾಗಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಕಾಮಗಾರಿ ಶುರುವಾಗುವ ನಿರೀಕ್ಷೆ ಇದೆ.

ಹಾರಂಗಿಯಿಂದ ಕುಶಾಲನಗರಕ್ಕೆ ನೀರು ಪೂರೈಸುವ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿದೆ. ಈಗ ಅಮೃತ್ ೨.೦ ಯೋಜನೆ ಅಡಿಯಲ್ಲಿ ನೀರು ಪೂರೈಸುವ ಯೋಜನೆಗೆ ಸಿದ್ಧತೆ ನಡೆದಿದೆ. ಕೂಡಿಗೆ ಬಳಿಯ ಕಾವೇರಿ ಮತ್ತು ಹಾರಂಗಿ ನದಿಗಳ ಸಂಗಮ ಸ್ಥಳದ ಬಳಿಯಿಂದ ನೀರೆತ್ತಲಾಗುವುದು. ಇದರಿಂದಾಗಿ ಒಂದು ವೇಳೆ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆದರೆ ಹಾರಂಗಿ ಜಲಾಶಯದ ನೀರು ಬಳಸಿಕೊಳ್ಳಲು ಅನುಕೂಲ ಆಗಲಿದೆ.
ಆನಂದ್, ಸಹಾಯಕ ಅಭಿಯಂತರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಕುಶಾಲನಗರದ ಸುತ್ತಲೂ ಕಾವೇರಿ ನದಿ ಹರಿಯುತ್ತಿದ್ದರೂ, ಕೇವಲ ೮ ಕಿಮೀ ದೂರದಲ್ಲಿ ಹಾರಂಗಿ ಜಲಾಶಯವಿದ್ದರೂ ಪಟ್ಟಣದ ನೀರಿನ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ೪೦ ವರ್ಷಗಳ ಹಿಂದೆಯೇ ಹಾರಂಗಿಯಿಂದ ಸೋಮವಾರಪೇಟೆಗೆ ನೀರು ತೆಗೆದುಕೊಂಡು ಹೋಗಲಾಗಿದೆ. ಪಿರಿಯಾಪಟ್ಟಣಕ್ಕೆ ಕುಡಿಯುವ ನೀರು, ಕೆರೆಗಳ ತುಂಬಿಸಲೂ ಕುಶಾಲನಗರದಿಂದ ಕಾವೇರಿ ನೀರು ಬಳಸಿಕೊಳ್ಳಲಾಗಿದೆ. ಆದರೆ ಕುಶಾಲನಗರಕ್ಕೆ ಇದರ ಉಪಯೋಗ ಸಮರ್ಪಕವಾಗಿ ಆಗಿಲ್ಲ. ಅದರ ಪರಿಣಾಮ ಈಗ ಕಾಣುತ್ತಿದ್ದೇವೆ.
ಕೆ.ಬಿ. ಗಿರೀಶ್, ನಿವೃತ್ತ ಗ್ರಂಥಪಾಲಕ, ಕುಶಾಲನಗರ

ಕುಶಾಲನಗರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿರುವಲ್ಲಿಗೆ ಶೀಘ್ರವಾಗಿ ಸ್ಪಂದಿಸಲಾಗುತ್ತಿದೆ. ಕೂಡಿಗೆ, ಕೂಡುಮಂಗಳೂರು ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇದೆ. ಗುಡ್ಡೆಹೊಸೂರಿನಲ್ಲೂ ನೀರಿನ ಕೊರತೆ ಕಂಡುಬಂದಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕುಶಾಲನಗರ ಪಟ್ಟಣಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕಿರಣ್ ಗೌರಯ್ಯ, ತಹಸೀಲ್ದಾರ್, ಕುಶಾಲನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net