

ಸಿರಿಗೆರೆ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೀರು, ನೈರ್ಮಲ್ಯತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿ, ತಮ್ಮ ವಾರ್ಡ್‌ಗಳಲ್ಲಿ ಸದಸ್ಯರು ತಿಂಗಳಿಗೆ ಒಮ್ಮೆಯಾದರೂ ಸ್ವಚ್ಛತೆಯ ಬಗ್ಗೆ ತಿಳಿಸಬೇಕಿದೆ.
ಅಗತ್ಯ ಕ್ರಮಕೈಗೊಳ್ಳಲು ಪಿಡಿಒಗೆ ಸೂಚಿಸಬೇಕು. ಇದರಿಂದ ಆರೋಗ್ಯ ಸಮಸ್ಯೆಗಳು ನಿಯಂತ್ರಣಕ್ಕೆ ಬರಲಿದೆ ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ನಿವೇಶನಗಳಲ್ಲಿ ತ್ಯಾಜ್ಯ ವಿಲೇವಾರಿ, ಕೊಳಚೆ, ನೀರು ನಿಲ್ಲಲು ಅವಕಾಶ ನೀಡುವ ಮಾಲೀಕನಿಗೆ ಸ್ವಚ್ಛತೆ ಬಗ್ಗೆ ತಿಳಿಸಬೇಕು.
ಖಾಲಿ ಜಾಗಗಳಲ್ಲಿ ಬೆಳೆದ ಗಿಡಗಳನ್ನು ಕತ್ತರಿಸಿ ಶುಚಿತ್ವ ಕಾಪಾಡಬೇಕು. ಜಲಮೂಲಗಳನ್ನು ಸ್ವಚ್ಛವಾಗಿಡಬೇಕು ಎಂದು ತಿಳಿಸಿದರು.
ಆಗಿಂದಾಗ್ಗೆ ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸುವುದು, ಸ್ಥಳಿಯ ಆರೋಗ್ಯ ಇಲಾಖೆಯ ನಿರೀಕ್ಷಣಾಧಿಕಾರಿಗಳಿಂದ ನೀರು ಕುಡಿಯಲು ಯೋಗ್ಯವಾಗಿದೆಯಾ ಎಂಬುದರ ಬಗ್ಗೆ ಖಚಿತತೆ ಪಡಿಸಿಕೊಳ್ಳಬೇಕು.
ಘನ ತ್ಯಾಜ್ಯ ವಸ್ತುಗಳನ್ನ ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಸುನೀಲ್, ಡಾ. ತಿಮ್ಮೇಗೌಡ, ಗ್ರಾಪಂ ಅಧ್ಯಕ್ಷೆ ಕೆ.ಹಾಲಮ್ಮ, ಉಪಾಧ್ಯಕ್ಷೆ ಗೀತಾ ಶಿವಮೂರ್ತಿ, ಪಿಡಿಒ ಹನ್ಸಿರಾ ಬಾನು, ರಾಮಕೃಷ್ಣಪ್ಪ ಇತರರಿದ್ದರು.