

ಕಾನಹೊಸಹಳ್ಳಿ: ಕಾನಹೊಸಹಳ್ಳಿ, ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ವರ್ಷಧಾರೆ ಅವಾಂತರ ಸೃಷ್ಟಿಸಿದೆ.
ಗಡಿಗ್ರಾಮ ಕೆಂಚಮ್ಮನಹಳ್ಳಿ ಮತ್ತು ಪಿಚ್ಚಾರಹಟ್ಟಿ ಮಧ್ಯದಲ್ಲಿರುವ ಹಳ್ಳ ತುಂಬಿ ಹರಿದಿದೆ. ಪಿಚ್ಚಾರಹಟ್ಟಿಯ 10ಕ್ಕೂ ಹೆಚ್ಚು ಜನರು ಗೂಡ್ಸ್ ವಾಹನದಲ್ಲಿ ಚಿತ್ರದುರ್ಗಕ್ಕೆ ಕೂಲಿ ಕೆಲಸಕ್ಕೆಂದು ತೆರಳುತ್ತಿದ್ದರು. ಕೆಂಚಮ್ಮನಹಳ್ಳಿ ಬಳಿ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ತುಂಬಿ ನೀರು ಹರಿಯುತ್ತಿರುವುದು ಕಂಡು ಹಳ್ಳದ ಬಳಿ ಕಾರ್ಮಿಕರು ಇಳಿದ್ದಾರೆ. ಆದರೆ, ಚಾಲಕ ದೈರ್ಯ ಮಾಡಿ, ಹಳ್ಳ ದಾಟಿಸಲು ಮುಂದಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.ಚಾಲಕ ಪೀರ್‌ಸಾಬ್ ಸಾಹಸ ಮಾಡಿ ವಾಹನದಿಂದ ಹೊರ ಬಂದು ದಡ ಸೇರಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಮಹಿಳೆ: ಭಾರಿ ಮಳೆಗೆ ಕಾನಹೊಸಹಳ್ಳಿಯಲ್ಲಿ ದಲಿತ ಕಾಲನಿಯಲ್ಲಿ ನೀರು ಹರಿಯಿತು. ಅವೈಜ್ಞಾನಿಕವಾಗಿ ನಿರ್ಮಿಸಿದ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಅಲ್ಲದೆ ಅಂಗಡಿಗಳಿಗೆ ನೀರು ನುಗ್ಗಿತು. ಅಲ್ಲದೆ ಗುಜ್ಜರಿ ಚೀಲಗಳು ಕೊಚ್ಚಿ ಹೋಗಿ ಬಸ್ ನಿಲ್ದಾಣ ಸೇರಿದೆ. ಇಡೀ ನಿಲ್ದಾಣ ಕೆಸರುಮಯವಾಗಿದೆ.
ಕೆ.ರಾಯಪುರ ಗ್ರಾಮದಲ್ಲಿ ಮಳೆಗೆ ಡಾಂಬರ್ ರಸ್ತೆ ಕಿತ್ತು ಹೋಗಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಪಿಚ್ಚಾರಹಟ್ಟಿಯಲ್ಲಿ ಮನೆ ಗೋಡೆ ಬಿದ್ದು 2 ಕುರಿಗಳು ಸತ್ತಿವೆ. ಅಲ್ಲದೆ ಕಾನಹೊಸಹಳ್ಳಿ, ಕ್ಯಾಸನಕೆರೆ, ಚೌಡಾಪುರ, ಆಲೂರು ಸೇರಿ ವಿವಿಧ ಗ್ರಾಮಗಳಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಗುಡೇಕೋಟೆ ವ್ಯಾಪ್ತಿಯ ಜರಿಮಲೆಯಲ್ಲಿ 9, ಭೀಮಸಮುದ್ರ, ಹುಲಿಕುಂಟೆ, ಕುರಿಹಟ್ಟಿ, ಮಾಕನಡಕು, ಬೆಳಗಟ್ಟೆಯಲ್ಲಿ ತಲಾ ಒಂದು, ಸಿದ್ದಾಪುರದಲ್ಲಿ ಎರಡು ಮನೆಗಳ ಛಾವಣಿ ಕುಸಿದಿವೆ. ತಿಮ್ಮನಹಳ್ಳಿ ಮನೆ ಮುಂದಿನ ಛಾವಣಿ ಮಹಿಳೆ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಡಿ ಬಿದ್ದ ಗಂಡಬೊಮ್ಮನಹಳ್ಳಿ ಕೆರೆ: ವಿಜಯನಗರ ಜಿಲ್ಲೆಯ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ಗಂಡಬೊಮ್ಮನಹಳ್ಳಿ ಕೆರೆ ತುಂಬಿ ಕೋಡಿ ಬಿದ್ದು ನೀರು ಹರಿಯುತ್ತಿದೆ. ನೀರಿನ ಜಲರಾಶಿಯನ್ನು ನೋಡಲು ಸುತ್ತಲಿನ ಹಳ್ಳಿಗಳ ಜನರು ತಂಡೋಪಾತಂಡ ಅಗಮಿಸಿ ಸೆಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದಾರೆ. ಅಲ್ಲದೆ, ಹುಡೇಂ ಬಳಿ ಹರಿಯುವ ಚಿನ್ನಹಗರಿ ಉಪನದಿಗೂ ಕಳೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.