

ಕಾರವಾರ: ಕದ್ರಾ ಅಣೆಕಟ್ಟೆಯಿಂದ 4 ಗೇಟ್‌ಗಳನ್ನು ಗುರುವಾರ ಸಾಯಂಕಾಲ 5.45 ರ ಹೊತ್ತಿಗೆ ತೆರೆದು 12 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ವಿದ್ಯುತ್ ಉತ್ಪಾದನೆ ಮಾಡಿ ಒಟ್ಟು 21 ಸಾವಿರ ಕ್ಯೂಸೆಕ್ ನೀರು ಹೊರಗೆ ಹೋಗುತ್ತಿದೆ. ಒಟ್ಟಾರೆ 33 ಸಾವಿರ ಕ್ಯೂಸೆಕ್ ನೀರನ್ನು ಕಾಳಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಕಾಳಿ ನದಿಯ ಅಕ್ಕಪಕ್ಕದ ಹಲವು ಗ್ರಾಮಗಳಲ್ಲಿ ನೆರೆಯ ಭೀತಿ ಎದುರಾಗಿದೆ. ಅಣೆಕಟ್ಟೆಯಿಂದ ನೀರು ಹೊರ ಬಿಡುವ ಬಗ್ಗೆ ಮೊದಲ ಮುನ್ಸೂಚನೆ ನೀಡಲಾಗಿದೆ. ಮಾತ್ರವಲ್ಲದೇ ವಾಹನದಲ್ಲಿ ಮೈಕ್‌ಗಳ ಮೂಲಕ ಮುನ್ನೆಚ್ಚರಿಕೆ ಸಂದೇಶ ರವಾನಿಸಲಾಯಿತು.
ರೆಡ್ ಅಲರ್ಟ್
ಜು.4 ರಂದು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.5 ಹಾಗೂ 6 ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ 100 ಮಿಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ಗುರುವಾರ ಬೆಳಗಿನ ವರದಿ ತಿಳಿಸಿದೆ. ಕದ್ರಾದಲ್ಲಿ 187 ಮಿಮೀ, ಗೋಟೆಗಾಳಿಯಲ್ಲಿ 185.5 ಮಿಮೀ, ವೈಲವಾಡದಲ್ಲಿ 166 ಮಿಮೀ, ಅಸ್ನೋಟಿಯಲ್ಲಿ 144 ಮಿಮೀ, ಶಿರಸಿ ಶಿವಳ್ಳಿ-139, ಕುಮಟಾ ಸೊಪ್ಪಿನ ಹೊಸಳ್ಳಿಯಲ್ಲಿ 131, ಮಿಮೀ ಮಳೆಯಾಗಿದೆ.