

ಜಲಮೂಲ, ಮಳೆಗಾಲ, ಅಂತರ್ಜಲ ವೃದ್ಧಿ, ಬೆಳಗಾವಿ Water resources, rainy season, groundwater recharge, Belgaum
ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಕೆರೆ, ಬಾವಿ ಹಳ್ಳಿಗರ ಪ್ರಮುಖ ಜಲಮೂಲಗಳಾಗಿವೆ. ಮಳೆಗಾಲದಲ್ಲಿ ಒಮ್ಮೆ ಭರ್ತಿಯಾದರೆ ಸಾಕು ವರ್ಷಪೂರ್ತಿ ನೀರಿನ ಚಿಂತೆ ದೂರವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆ, ಬಾವಿಗಳಲ್ಲಿ ಹೂಳು ತುಂಬಿ ನೀರು ಸಂಗ್ರಹ ಪ್ರಮಾಣ ಕ್ಷೀಣಿಸುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಹೂಳು ತುಂಬಿ ಕೆರೆ, ಬಾವಿಗಳೇ ಕಣ್ಮರೆಯಾಗಿವೆ. ಇದೀಗ ಮಳೆಗಾಲ ಸಮೀಪಿಸುತ್ತಿದ್ದು, ಈಗಲೇ ಕೆರೆ ಸೇರಿದಂತೆ ಜಲಮೂಲಗಳ ಹೂಳು ತೆಗೆದು ಮಳೆ ನೀರು ಕೆರೆ ತುಂಬುವಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಮಳೆಗಾಲ ಬಂತು ಎಂದರೆ ಎಲ್ಲರಿಗೂ ಸಂತಸ. ಉತ್ತಮ ಮಳೆಯಾಗಿ ಕುಡಿಯಲು, ಬೆಳೆಗಳಿಗೆ ನೀರು ದೊರೆತು ನೆಮ್ಮದಿಯ ಜೀವನ ನಡೆಸಬಹುದು. ಇದೇ ಕಾರಣಕ್ಕೆ ಬೇಸಿಗೆ ಮುಗಿದು ಮಳೆಗಾಲ ಯಾವಾಗ? ಬರುತ್ತದೆಯೋ ಎಂದು ಜನರು ಕಾಯುತ್ತಾ ಕುಳಿತಿರುತ್ತಾರೆ. ಇದೀಗ ಮಳೆಗಾಲ ಸನ್ನಿಹವಾಗುತ್ತಿದ್ದಂತೆ ಬೇಸಿಗೆಯಲ್ಲಿ ಬಾಯ್ದೆರೆದ ಕೆರೆ, ಕಟ್ಟೆ, ಬಾವಿಗಳು ನೀರು ಸಂಗ್ರಹಿಸಲು ಕಾತುರವಾಗಿವೆ. ಆದರೆ, ಅಧಿಕಾರಿಗಳು ಮಾತ್ರ ಮಳೆಗಾಲಕ್ಕೆ ಬೇಕಾದ ಕೆರೆ, ಬಾವಿಗಳ ಹೂಳೆತ್ತುವ ಕಾರ್ಯ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
850ಕ್ಕೂ ಅಧಿಕ ಕೆರೆಗಳಲ್ಲಿ ಹೂಳು: ಸದ್ಯ ಜಿಲ್ಲೆಯಲ್ಲಿ ಜಿಪಂ, ತಾಪಂ, ಗ್ರಾಪಂ ವ್ಯಾಪ್ತಿಯಲ್ಲಿ 5ರಿಂದ 10 ಎಕರೆ ವಿಸ್ತೀರ್ಣ, ಕಂದಾಯ ಇಲಾಖೆಯಲ್ಲಿ 50 ರಿಂದ 60 ಎಕರೆ ವಿಸ್ತೀರ್ಣ, ಬೃಹತ್ ನೀರಾವರಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಒಡೆತನದಲ್ಲಿ 80 ರಿಂದ 150 ಎಕರೆ ವಿಸ್ತೀರ್ಣದ ವರಗಿನ ಕೆರೆಗಳು ಸೇರಿ ಅಂದಾಜು ಒಟ್ಟು 1180 ಕೆರೆಗಳಿವೆ. ಆದರೆ, ಈ ಕೆರೆಗಳ ಪೈಕಿ 850ಕ್ಕೂ ಅಧಿಕ ಕೆರೆಗಳು ಹೂಳು ತುಂಬಿ ನೀರಿನ ಸಂಗ್ರಹ ಪ್ರಮಾಣ ಶೇ.28ರಷ್ಟು ಕಡಿಮೆಯಾಗಿದೆ. ಜತೆಗೆ ಅಂತರ್ಜಲ ವೃದ್ಧಿಗೆ ಪೂರಕವಾಗುಷ್ಟು ಕೆರೆಗಳಲ್ಲಿ ನೀರು ಸಂಗ್ರಹ ಸಾಮರ್ಥ್ಯ ಇಲ್ಲದೇ ಇರುವುವದು ಜನರ ಚಿಂತೆಗೆ ಕಾರಣವಾಗಿದೆ.
ಜಲಮೂಲ ಬಂದ್: ಜಿಲ್ಲೆಯ 14 ತಾಲೂಕಿನ 500 ಗ್ರಾಪಂಗಳ ಮಾಹಿತಿ ಪ್ರಕಾರ 5 ಸಾವಿರಕ್ಕೂ ಅಧಿಕ ಸಾರ್ವಜನಿಕ, ಖಾಸಗಿ ತೆರೆದ ಬಾವಿಗಳಿದ್ದು, ಅದರಲ್ಲಿ ಶೇ.42ರಷ್ಟು ಬಾವಿಗಳಲ್ಲಿ ಮಾತ್ರ ನೀರು ಸಂಗ್ರಹವಿದೆ. ಇನ್ನೂಳಿದ ಬಾವಿಗಳಿಗೆ ಜಲ ಮೂಲ ಬಂದ್ ಆಗಿರುವುದು, ಬಳಕೆ, ನಿರ್ವಹಣೆ ಇಲ್ಲದೇ ಸಂಪೂರ್ಣ ಹಾಳಾಗಿದೆ. ಈ ಎಲ್ಲ ಬಾವಿಗಳ ಪುನಶ್ಚೇತನಗೊಳಿಸಿದರೆ ಶೇ.20ರಷ್ಟು ಅಂತರ್ಜಲ ವೃದ್ಧಿ ಆಗಲಿದೆ. ಆದರೆ, ಬಹುತೇಕ ಕಡೆ ರೈತರು ತೆರೆದ ಬಾವಿಗಳನ್ನು ಮುಚ್ಚಿ ಕೃತಕ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಬೇಸಿಗೆ ಕಾಲದಲ್ಲಿಯೇ ಕೆರೆ, ಬಾವಿಗಳಲ್ಲಿ ತುಂಬಿರುವ ಹೂಳು ತೆಗೆದರೆ ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಸಾಧ್ಯವಾಗುತ್ತದೆ.
ಈಗಾಗಲೇ ಜಲಾಮೃತ ಯೋಜನೆಯಡಿ ಪಂಚಾಯತ್ ರಾಜ್ 105 ಮತ್ತು ಸಣ್ಣ ನೀರಾವರಿ 45 ಕೆರೆಗಳ ಸೇರಿದಂತೆ 150 ಕೆರೆಗಳ ಹೂಳೆತ್ತುವ ಕಾಮಗಾರಿ ಪೂರ್ಣಗೊಂಡಿವೆ. ಆದರೆ, ಮಳೆ ನೀರು ಸರಾಗವಾಗಿ ಹರಿದು ಬರುವ ಮಾರ್ಗ, ಜಲಮೂಲಗಳ ಮಾರ್ಗ ಸಂಪೂರ್ಣ ಬಂದ್ ಆಗಿವೆ. ಗೋಕಾಕ, ರಾಯಬಾಗ, ಮೂಡಲಗಿ, ಸವದತ್ತಿ, ರಾಮದುರ್ಗ, ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ, ಅಥಣಿ, ಬೈಲಹೊಂಗಲ ಸೇರಿ ವಿವಿಧ ತಾಲೂಕುಗಳಲ್ಲಿ ರೈತರು, ಸಾರ್ವಜನಿಕರು ಕೆರೆಗಳಿಗೆ ನೀರು ಹರಿದು ಬರುತ್ತಿದ್ದ ಮಾರ್ಗಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಸಣ್ಣ ನೀರಾವರಿ, ಜಿಪಂ ನರೇಗಾ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ನರೇಗಾ ಯೋಜನೆ ಅಡಿಯಲ್ಲಿ ಕೆರೆಗಳಲ್ಲಿ ತುಂಬಿರುವ ಹೂಳನ್ನು ಎತ್ತುವ ಕೆಲಸ ಪ್ರಗತಿಯಲ್ಲಿದೆ. ಕೆರೆಗಳಿಗೆ ಮಳೆ ನೀರು ಹರಿದು ಬರಲು ಅಲ್ಲಲ್ಲಿ ಕಾಲುವೆ ಮಾರ್ಗ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆಗಾಲ ಪೂರ್ವದಲ್ಲಿ ಎಲ್ಲ ಕೆರೆಗಳ ಸ್ವಚ್ಛತೆ ಕೆಲಸ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ತೆರೆದ ಬಾವಿಗಳ ಸರ್ವೇ ನಡೆಸಲು ಸೂಚಿಸಲಾಗಿದೆ. -ರಾಹುಲ ಶಿಂಧೆ, ಜಿಪಂ ಸಿಇಒ