20 ಕೋಟಿ ರೂ. ವೆಚ್ಚದಲ್ಲಿ ಜಲಮೂಲ ರಕ್ಷಣೆ

_MCCMYSURU
Published on

ಅವಿನಾಶ್ ಜೈನಹಳ್ಳಿ ಮೈಸೂರು

ಅಮೃತ್ 2.0 ಯೋಜನೆಯಡಿ ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ನಗರದ ಜಲಮೂಲಗಳನ್ನು ರಕ್ಷಿಸುವ ನಾಲ್ಕು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಏರುಮುಖವಾಗಿದ್ದು, ಇತ್ತೀಚೆಗೆ ಮೈಸೂರು ನಗರದಲ್ಲಿಯೂ ಗರಿಷ್ಠ 38 ಡಿಗ್ರಿ ತಾಪಮಾನ ದಾಖಲಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಪರಿಸರ ಕಾಪಾಡುವ ಉದ್ದೇಶದಿಂದ ನಗರ ಪ್ರದೇಶದ ಜಲಮೂಲಗಳನ್ನು ರಕ್ಷಣೆ ಮಾಡುವ ಮೂಲಕ ಹಸಿರು ಪ್ರದೇಶವನ್ನು ಉಳಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ. ಅದಕ್ಕಾಗಿ ಅಮೃತ್ 2.0 ಯೋಜನೆಯಡಿ ಒಟ್ಟು 20 ಕೋಟಿ ರೂ. ವೆಚ್ಚದಲ್ಲಿ ಗುಬ್ಬಲಿ ಕೆರೆ, ಸರಸ್ವತಿಪುರಂ ಕಲ್ಯಾಣಿ, ಬೋಗಾದಿ ಕೆರೆ, ಅಯ್ಯಜಯ್ಯನ ಹುಂಡಿ ಕೆರೆ ಅಭಿವೃದ್ಧಿಪಡಿಸುವ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂಬರುವ ಬಜೆಟ್‌ನಲ್ಲಿ ಇದಕ್ಕೆ ಅನುಮೋದನೆ ದೊರೆಯುವ ವಿಶ್ವಾಸವಿದೆ ಎಂದು ಪಾಲಿಕೆ ಅಧೀಕ್ಷಕ ಇಂಜಿನಿಯರ್ ಕೆ.ಜೆ.ಸಿಂಧು ತಿಳಿಸಿದರು.

ಗುಬ್ಬಲಿ ಕೆರೆ ಅಭಿವೃದ್ಧಿ

ಚಾಮುಂಡಿ ಬೆಟ್ಟದ ತಪ್ಪಲಿನ 15.11 ಎಕರೆ ಜಾಗದಲ್ಲಿರುವ ಗುಬ್ಬಲಿ ಕೆರೆಯನ್ನು 4.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆ ಜಲಾನಯನ ಪ್ರದೇಶದಲ್ಲಿ ಹೂಳೆತ್ತುವುದು, ಹೆಚ್ಚು ನೀರು ಸಂಗ್ರಹವಾದಾಗ ಕೆರೆ ಏರಿ ಕೊಚ್ಚಿ ಹೋಗದಿರಲಿ ಎಂಬ ಕಾರಣಕ್ಕೆ ಏರಿಯ ಒಂದು ಮಗ್ಗಲಿಗೆ ಕಲ್ಲುಗಳನ್ನು ಅಳವಡಿಸಿ ಭದ್ರಗೊಳಿಸುವ ಸ್ಟೋನ್ ರಿವಿಟ್‌ಮೆಂಟ್ ಕೆಲಸ, ಕೆರೆಗೆ ನೀರು ತರುವ ಪೋಷಕ ಕಾಲುವೆ ಹಾಗೂ ಕೆರೆಯ ಮುಂಭಾಗಕ್ಕೆ ನೀರು ಹರಿದು ಹೋಗುವ ರಾಜ ಕಾಲುವೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ ವಾಕಿಂಗ್‌ಪಾತ್ ನಿರ್ಮಿಸಿ ಬೆಳಕು ಹಾಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ.

ಸರಸ್ವತಿಪುರಂ ಕಲ್ಯಾಣಿಗೆ ಮರುಜೀವ

ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜುಕೊಳದ ಪಕ್ಕದಲ್ಲಿ 18 ಗುಂಟೆ ಜಾಗದಲ್ಲಿರುವ ಕಲ್ಯಾಣಿ ಸದ್ಯ ಯುಜಿಡಿ ನೀರು ತುಂಬಿಕೊಂಡು ಅಭಿವೃದ್ಧಿ ಕಾಣದೆ ಗಬ್ಬು ನಾರುತ್ತಿದೆ. ಇದನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು 4 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕಾಲುವೆಗಳ ಅಭಿವೃದ್ಧಿ, ಕಲ್ಯಾಣಿಯನ್ನು ಸಂಪೂರ್ಣ ಜೀರ್ಣೋದ್ಧಾರಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ.

ಬೋಗಾದಿ ಕೆರೆ, ಅಯ್ಯಜಯ್ಯನಕೆರೆಗೆ ಕಾಯಕಲ್ಪ

ನಗರದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದಾಗ ಸಂಪೂರ್ಣ ತುಂಬಿ ತುಳುಕುವ ಬೋಗಾದಿಯ 22 ಎಕರೆ ಜಾಗದಲ್ಲಿರುವ ಬೋಗಾದಿ ಕೆರೆ ನಗರದ ಜೀವನಾಡಿಯಂತಿದೆ. ಇದನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಉದ್ದೇಶದಿಂದ 7 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇದಲ್ಲದೆ 8 ಎಕರೆ ಜಾಗದಲ್ಲಿರುವ ನಗರದ ದಟ್ಟಗಳ್ಳಿ 3ನೇ ಹಂತದಲ್ಲಿರುವ ಅಯ್ಯಜಯ್ಯನ ಹುಂಡಿ ಕೆರೆ ಅಭಿವೃದ್ಧಿಗೆ 4.5 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಎರಡೂ ಕೆರೆಗಳಲ್ಲಿ ಹೂಳೆತ್ತುವುದು, ಪಾಥ್‌ವೇ ನಿರ್ಮಾಣ, ಕೆರೆ ಏರಿ ಬಲವರ್ಧನೆ, ಅರಣ್ಯೀಕರಣ, ಓಪನ್ ಜಿಮ್, ಮಕ್ಕಳ ಆಟದ ಉಪಕರಣ ಅಳವಡಿಸುವುದು, ವಿದ್ಯುದ್ದೀಕರಣ, ಪೋಷಕ ಕಾಲುವೆ ಹಾಗೂ ರಾಜಕಾಲುವೆಗಳ ಅಭಿವೃದ್ಧಿ, ಮೂಲಸೌಕರ್ಯ ಒದಗಿಸುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಬೋಗಾದಿ ಕೆರೆಗೆ ಯುಜಿಡಿ ನೀರು ಬಂದು ಸೇರುವಲ್ಲಿ ಎಸ್‌ಟಿಪಿ ಅಳವಡಿಸಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net