ಜಲನಯನ ಪ್ರದೇಶಗಳ ಮಾಹಿತಿ ನೀಡಲು ಇಲಾಖೆ ಅಧಿಕಾರಿಗಳು, ಪಿಡಿಒಗಳಿಗೆ ತಾಪಂ ಪ್ರಭಾರ ಇಒ ಸೂಚನೆ

050820 Sanduru TP KDP Meeting
ಸಂಡೂರು ತಾಪಂನ ಎಂ.ವೈ.ಘೋರ್ಪಡೆ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಉದ್ದೇಶಿಸಿ ಪ್ರಭಾರ ಇಒ ಕೆ.ಆರ್.ಪ್ರಕಾಶ ಬುಧವಾರ ಮಾತನಾಡಿದರು.
Published on

ಸಂಡೂರು: ತಾಲೂಕಿನ ಕೆರೆಗಳಿಗೆ ಮಳೆ ನೀರು ಹರಿದು ಬರುವ ಪ್ರದೇಶಗಳನ್ನು ಉದ್ಯೋಗಖಾತ್ರಿಯನ್ವಯ ಅಭಿವೃದ್ಧಿ ಪಡಿಸಲು ಮೇಲಧಿಕಾರಿಗಳಿಂದ ಸೂಚನೆ ಬಂದಿದ್ದು, ಅಂಥ ಜಲನಯನ ಪ್ರದೇಶಗಳ ಮಾಹಿತಿ ನೀಡುವಂತೆ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ತಾಪಂ ಪ್ರಭಾರ ಇಒ ಕೆ.ಆರ್.ಪ್ರಕಾಶ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು. ತಾಲೂಕಾದ್ಯಂತ ಉತ್ತಮ ಮಳೆಯಾಗುತ್ತಿದೆ. ಚೋರನೂರು, ಕಾಳಿಂಗೇರಿ, ಸೋವೇನಹಳ್ಳಿ, ವಿಠಲಾಪುರ ಹೊರತುಪಡಿಸಿ ಬಹುತೇಕ ಕೆರೆ, ಚೆಕ್‌ಡ್ಯಾಮ್‌ಗಳು ಭರ್ತಿಯಾಗಿವೆ. ಮತ್ತೊಂದೆಡೆ ರೈತರ ಜಮೀನುಗಳಲ್ಲಿ ಬಿತ್ತನೆಯಾಗಿದೆ. ಇದರಿಂದ ಗ್ರಾಮೀಣ ಕೂಲಿಕಾರರಿಗೆ ಕೆಲಸವಿಲ್ಲದಂತಾಗಿದೆ. ಉದ್ಯೋಗಖಾತ್ರಿಯನ್ವಯ ಕೆಲಸ ಒದಗಿಸಲು ಕೆರೆಗಳಿಗೆ ನೀರು ಹರಿದು ಬರುವ ಜಲನಯನ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಸಣ್ಣ ಪ್ರಮಾಣದ ಮಳೆ ಬಂದರೂ ಕೆರೆಗಳಿಗೆ ನೀರು ಬರುತ್ತವೆ. ಜತೆಗೆ ಕೂಲಿಕಾರರಿಗೆ ಕೆಲಸ ಒದಗಿಸಿದಂತಾಗುತ್ತದೆ. ಇನ್ನು ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾದಂತೆ ಸ್ವಚ್ಛತೆ ಮತ್ತು ಫಾಗಿಂಗ್ ಮಾಡಿಸಬೇಕು ಎಂದು ಪಿಡಿಒಗಳಿಗೆ ಇಒ ಸೂಚನೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, ಸಂಡೂರು ಹೋಬಳಿ 421ಮಿ.ಮೀ. ಚೋರನೂರು 410, ತೋರಣಗಲ್ ಹೋಬಳಿ 246 ಮಿ.ಮೀ ಮಳೆಯಾಗಿದೆ. ಇದು ಜುಲೈವರೆಗಿನ ವಾಡಿಕೆಗಿಂತ ಶೇ.20ರಿಂದ 40 ಅಧಿಕ ಮಳೆಯಾಗಿದೆ. 30ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 21,553 ಹೆ. ಬಿತ್ತನೆಯಾಗಿದೆ. ಉತ್ತಮ ಮಳೆ ಜತೆಗೆ ಎಚ್‌ಎಲ್‌ಸಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು ಕುರೇಕುಪ್ಪ, ದರೋಜಿ ಭಾಗದಲ್ಲಿ ಭತ್ತದ ಸಸಿ ನಾಟಿ ಮಾಡಲಾಗುತ್ತಿದೆ. ಬಿತ್ತನೆ ಬೀಜ ವಿತರಣೆ ಪೂರ್ಣಗೊಂಡಿದ್ದು, ಅಗತ್ಯ ಗೊಬ್ಬರ, ಔಷಧಗಳನ್ನು ಸರ್ಕಾರ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು, ಖರೀದಿಸಿದ ರೈತರಿಗೆ ರಸೀದಿ ನೀಡುವಂತೆ ಡೀಲರ್ಸ್‌ ಮತ್ತು ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಉದ್ಯೋಗ ಖಾತ್ರಿ ಕಾಮಗಾರಿಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಎಡಿಎಗೆ ತಾಪಂ ಅಧ್ಯಕ್ಷೆ ಫರ್ಜಾನಾ ಜಿ.ಆಜಂ ಸೂಚಿಸಿದರು. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧಕುಡಿಯುವ ಘಟಕಗಳ ಮೂಲಕ ನೀರನ್ನು ಒದಗಿಸಬೇಕು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೆ (ಆರ್‌ಡಬ್ಲ್ಯೂಎಸ್) ಎಇಇ ಎಂ.ಎನ್.ವಿನಾಯಕ್‌ಗೆ ಇಒ ಸೂಚಿಸಿದರು. ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು. ತಾಪಂ ಯೋಜನಾಧಿಕಾರಿ ಶಿವರಾಜ್, ಪ್ರಭಾರ ವ್ಯವಸ್ಥಾಪಕ ಲೋಕೇಶಬಾಬು ಸೇರಿ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ಬೆಳೆವಿಮೆ ನೋಂದಣಿಗೆ 14ರವರೆಗೆ ವಿಸ್ತರಣೆ
ಕಳೆದ ಬಾರಿ ಮುಸುಕಿನ ಜೋಳ ಬೆಳೆದು, ನಷ್ಟವಾಗಿದ್ದ 6,650 ರೈತರ ಪೈಕಿ 5257 ರೈತರ ಖಾತೆಗೆ 5ಸಾವಿರ ರೂ. ಪರಿಹಾರ ಧನ ಜಮಾ ಮಾಡಲಾಗಿದೆ. ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳ ವ್ಯತ್ಯಾಸವಿರುವ ಕಾರಣ ಉಳಿದವರಿಗೆ ಬಂದಿಲ್ಲ. ಅಂಥವರು ಕೂಡಲೇ ಬ್ಯಾಂಕ್ ಮತ್ತು ಆರ್‌ಎಸ್‌ಕೆಗಳಿಗೆ ತೆರಳಿ ಸರಿಪಡಿಸಿಕೊಳ್ಳಬೇಕು. ರೈತರು ಫಸಲ್ ಬಿಮಾ (ಬೆಳೆವಿಮೆ) ಯೋಜನೆಯನ್ವಯ ನೋಂದಣಿ ಮಾಡಿಕೊಳ್ಳಲು ಆ.14ರವರೆಗೆ ವಿಸ್ತರಣೆ ಮಾಡಲಾಗಿದೆ. ಜು.3ನೇ ವಾರದಲ್ಲಿ ಸುರಿದ ಮಳೆಗೆ ಚೋರನೂರು, ಸಂಡೂರು ಹೋಬಳಿಗಳಲ್ಲಿ 98 ಹೆ.ನಷ್ಟು ಬೆಳೆ ಹಾನಿಯಾಗಿದ್ದು, ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಮಾಡಬೇಕಿದೆ. ಉದ್ಯೋಗಖಾತ್ರಿ ಕಾಮಗಾರಿಗಳಲ್ಲಿ ಈಗಾಗಲೇ ಶೇ.69 ಗುರಿ ಸಾಧಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ರೆಡ್ಡಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net