

ಸವಣೂರ: ಪಟ್ಟಣದ ಮೋತಿ ತಲಾಬ್ (ದೊಡ್ಡಕೆರೆ)ನ ಒಡ್ಡು ಒಡೆದು ರೈತರು, ಸ್ಥಳಿಯ ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿತ್ತು.
ಸುಮಾರು 190 ಎಕರೆ ವಿಸ್ತೀರ್ಣದ ಪಟ್ಟಣದ ಮೋತಿ ತಲಾಬ್ ನಿರಂತರ ಮಳೆಗೆ ತುಂಬಿ ಕೋಡಿ ಬೀಳುವ ಹಂತದಲ್ಲಿದೆ. ಆದರೆ, ಕೆರೆ ದಂಡೆ ಸುತ್ತಲು ಪಿಚ್ಚಿಂಗ್ ಇಲ್ಲ, ಕೆರೆ ನಿರ್ವಹಣೆ ಇಲ್ಲದ ಕಾರಣ ಶತಮಾನ ಕಂಡ ದೊಡ್ಡಕೆರೆ ವಿಷ್ಣುತಿರ್ಥ ಹಾದಿಯಲ್ಲಿ ಮಂಗಳವಾರ ಸಂಜೆಯಿಂದ ಸಣ್ಣದಾಗಿ ನೀರು ಹೊರ ಸೂಸುತ್ತಲಿತ್ತು. ಇದನ್ನು ಕಂಡ ರೈತ ಸಂಘದ ಪದಾಧಿಕಾರಿಗಳು ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗೆ ಒತ್ತಾಯಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡ ತಹಸೀಲ್ದಾರ್ ಭರತರಾಜ್ ಕೆ.ಎನ್., ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಂಪಕಿರ್ಸಿ, ಕೆರೆ ಒಡ್ಡು ಒಡೆಯುತ್ತಿರುವುದನ್ನು ತಡೆಯಲು ಅವಶ್ಯವಾಗಿರುವ ಕಾಮಗಾರಿ ಆರಂಭಿಸಿಲು ಸೂಚಿಸಿದರು. ಅಧಿಕಾರಿಗಳು ಕಾಮಿರ್ಕರ ತಂಡದೊಂದಿಗೆ ರಾತ್ರಿಯೇ ಆಗಮಿಸಿ, ಹೊರ ಸೂಸುತ್ತಿದ್ದ ನೀರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ನಂತರ ಮಾತನಾಡಿ, ಈಗಾಗಲೇ ನೀರಾವರಿ ಇಲಾಖೆೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ರೀತಿಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಕೆರೆಯ ವೀಸ್ತಿರ್ಣ ಹೆಚ್ಚಿದೆ. ಕೆರೆ ಸುತ್ತಲು ಕೂಡಲೇ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಮುಖ್ಯ ಇಂಜಿನಿಯರ್ ನಾಗರಾಜ ಮಿಜಿರ್, ರೈತ ಸಂಘದ ಪದಾಧಿಕಾರಿ ಸಂಗಮೇಶ ಪೀತಾಂಭ್ರಶೆಟ್ಟಿ ಹಾಗೂ ಇತರರು ಇದ್ದರು.