

ಮಂಗಳೂರು: ಎಎಂಆರ್‌ನಿಂದ ತುಂಬೆಗೆ 5 ಮೀಟರ್ ನೀರು ಬಿಡುಗಡೆ ಮಾಡಿರುವುದದರಿಂದ ಸದ್ಯಕ್ಕೆ ತುಂಬೆ ಡ್ಯಾಂ ಮಟ್ಟ 4.2 ಮೀಟರ್‌ಗೆ ಏರಿಕೆಯಾಗಿದೆ. ಈ ನೀರು ಮಂಗಳೂರು- ಸುರತ್ಕಲ್ ವ್ಯಾಪ್ತಿಗೆ ಮುಂದಿನ 25 ದಿನಗಳಿಗೆ ಪೂರೈಕೆಗೆ ಸಾಕಾಗಬಹುದು. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ನೀರು ಪೂರೈಕೆ ರೇಷನಿಂಗ್ ಕ್ರಮ 2 ದಿನದೊಳಗೆ ಪಾಲಿಕೆ ಹಿಂಪಡೆಯಲಿದೆ.
ಜೂನ್ 5 ರ ಸಂಜೆ ತುಂಬೆ ನೀರಿನ ಮಟ್ಟ 1.8 ಮೀ.ಗೆ ಇಳಿದು ಇತಿಹಾಸದಲ್ಲೇ ಮೊದಲಬಾರಿ ಕನಿಷ್ಠ ಇಳಿಕೆ ದಾಖಲಾಗಿತ್ತು. ಜತೆಗೆ ಹರೇಕಳ ಡ್ಯಾಂನಿಂದ ಪ್ರತಿದಿನ 50 ರಿಂದ 60 ಎಂಎಲ್‌ಡಿ ನೀರು ತುಂಬೆ ಡ್ಯಾಂಗೆ ಪಂಪ್ ಮಾಡಲಾಗುತ್ತಿದೆ. ಜೂನ್ 6ರಂದು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಎಎಂಆರ್ ನೀರನ್ನು ತುಂಬೆಗೆ ಹರಿಸಿದ್ದರಿಂದ ಪ್ರಸ್ತುತ ತುಂಬೆ ಡ್ಯಾಂ ಮಟ್ಟ 4.2 ಮೀಟರ್‌ಗೆ ಏರಿಕೆಯಾಗಿದೆ. ಈ ನೀರನ್ನು ಮುಂದಿನ 25 ದಿನಗಳ ವರೆಗೆ ಪ್ರತಿದಿನ ಮಂಗಳೂರಿಗೆ ಅಗತ್ಯವಿರುವ 160 ಎಂಎಲ್‌ಡಿ ನೀರು ಸರಬರಾಜು ಮಾಡಲು ಸಾಧ್ಯವಿದೆ ಎಂದು ಪಾಲಿಕೆ ತಿಳಿಸಿದೆ.
ಮಂಗಳೂರು ವಿವಿ ಕೊಣಾಜೆ ಕ್ಯಾಂಪಸ್‌ನಲ್ಲಿ ಪಾಣೆಮಂಗಳೂರು ನೇತ್ರಾವತಿ ಕಡೆಯಿಂದ ಪ್ರತ್ಯೇಕವಾದ ಪೈಪ್‌ಲೈನ್ ವ್ಯವಸ್ಥೆ ಹಾಗೂ ವಿವಿ ತನ್ನದೇ ಪಂಪ್‌ಹೌಸ್ ಹೊಂದಿದ್ದರಿಂದ ನೀರಿನ ಸಮಸ್ಯೆ ಆಗಿಲ್ಲ. ಆದರೆ ಮಂಗಳೂರು ಗ್ರಾಮಾಂತರ ಭಾಗದ ಕೆಂಜಾರು, ಮೂಡುಬಿದಿರೆ, ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ನೀರಿನ ಕೊರತೆ ಕಂಡುಬಂದಿದೆ. ಮಂಗಳೂರು ನಗರದ ಎತ್ತರ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ನೀರು ಪೂರೈಲು ಸಾಧ್ಯವಾಗದಿರುವುದರಿಂದ ಬಹುತೇಕ ಪ್ರದೇಶಕ್ಕೆ ಟ್ಯಾಂಕರ್ ಮೂಲಕ ಈರು ಪೂರೈಕೆಯಾಗುತ್ತಿದೆ.
ನಗರದ ಹಲವು ಪ್ರದೇಶಗಳಿಗೆ ರಸ್ತೆ ಕಾಮಗಾರಿ, ದುರಸ್ತಿ ಕಾರ್ಯಗಳಿಂದ ಪೈಪ್ ಲೇನ್ ತುಂಡರಿಸಲಾಗಿದೆ. ಈ ಪ್ರದೇಶಗಳಿಗೆ ನೀರು ಪೂರೈಸಲು ತಾಂತ್ರಿಕ ತೊಂದರೆ ಎದುರಾಗಿದ್ದು, ತಕ್ಷಣದಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದ್ದಾರೆ. ಬಜಾಲ್, ಯೆಯ್ಯಡಿ, ಜಲ್ಲಿಗುಡ್ಡೆ, ಎಕ್ಕೂರು ಭಾಗದ ಹಲವೆಡೆ ಪಾಲಿಕೆಯ ಕುಡಿಯುವ ನೀರಿನ ಪೂರೈಕೆ ಸಮರ್ಪಕ ರೀತಿಯಲ್ಲಿ ನಡೆಯದಿರುವುದರಿಂದ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ಸದ್ಯಕ್ಕೆ ತುಂಬೆ ಡ್ಯಾಂ ನೀರಿನ ಮಟ್ಟ 4.2ಮೀ.ಗೆ ಏರಿಕೆಯಾಗಿದ್ದು, ಮುಂದಿನ 25 ದಿನಗಳವರೆಗೆ ಮಂಗಳೂರಿಗೆ ಪ್ರತಿದಿನ ನಿರಂತರ 160 ಎಂಎಲ್‌ಡಿ ನೀರು ಸರಬರಾಜು ಮಾಡಲು ಸಾಧ್ಯವಿದೆ. ಮುಂದಿನ 2 ದಿನದೊಳಗೆ ರೇಷನಿಂಗ್ ನೀರು ಪೂರೈಕೆ ವ್ಯವಸ್ಥೆ ಸ್ಥಗಿತಗೊಳಿಸಿ ಪ್ರತಿದಿನ ನೀರು ಪೂರೈಸಲು ಚಿಂತಿಸಲಾಗಿದೆ. ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ತೀರ್ಮಾನ ತಿಳಿಸಲಾಗುವುದು.- ಚನ್ನಬಸಪ್ಪ, ಮನಪಾ ಆಯುಕ್ತ https://www.vijayavani.net/water-problem-for-kudla-in-future