ಸಾರಿಗೆ ಇಲಾಖೆ ಮಾದರಿಯಲ್ಲಿ ನೀರಿನ ದರ ಪರಿಷ್ಕರಣೆ: ಡಿಸಿಎಂ ಡಿಕೆಶಿ ಹೇಳಿಕೆ

water record
Published on

ಬೆಂಗಳೂರು: ಬೆಂಗಳೂರು ಜಲಮಂಡಳಿಯನ್ನು ನಷ್ಟದಿಂದ ಲಾಭದ ಹಳಿಗೆ ತರುವ ಸಂಬಂಧ ಸಾರಿಗೆ ಇಲಾಖೆ ಮಾದರಿಯಲ್ಲಿ ನೀರಿನ ದರ ಪರಿಷ್ಕರಣೆ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಜಲಮಂಡಳಿಯು ಕಳೆದ ಮಾ.21ರಿಂದ 28ರವರೆಗೆ ಕೈಗೊಂಡಿದ್ದ ‘ಜಲ ಸಂರಕ್ಷಣೆ ಅಭಿಯಾನ’ದಲ್ಲಿ 5,33,642 ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದು ಗಿನ್ನಿಸ್ ವಿಶ್ವದಾಖಲೆಯಾಗಿತ್ತು. ಈ ಸಂಬಂಧ ನಗರದ ಖಾಸಗಿ ಹೊಟೇಲ್ನಲ್ಲಿ ಭುಧವಾರ ನಡೆದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಸಪ್ನಿಲ್ ದಂಗರಿಕರ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ವಿಶ್ವದಾಖಲೆಯ ಸರ್ಟಿಫಿಕೇಟ್ ವಿತರಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ದೆಹಲಿ ಸೇರಿ ಬೇರೆ ನಗರಗಳಲ್ಲಿ ಕುಡಿಯುವ ನೀರು ಹಾಗೂ ದಿನಬಳಕೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ಆದರೆ ಬೆಂಗಳೂರಿನಲ್ಲಿ ಕುಡಿಯಲು, ವಾಹನ ಸ್ವಚ್ಛತೆ, ಗಿಡಗಳಿಗೆ ಹಾಕಲು ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. ಆದರೂ, ಶೇ.35 ಮಂದಿ ನೀರಿನ ಬಿಲ್ ಪಾವತಿಸುತ್ತಿಲ್ಲ. ಹಾಗಾಗಿ 2 ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

1 ಸಾವಿರ ಕೋಟಿ ರೂ. ನಷ್ಟ:

ಬೆಂಗಳೂರಿನ ಒಳಗೆ 1.40 ಕೋಟಿ ಜನಸಂಖ್ಯೆ ಇದ್ದು, ಹೊರಭಾಗದಲ್ಲಿ ಆನೇಕಲ್ ಹಾಗೂ ಇತರ ಭಾಗದಲ್ಲಿ 50 ಲಕ್ಷ ಜನ ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ಜಲಮಂಡಳಿ ನೀರು ಪೂರೈಕೆ ಮಾಡುತ್ತಿದೆ. ಆದರೆ, ಕಳೆದ 10 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ. ಇದರಿಂದ ಮಂಡಳಿಯು ವಾರ್ಷಿಕವಾಗಿ 500 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ದಾಖಲೆ ಪ್ರಕಾರ ಒಂದು ಸಾವಿರ ಕೋಟಿವರೆಗೂ ನಷ್ಟವಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.

ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಜಾರಿಗೆ ಸಾಕಷ್ಟು ಅಡಚಣೆ ಎದುರಾಗಿತ್ತು. ಅದನ್ನು ನಿವಾರಿಸಿ ಜನರಿಗೆ ಹೊಸ ಸಂಪರ್ಕ ನೀಡಲಾಗಿದೆ. ಸಂಚಾರಿ ಕಾವೇರಿ ಯೋಜನೆ ಮೂಲಕ ಜನರಿಗೆ ಕಡಿಮೆ ಬೆಲೆಗೆ ಶುದ್ಧವಾದ ನೀರನ್ನು ವಿತರಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಕೊಳಚೆ ನೀರು ಕೆರೆಗಳಿಗೆ ಬಿಡಲಾಗುತ್ತಿದೆ. ಇದನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಡಿಸಿಎಂ ವಿವರಿಸಿದರು.

ಕಾರ್ಯಕ್ರದಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಎ್ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಕಾಸಿಯಾ ಅಧ್ಯಕ್ಷ ರಾಜಗೋಪಾಲ್ ಹಾಜರಿದ್ದರು.

ಕಾವೇರಿ ಆರತಿ ಬಗ್ಗೆ ರೈತ ಸಂಘಕ್ಕೆ ಗೊತ್ತಿಲ್ಲ:

ಕಾವೇರಿ ಆರತಿಯನ್ನು ನಾವು ಆರಂಭಿಸಿದ್ದೇವೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗದು ಎಂಬುದು ನಮ್ಮ ನಂಬಿಕೆ. ಕೆಆರ್‌ಎಸ್ ಬಳಿ ಕಾವೇರಿ ಆರತಿ ಮಾಡಲಾಗುತ್ತಿದೆ. ಇದಕ್ಕಾಗಿ ಜಲಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಇದರಿಂದ ಆ ಭಾಗದಲ್ಲಿ 1,500 ಸಾವಿರ ಜನರಿಗೆ ಉದ್ಯೋಗಾವಕಾಶ ಸಿಗಲಿದೆ. ಈ ವಿಷಯದಲ್ಲಿ ಮಂಡ್ಯ ಜಿಲ್ಲೆಯ ರೈತ ಸಂಘದವರಿಗೆ ಸರಿಯಾದ ಮಾಹಿತಿ ಇಲ್ಲ ಎಂದರು. ಈ ಬಗ್ಗೆ ಎದ್ದಿರುವ ಅನುಮಾನ ಬಗೆಹರಿಸಲು ಜಿಲ್ಲಾ ಮಂತ್ರಿಗಳೊಂದಿಗೆ ಸಭೆ ಮಾಡಲಿದ್ದೇನೆ ಎಂದು ಡಿಸಿಎಂ ತಿಳಿಸಿದರು.

ಬೆಂಗಳೂರು ಯೋಜಿತ ನಗರವಲ್ಲ. ಇಲ್ಲಿನ ಜನಸಂಖ್ಯೆ ಬಹಳ ದೊಡ್ಡದಾಗಿ ಬೆಳೆದಿದೆ. ಹೀಗಾಗಿ ಇಲ್ಲಿ ಗ್ರೇಟರ್ ಬೆಂಗಳೂರನ್ನು ಘೋಷಿಸಿ ಮತ್ತಷ್ಟು ಪ್ರದೇಶವನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ.

- ಡಿ.ಕೆ. ಶಿವಕುಮಾರ್, ಡಿಸಿಎಂ

‘ನೀರನ್ನು ಉಳಿಸಿ, ಬೆಂಗಳೂರು ಬೆಳಸಿ’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿ ಪ್ರತಿಜ್ಞಾ ವಿಧಿ ಕೈಗೊಳ್ಳುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 1 ವಾರದಲ್ಲಿ 5,33,642 ಪ್ರತಿಜ್ಞಾ ವಿಧಿಯನ್ನು ಸಂಗ್ರಹಿಸಿದ್ದಕ್ಕೆ ಗಿನ್ನೀಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಈ ಮೂಲಕ ನಮ್ಮ ಸಂಸ್ಥೆಯ ಹೆಸರನ್ನು ವಿಶ್ವ ಮಟ್ಟಕ್ಕೆ ತಗೆದುಕೊಂಡು ಹೋಗಲು ಸಾಧ್ಯವಾಯಿತು.

- ಡಾ. ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net