ನೀರಿನ ದರ ಏರಿಕೆ ಅನಿವಾರ್ಯ: ವರದಿಗೆ ಡಿಸಿಎಂ ಸೂಚನೆ

dcm water
Published on

ಬೆಂಗಳೂರು: ಮಹಾನಗರದ ಜನರಿಗೆ ಪೂರೈಸುತ್ತಿರುವ ಕಾವೇರಿ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದ್ದು, ಈ ಸಂಬಂಧ ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ಸಂಪರ್ಕಗಳನ್ನು ಸಕ್ರಮಗೊಳಿಸುವ ಜತೆಗೆ ನೀರಿನ ಬಿಲ್ ಬಾಕಿ ಮೊತ್ತ ಪಾವತಿಸಲು ಒಟಿಎಸ್ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರ ಅಭಿವೃದ್ಧಿಯಲ್ಲಿ ಪಾಲುದಾರಿಕೆ ಹೊಂದಿರುವ ಬಿಬಿಎಂಪಿ ಸಹಿತ ಸರ್ಕಾರದ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

2014ರಿಂದ ಈವರೆಗೆ ನೀರಿನ ಬಿಲ್ ಹೆಚ್ಚಳ ಮಾಡಿಲ್ಲ. ಇದರಿಂದಾಗಿ ಜಲಮಂಡಳಿಗೆ ವರ್ಷಕ್ಕೆ 1 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ನೀರಿನ ಬಿಲ್ ಹೆಚ್ಚಳ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು, ನಗರದ ಎಲ್ಲ ಶಾಸಕರ ಬಳಿ ಮಂಡಳಿಯವರು ಚರ್ಚೆ ನಡೆಸಲಿದೆ. ಜತೆಗೆ ನೀರಿನ ಪೂರೈಕೆ ಜಾಲ ವಿಸ್ತರಿಸಲು ವಿವಿಧ ಬ್ಯಾಂಕ್‌ಗಳ ಬಳಿ ಸಾಲ ಪಡೆಯಲು ಕಷ್ಟವಾಗುತ್ತಿದೆ. ಸರ್ಕಾರದಿಂದ ನೆರವು ನೀಡಬೇಕಾದರೆ ಖಾತರಿ ನೀಡಬೇಕಾಗುತ್ತದೆ. ಹಾಗಾಗಿ ಜನರಿಗೆ ಹೊರೆಯಾಗದ ರೀತಿಯಲ್ಲಿ ದರ ಏರಿಕೆ ಮಾಡುವ ಆಲೋಚನೆ ಇದೆ ಎಂದರು.

15 ಸಾವಿರ ಹೊಸ ಸಂಪರ್ಕ:

ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಈವರೆಗೆ 15 ಸಾವಿರ ಹೊಸ ಸಂಪರ್ಕ ನೀಡಲಾಗಿದೆ. ಇನ್ನೂ 20 ಸಾವಿರದಷ್ಟು ಹೊಸ ಸಂಪರ್ಕಗಳನ್ನು ನೀಡಬೇಕಾಗಿದೆ. ಹಲವು ವಸತಿ ಸಮುಚ್ಚಯಗಳು ನೀರಿನ ಸಂಪರ್ಕಕ್ಕೆ ಹಿಂದೇಟು ಹಾಕುತ್ತಿವೆ. ಹಾಗಾಗಿ ಕಡ್ಡಾಯವಾಗಿ ಸಂಪರ್ಕ ಪಡೆಯಲು ಸೂಚಿಸಲಾಗಿದೆ. ಈ ಹಿಂದೆ ಕೊಳೆಗೇರಿ ಹಾಗೂ ಬಡವರಿಗೆ ನೀರು ಪೂರೈಸಲು ಸರ್ಕಾರ 20 ಕೋಟಿ ರೂ. ಮೀಸಲಿಟ್ಟಿತ್ತು. ಇದನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿದ್ದು, ಈ ಸಹಾಯಧನವನ್ನು ನಾವು ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಶಿವಕುಮಾರ್ ವಿವರಿಸಿದರು.

ಫೆಬ್ರವರಿ ಅಂತ್ಯಕ್ಕೆ ಟನಲ್ ರಸ್ತೆಗೆ ಟೆಂಡರ್:

ನಗರದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕಾಗಿ 17,780 ಕೋಟಿ ರೂ. ಮೊತ್ತದ ಟೆಂಡರ್ ಅನ್ನು ಫೆಬ್ರವರಿ ಅಂತ್ಯಕ್ಕೆ ಆಹ್ವಾನಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೂರುವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಜತೆಗೆ ಎರಡು ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಯೋಜನೆಗೆ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಅನುದಾನ ಭರಿಸಲಿದೆ. ಹುಡ್ಕೋ ಸೇರಿ ಮೂರು ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬಂದಿದ್ದು, ಯಾವ ಕಂಪನಿ ಕಡಿಮೆ ಬಡ್ಡಿದರಕ್ಕೆ ಹಣ ನೀಡುವುದೋ ಅವರಿಗೆ ಟೆಂಡರ್ ಸಿಗಲಿದೆ ಎಂದು ಡಿಸಿಎಂ ಹೇಳಿದರು.

ಟನಲ್ ರಸ್ತೆ ಬೇಡವೆಂದು ಸಂಸದ ಪಿ.ಸಿ.ಮೋಹನ್ ಪತ್ರ ಬರೆದಿದ್ದು, ಇದರಿಂದ ಯಾರ ಜಮೀನೂ ಹೋಗುವುದಿಲ್ಲ. ಭೂಮಿಯ ಕೆಳಗೆ ಸುರಂತ ರಸ್ತೆ ಹೋಗಲಿದೆ ಎಂದು ಸಮಜಾಯಿಷಿ ನೀಡಿದರು.

ಮುಂಬರುವ ಬೇಸಿಗೆ ವೇಳೆಗೆ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತರ್ಜಲ ಹೆಚ್ಚಳಕ್ಕೆ ಯಾವುದಾದರೂ ಕೆರೆ ತುಂಬಿಸಬೇಕಿದ್ದರೆ ಶೀಘ್ರ ಕ್ರಮ ತೆಗೆದುಕೊಳ್ಳಲು ಮಂಡಳಿ ಮುಖ್ಯಸ್ಥರಿಗೆ ನಿರ್ದೇಶಿಸಲಾಗಿದೆ.

- ಡಿ.ಕೆ.ಶಿವಕುಮಾರ್, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net