

ಹೆಬ್ರಿ: ಚಾರ ನವೋದಯದ ಬಳಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಿಂದ ನೀರು ಹರಿದು ಸಳ್ಳೆಕಟ್ಟೆ, ಕುಡಿಬೈಲು ಭಾಗದಲ್ಲಿ ಜಲಾವೃತವಾದ ಕೃಷಿ ಪ್ರದೇಶದಲ್ಲಿ ಶಾಶ್ವತ ಪುಶಿಂಗ್ ಯೋಜನೆ ಮೂಲಕ ನೀರು ಹೊರಹಾಕುವ ಕಾರ್ಯ ಆರಂಭವಾಗಿದೆ.
ರಸ್ತೆ ಬ್ರಿಡ್ಜ್ ನಿರ್ಮಾಣ ಹಿನ್ನೆಲೆಯಲ್ಲಿ ಪುಶಿಂಗ್ ಯೋಜನೆ ಮೂಲಕ 40 ಮೀ. ಉದ್ದದ ಪೈಪುಗಳನ್ನು ಭೂಮಿಯ ಒಳಗಡೆ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೆರೆಗೆ ಇದು ತಡೆಯಾಗಲಿದೆ. ಸದ್ಯಕ್ಕೆ ಎರಡು ಮೀಟರ್ ಎತ್ತರಕ್ಕೆ ನೀರು ಸಂಗ್ರಹವಿದ್ದು, ನೀರಿನ ಒರತೆ, ಹರಿವು ಇಲ್ಲದ ಕಾರಣ ಈ ಬಾರಿ ಜಲಸಂಪನ್ಮೂಲ ಉಳಿವಿಕೆ ಅಸಾಧ್ಯವಾಗಿದೆ.
ಉಡುಪಿ ಸಣ್ಣ ನಿರಾವರಿ ಇಲಾಖೆಯ ಎಇಇ ಅರುಣ್ ಭಂಡಾರಿ ಪ್ರತಿಕ್ರಿಯಿಸಿದ್ದು, ನಮ್ಮ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಕಾಂಕ್ರೀಟ್ ಬೆಡ್ ಹಾಕಿ ಪೈಪ್ ಜೋಡಿಸುತಿದ್ದೇವೆ. ಪುಶಿಂಗ್ ಕೆಲಸ ಆರಂಭವಾಗಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ವಿನಯೋಗಿಸಿಲ್ಲ. ಶೀಘ್ರವೇ ಕೆಲಸ ಮುಗಿಸಲು ಸೂಚಿಸಿದ್ದೇನೆ ಎಂದರು.