

ಉಡುಪಿ: ಬಿಸಿಲಿನ ಬೇಗೆಗೆ ಕುಡಿಯುವ ನೀರಿನ ಮೂಲಗಳು ಬತ್ತುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ 17 ಗ್ರಾಪಂಗಳಲ್ಲಿ ಅಗತ್ಯವಿದ್ದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಪ್ರಾರಂಭವಾಗಿದೆ. 15 ದಿನದೊಳಗೆ ಮುಂಗಾರು ಪೂರ್ವ ಮಳೆ ಬಾರದೇ ಇದ್ದರೆ ಜಲಾಮ ಮತ್ತಷ್ಟು ಹೆಚ್ಚಳವಾಗುವ ಭೀತಿ ಶುರುವಾಗಿದೆ.
ಬರಪೀಡಿತ ಪ್ರದೇಶವಾಗಿರುವ ಬ್ರಹ್ಮಾವರ ತಾಲೂಕಿನ ಕರ್ಜೆ, ಕಳ್ತೂರು, ಕೊಕ್ಕರ್ಣೆ, ಯಡ್ತಾಡಿ, ಕಾರ್ಕಳ ತಾಲೂಕಿನ ನಿಟ್ಟೆ, ಕುಕ್ಕೂಂದೂರು, ಇನ್ನಾ, ನೀರೆ, ಉಡುಪಿ ತಾಲೂಕಿನ ಪೆರ್ಡೂರು, ಬೈಂದೂರು ಮತ್ತು ಕುಂದಾಪುರ ತಾಲೂಕಿನ ಶಂಕರನಾರಾಯಣ, ಕರ್ಕುಂಜೆ, ಸಿದ್ದಾಪುರ, ಯೆಡಮೊಗ್ಗೆ, ಉಪು$್ಪಂದ, ಅಜ್ರಿ, ಅಂಪಾರು ಸೇರಿದಂತೆ 17 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ನೀರಿನ ಬೇಡಿಕೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕವಲ್ಲದೆ ಎಸ್ ಎಲ್ ಆರ್ ಎಂ ವಾಹನಗಳಲ್ಲಿ ದೊಡ್ಡ ನೀರಿನ ಟ್ಯಾಂಕ್ಗಳನ್ನಿಟ್ಟು ನೀರು ಪೂರೈಸಲಾಗುತ್ತಿದೆ. ಗ್ರಾಪಂ ಆಡಳಿತ ಸ್ಥಳಿಯವಾಗಿ ಬೋರವೆಲ್ಗಳನ್ನು ಬಾಡಿಗೆಗೆ ಪಡೆದುಕೊಂಡು ನೀರು ಸರಬರಾಜು ಮಾಡುತ್ತಿವೆ.
203 ಗ್ರಾಪಂಗಳಲ್ಲಿ ಅಭಾವ ಸಾಧ್ಯತೆ?
ಜಿಲ್ಲೆಯ 155 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 247 ಗ್ರಾಮಗಳಿದ್ದು, ಇವುಗಳಲ್ಲಿ ಸುಮಾರು 130 ಗ್ರಾಪಂಗಳ 203 ಗ್ರಾಮಗಳಲ್ಲಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿಗೆ ಅಭಾವ ಶುರುವಾಗಬಹುದು ಎಂಬುದಾಗಿ ಜಿಲ್ಲಾಡಳಿತ ಅಂದಾಜಿಸಿದೆ. ಬ್ರಹ್ಮಾವರ ತಾಲೂಕಿನ 25 ಗ್ರಾಪಂ. ವ್ಯಾಪ್ತಿಯ 42 ಗ್ರಾಮಗಳ 337 ಜನವಸತಿ ಪ್ರದೇಶ, ಕಾಪು ತಾಲೂಕಿನ 10 ಗ್ರಾಪಂ ವ್ಯಾಪ್ತಿಯ 16 ಗ್ರಾಮಗಳ 100 ಜನವಸತಿ ಪ್ರದೇಶ, ಉಡುಪಿ ತಾಲೂಕಿನ 12 ಗ್ರಾಪಂ ವ್ಯಾಪ್ತಿಯ 23 ಗ್ರಾಮಗಳ 164 ವಸತಿ ಪ್ರದೇಶ, ಹೆಬ್ರಿ ತಾಲೂಕಿನ 9 ಗ್ರಾಪಂ ವ್ಯಾಪ್ತಿಯ 15 ಗ್ರಾಮಗಳ 79 ಜನವಸತಿ ಪ್ರದೇಶ, ಕಾರ್ಕಳ ತಾಲೂಕಿನ 21 ಗ್ರಾಪಂ ವ್ಯಾಪ್ತಿಯ 26 ಗ್ರಾಮಗಳ 88 ಜನವಸತಿ ಪ್ರದೇಶ, ಬೈಂದೂರು ತಾಲೂಕಿನ 15 ಗ್ರಾಪಂ ವ್ಯಾಪ್ತಿಯ 22 ಗ್ರಾಮಗಳ 244 ವಸತಿ ಪ್ರದೇಶ ಹಾಗೂ ಕುಂದಾಪುರ ತಾಲೂಕಿನ 38 ಗ್ರಾಪಂ ವ್ಯಾಪ್ತಿಯ 59 ಗ್ರಾಮಗಳ 415 ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಬಗ್ಗೆ ಜಿಲ್ಲಾಡಳಿತಕ್ಕೆ ಆಯಾ ಗ್ರಾಪಂಗಳು ವರದಿ ಸಲ್ಲಿಸಿವೆ.
ಸಹಾಯವಾಣಿಗೆ 139 ಕರೆ
ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಜಿಲ್ಲಾ ಮಟ್ಟದಲ್ಲಿ 24*7 ಸಹಾಯವಾಣಿ (18004257049) ತೆರೆಯಲಾಗಿದ್ದು, ಮಾ.21ರಿಂದ ಏ.30ರವರೆಗೆ 139 ಕರೆಗಳನ್ನು ದಾಖಲಿಸಲಾಗಿದೆ.