

ಕಂಪ್ಲಿ: ಕುಡಿವ ನೀರಿನ ಸಮಸ್ಯೆ ತೀವ್ರವಾಗಿದ್ದು, ಡಿಸಿ, ಎಸಿ ವಾರದೊಳಗೆ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜನರೊಂದಿಗೆ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭೆ ಸದಸ್ಯ ಸಿ.ಆರ್.ಹನುಮಂತ ಎಚ್ಚರಿಸಿದರು.
ಪುರಸಭೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕರು, ಸದಸ್ಯರ ಸಭೆಯಲ್ಲಿ ಮಾತನಾಡಿದರು. ಕೋಟೆಯ ನೀರೆತ್ತುವ ಪಂಪ್‌ಹೌಸ್‌ನಲ್ಲಿ 1 ಮತ್ತು 13ನೇ ವಾರ್ಡ್‌ಗೆ ನೀರು ಪೂರೈಸುವ ಯಂತ್ರ ಕೆಟ್ಟಿದ್ದು, ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 18 ಕೆಲಸಗಾರರನ್ನು ಜಿಲ್ಲಾಧಿಕಾರಿ ತೆಗೆದುಹಾಕಿದ್ದು, ನೀರು ಪೂರೈಕೆಗೆ ತೊಂದರೆಯಾಗಿದೆ. ಪುರಸಭೆಯಲ್ಲಿ 6 ಜನ ನೀರು ಪೂರೈಕೆ ಕೆಲಸದಲ್ಲಿದ್ದಾರೆ. ಇವರಲ್ಲಿ ಮೂವರು ಕಚೇರಿ ಕೆಲಸ ಮಾಡುತ್ತಿದ್ದು, ಉಳಿದವರಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಕಷ್ಟವಾಗಿದೆ. 23 ವಾರ್ಡ್‌ಗಳಲ್ಲಿ 150 ಕೊಳವೆಬಾವಿ ಕೊರೆಸಿ ನೀರೆತ್ತುವ ಯಂತ್ರ ಅಳವಡಿಸಿದ್ದು, ನಿರ್ವಹಿಸಲು ಕೆಲಸಗಾರರು ಇಲ್ಲದಂತಾಗಿದೆ. ಆದ್ದರಿಂದ ಬೇಸಿಗೆ ಮುನ್ನವೇ ಡಿಸಿ, ಎಸಿ ಇತ್ತ ಕಡೆ ಗಮನ ಹರಿಸಿ, ಜಲ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು. ಪುರಸಭೆ ಸದಸ್ಯರಾದ ಎಸ್.ಎಂ.ನಾಗರಾಜ, ಎನ್.ರಾಮಾಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಹೂಗಾರ ರಮೇಶ, ಮುಖಂಡರಾದ ಕೆ.ವಸಂತ, ವಿ.ಸತ್ಯಪ್ಪ, ಉಡೇಗೋಳ ವಿರುಪಣ್ಣ, ನಾಯಕರ ಮರಿಯಪ್ಪ ಇತರರಿದ್ದರು.