ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಪುತ್ತೂರು ಉಪವಿಭಾಗದ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಎಸಿ ಗಿರೀಶ್‌ನಂದನ್ ಎಚ್ಚರಿಕೆ

water
Published on

ಪುತ್ತೂರು ಗ್ರಾಮಾಂತರ: ಗ್ರಾಮೀಣ ಹಾಗೂ ನಗರ ಭಾಗದಲ್ಲಿರುವ ಸರ್ಕಾರಿ ಕೊಳವೆಬಾವಿಗಳಿಗೆ ಜಲಮರುಪೂರಣ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಡೆಯಲ್ಲಿ ನೀರಿನ ಸಮಸ್ಯೆ ಎದುರಾದರೆ ಆ ಭಾಗದ ಅಧಿಕಾರಿಗಳೇ ಹೊಣೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಎಚ್ಚರಿಸಿದರು.

ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಅಭಾವದಿಂದಾಗಿ ಸಂಭವಿಸಬಹುದಾದ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಶನಿವಾರ ಪುತ್ತೂರಿನ ತಾಲೂಕು ಆಡಳಿತ ಸೌಧದಲ್ಲಿ ಶನಿವಾರ ನಡೆದ ಪುತ್ತೂರು ಉಪವಿಭಾಗ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಈ ಬಾರಿ ವಾರ್ಷಿಕ ವಾಡಿಕೆ ಮಳೆ ಕಡಿಮೆಯಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಪೂರ್ವ ತಯಾರಿ ಮಾಡಿಕೊಂಡು ಈ ಮೂರು ತಾಲೂಕುಗಳ ಯಾವುದೇ ಭಾಗದಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಕುಡಿಯುವ ನೀರಿಗೆ ಸಮಸ್ಯೆ: ಬೆಳ್ತಂಗಡಿಯಲ್ಲಿ ಈ ಬಾರಿ ವಾಡಿಕೆ ಮಳೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕಡಿಮೆಯಾಗಿದೆ. ಹಾಗಿದ್ದರೂ ಇಲ್ಲಿನ ಕೆಲಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಬೆಳ್ತಂಗಡಿ ತಾಲೂಕಿನಲ್ಲಿ 48 ಗ್ರಾಪಂಗಳಿದ್ದು, 590 ಸರ್ಕಾರಿ ಕೊಳೆಬಾವಿಗಳಿವೆ. ಈ ಪೈಕಿ 35 ಕೊಳವೆಬಾವಿಗಳಿಗೆ ಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಇಳಂತಿಲದಲ್ಲಿ ಕಿರುನದಿಗೆ ಕಿಂಡಿಅಣೆಕಟ್ಟು ನಿರ್ಮಾಣ ಮಾಡಲಾಗಿದೆ ಎಂದು ಬೆಳ್ತಂಗಡಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಗೌಡ ಮಾಹಿತಿ ನೀಡಿದರು.

ಬೆಳ್ತಂಗಡಿ ಪಪಂ ವ್ಯಾಪ್ತಿಯಲ್ಲಿ 17 ಕೊಳವೆಬಾವಿಗಳಿವೆ. ಸೋಮಾವತಿ ನದಿಗೆ ಅಳವಡಿಸಲಾದ ಕಿಂಡಿಅಣೆಕಟ್ಟಿನಿಂದ ನಗರದ ಜನತೆಗೆ ನೀರು ಒದಗಿಸಲಾಗುತ್ತಿದೆ. ಡಿಸೆಂಬರ್ ತನಕ ನೀರಿನ ಕೊರತೆ-ಸಮಸ್ಯೆ ಬರುವುದಿಲ್ಲ ಎಂದು ಅಲ್ಲಿನ ಪಪಂ ಮುಖ್ಯಾಧಿಕಾರಿ ತಿಳಿಸಿದರು. ಕಡಬ ತಾಲೂಕಿನ ನಗರ ಭಾಗದಲ್ಲಿ 28 ಹಾಗೂ ಗ್ರಾಮಾಂತರದಲ್ಲಿ 347 ಸರ್ಕಾರಿ ಕೊಳೆಬಾವಿಗಳಲ್ಲಿ 37 ಕೊಳವೆಬಾವಿಗಳಿಗೆ ಜಲಮರುಪೂರಣದ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿ ಮಾಹಿತಿ ನೀಡಿದರು.

ಜಲಮರುಪೂರಣ ವ್ಯವಸ್ಥೆ: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 180 ಸರ್ಕಾರಿ ಕೊಳವೆಬಾವಿಗಳಿದ್ದು, ಈ ಪೈಕಿ 176 ಕೊಳವೆಬಾವಿಗಳು ಸಕ್ರಿಯವಾಗಿವೆ. ಕುಮಾರಧಾರಾ ನದಿಗೆ ಅಳವಡಿಸಲಾದ ನೆಕ್ಕಿಲಾಡಿ ಕಿಂಡಿಅಣೆಕಟ್ಟಿನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ದಿನವೊಂದಕ್ಕೆ 6.8 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಆದರೆ ಈ ಬಾರಿ ನೀರಿನ ಒಳಹರಿವಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಕೊಳವೆ ಬಾವಿಗಳಿಂದ 1.5 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರಿನ ಹರಿವು ಮತ್ತಷ್ಟು ಕಡಿಮೆಯಾದರೆ ಪುತ್ತೂರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ನಗರ ವ್ಯಾಪ್ತಿಯಲ್ಲಿ 3 ಸರ್ಕಾರಿ ಕೊಳವೆಬಾವಿಗಳಲ್ಲಿ ಜಲಮರುಪೂರಣ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್ ಮಾಹಿತಿ ನೀಡಿದರು. ಪುತ್ತೂರು ಗ್ರಾಪಂ ವ್ಯಾಪ್ತಿಗಳಲ್ಲಿ 507 ಸರ್ಕಾರಿ ಕೊಳವೆ ಬಾವಿಗಳಿದ್ದು, 141 ಜಲಮರುಪೂರಣ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಸುಳ್ಯದಲ್ಲಿ ಮಳೆ ಕೊರತೆ ಕಂಡುಬಂದಿಲ್ಲ. ಪಯಸ್ವಿನಿ ನದಿಗೆ ಹೊಸದಾಗಿ ಕಿಂಡಿಅಣೆಕಟ್ಟು ನಿರ್ಮಾಣ ಮಾಡಲಾಗಿದೆ. 40 ಸರ್ಕಾರಿ ಕೊಳವೆಬಾವಿಗಳಿವೆ ಎಂದು ಸುಳ್ಯ ನಪಂ ಮುಖ್ಯಾಧಿಕಾರಿ ಸುಧಾಕರ್ ಕೆ. ಮಾಹಿತಿ ನೀಡಿದರು. ಸುಳ್ಯ ತಹಸೀಲ್ದಾರ್ ಮಂಜುನಾಥ್ ಇದ್ದರು.

ಟಾಸ್ಕ್ ಫೋರ್ಸ್-ಪಿಡಿಒ ಸಭೆ ಕಡ್ಡಾಯ

ವಿಪತ್ತು ನಿರ್ವಹಣಾ ಟಾಸ್ಕ್‌ಫೋರ್ಸ್ ಸಭೆಗಳನ್ನು ಪ್ರಸ್ತುತ ಯಾರೂ ಮಾಡುತ್ತಿಲ್ಲ. ತಕ್ಷಣ ಈ ಸಭೆಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ನಡೆಸಬೇಕು. ತಾಲೂಕು ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಗ್ರಾಮಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕೊಳವೆಬಾವಿಗಳ ಪಕ್ಕದ ಖಾಸಗಿ ಕೊಳವೆಬಾವಿಯನ್ನು ಪರ್ಯಾಯವಾಗಿ ಬಳಕೆ ಮಾಡಲು ಪೂರ್ವತಯಾರಿ ಮಾಡಿಕೊಳ್ಳಬೇಕು. ನೀರಿನ ಪೂರೈಕೆ ಮೂಲಗಳಿಗೆ ಕೇವಲ ಭೇಟಿ ನೀಡಿ ಬರುವುದಲ್ಲ. ಅಲ್ಲಿನ ನೀರಿನ ಲಭ್ಯತೆ, ಸಮಸ್ಯೆ ಅರಿತು ಕ್ರಮಕೈಗೊಳ್ಳಬೇಕು ಎಂದು ಗಿರೀಶ್ ನಂದನ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net