ಮೆಟ್ರೋಪಾಲಿಟನ್​ ನಗರಗಳಲ್ಲಿ ನೀರಿನ ಸಮಸ್ಯೆ ತೀವ್ರ:ಕೇಂದ್ರ ಜಲ ಆಯೋಗದ ಎಸ್​.ಎನ್​.ಪಾಂಡೆ ಹೇಳಿಕೆ

water
Published on

ಬೆಂಗಳೂರು: ವರ್ಷದಿಂದ ವರ್ಷಕ್ಕೆ ದೇಶದ ಎಲ್ಲ ಮೆಟ್ರೋಪಾಲಿಟನ್​ ನಗರಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಗುತ್ತದೆ ಎಂದು ಕೇಂದ್ರ ಜಲ ಆಯೋಗದ ಮುಖ್ಯ ಅಭಿಯಂತರ ಎಸ್​. ಎನ್​.ಪಾಂಡೆ ಅಭಿಪ್ರಾಯಪಟ್ಟರು.

ವಿಶ್ವಜಲ ದಿನ ಪ್ರಯುಕ್ತ ಜಯನಗರದ ವಾಟರ್​ ಥೀಮ್​ ಪಾರ್ಕ್​ನಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಬಹುತೇಕ ಮೆಟ್ರೋಪಾಲಿಟನ್​ ನಗರಗಳಿಗೆ ಹೊರಗಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿರುತ್ತದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡರೆ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆ ಮಾಡಿಕೊಳ್ಳಬಹುದು. ದೇಶದ ಇತರೆ ಮಹಾನಗರಗಳನ್ನು ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಹಿಂಗಾರು, ಮುಂಗಾರು ಅವಧಿಯಲ್ಲಿ ಮಳೆಯಾಗುತ್ತದೆ. ಹಾಗಾಗಿ, ಇಲ್ಲಿನ ನಿವಾಸಿಗಳು ಬೋರ್​ವೆಲ್​ ಅಥವಾ ಕಾವೇರಿ ನೀರಿನ ಮೇಲೆ ಅವಲಂಬಿತವಾಗದೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ಇಂಡಿಯನ್​ ಪ್ಲಂಬಿಂಗ್​ ಅಸೋಸಿಯೇಷನ್​ ಅಧ್ಯಕ್ಷ ಬಾಲಕೃಷ್ಣ ಮೆಹತಾ ಮಾತನಾಡಿ, ನೀರಿನ ಮೌಲ್ಯದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಅನಗತ್ಯವಾಗಿ ನೀರು ಪೋಲು ಮಾಡಬಾರದು. ಸರ್ಕಾರ ಮಾತ್ರವಲ್ಲದೆ ನೀರು ಉಳಿಸಲು ಸಾರ್ವಜನಿಕರು ಮುಂದಾಗಬೇಕು. ಪ್ರತಿ ಹನಿ ನೀರು ಉಳಿಸುತ್ತೇನೆ ಎಂದು ಜನರು ಶಪಥ ಮಾಡಬೇಕು. ನಮ್ಮ ಸಂಸ್ಥೆಯಿಂದ ನೀರಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಭವಿಷ್ಯದಲ್ಲಿ ನೀರಿನ ಅಭಾವ ಜಾಸ್ತಿ: ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಇನ್ನಷ್ಟು ನೀರಿನ ಅಭಾವ ಎದುರಾಗಲಿದೆ.ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಬೋರ್​ವೇಲ್​ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಬೋರ್​ವೆಲ್​ ನೀರು ಗುಣಮಟ್ಟವಲ್ಲ. ಕೆಲ ಪಟ್ಟಣಗಳಿಗೆ 70 ಕಿ.ಮೀ.ನಿಂದ 150 ಕಿ.ಮೀ.ವರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ರಾಜ್ಯದ 220 ಸ್ಥಳಿಯ ಸಂಸ್ಥೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಮಿತವಾಗಿ ನೀರನ್ನು ಬಳಸಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಯಿಂದಲೇ ನೀರಿನ ಸಮಸ್ಯೆಗೆ ಪರಿಹಾರ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ನಳಿನಾ ಹೇಳಿದರು.

1891ರಲ್ಲಿ ಹೆಸರುಘಟ್ಟ ಕೆರೆಯಿಂದ ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲಾಗಿತ್ತು. ನಂತರ,ತಿಪ್ಪಗೊಂಡನಹಳ್ಳಿ (ಟಿ.ಜಿ.ಹಳ್ಳಿ) ಜಲಾಶಯದಿಂದ ಕೊಡಲಾಗಿತ್ತು.ಇದೀಗ ಕಾವೇರಿ ನದಿಯಿಂದ ನಗರದ ಜನತೆಗೆ ನೀರು ಪೂರೈಸಲಾಗುತ್ತಿದೆ.ಪ್ರತಿ ನಿತ್ಯ ನಗರಕ್ಕೆ 1,532 ಎಂಎಲ್​ಡಿ ಬೇಕಿದೆ. ನೀರು ಪೋಲು ತಡೆಗೆ ವಿಶ್ವಜಲ ದಿನ ಪ್ರಯುಕ್ತ ಜಲ ಮಂಡಳಿ ಉಚಿತವಾಗಿ 10 ಲಕ್ಷ ಏರಿಯೇಟರ್​ ವಿತರಿಸಲಿದೆ.

| ಸನತ್​ ಕುಮಾರ್​, ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net