ಮುಂಡ್ಕೂರಲ್ಲಿ ಬತ್ತಿದ ಜಲಮೂಲ

Water supply
ಗೋಕುಲ ನಗರ ಪರಿಸರಕ್ಕೆ ಪಂಚಾಯತ್ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು.
Published on

ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಜಲಮೂಲ ಬತ್ತುತ್ತಿದ್ದು ಎಲ್ಲೆಡೆ ನೀರಿನ ಸಮಸ್ಯೆ ಕಾಡುತ್ತಿದೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. -ಹರಿಪ್ರಸಾದ್ ನಂದಳಿಕೆ ಕಾರ್ಕಳ

ದಿನೇ ದಿನೇ ಏರುತ್ತಿರುವ ತಾಪಮಾನದಿಂದ ಜಲಮೂಲ ಬತ್ತುತ್ತಿದ್ದು ನದಿ, ಬಾವಿ, ಕೊಳವೆ ಬಾವಿಗಳು ಬರಿದಾಗುತ್ತಿದೆ. 24*7 ನೀರು ಪೂರೈಕೆ ಮಾಡುತ್ತಿದ್ದ ಮುಂಡ್ಕೂರು ಗ್ರಾಪಂ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ.

ಉತ್ತಮ ಜಲ ಮೂಲವನ್ನು ಹೊಂದಿದ್ದು ಇಡೀ ಗ್ರಾಮಕ್ಕೆ ಸ್ವಜಲಧಾರ ಯೋಜನೆ ಮೂಲಕ ನೀರು ನೀಡುತ್ತಿದ್ದ ಮುಂಡ್ಕೂರು ಗ್ರಾಪಂ ಈ ಬಾರಿ ಜಲ ಸಮಸ್ಯೆ ಎದುರಿಸುವಂತಾಗಿದೆ. ಬಹು ವರ್ಷಗಳಲ್ಲಿ ನೀರಿನ ಸಮಸ್ಯೆಯನ್ನು ಕಾಣದ ಮುಂಡ್ಕೂರು ಪಂಚಾಯಿತಿ ಈ ಬಾರಿ ಬಹುಬೇಗನೇ ನೀರಿನ ಸಮಸ್ಯೆ ಎದುರಿಸುತ್ತಿದೆ. ಜಾರಿಗೆಕಟ್ಟೆ ಬಳಿ ನದಿಯ ಸಮೀಪದಲ್ಲಿ ತೆರೆದ ಬಾವಿ ಹಾಗೂ ಪೊಸ್ರಾಲು ನದಿ ತಟದಲ್ಲಿ ಬಾವಿಯನ್ನು ತೋಡಿ ಇಡೀ ಗ್ರಾಮಕ್ಕೆ ನೀರು ನೀಡುತ್ತಿದ್ದ ಪಂಚಾಯಿತಿ ಕಳೆದ ಫೆಬ್ರವರಿಯಿಂದ ಕೆಲವೊಂದು ಪರಿಸರಕ್ಕೆ ನೀರು ಪೂರೈಸಲು ಹರಸಾಹಸ ಪಡುತ್ತಿದೆ.

ಜಲಮೂಲ ಕುಸಿತ

ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 12 ಪಂಪ್‌ಗಳು ಕಾರ್ಯಚರಿಸುತ್ತಿದ್ದು ಈಗಾಗಲೇ 4 ಕೊಳವೆ ಬಾವಿಗಳಲ್ಲಿ ಅಂತರ್ಜಲವಿಲ್ಲದೆ ನೀರು ಪೂರೈಕೆ ನಿಲ್ಲಿಸಿದೆ. ಉಳಿದ 8 ಪಂಪ್‌ಗಳು ಕಾರ್ಯಾಚರಿಸುತ್ತಿದ್ದರೂ ಬೇಡಿಕೆಯ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಇಡೀ ಗ್ರಾಮಕ್ಕೆ ನೀರು ಪೂರೈಕೆಯನ್ನು ಮಾಡಲು ಪ್ರತೀ ನಿತ್ಯ ಸಾಹಸಪಡುವಂತಾಗಿದೆ. ಜಾರಿಗೆಕಟ್ಟೆಯ ಸ್ವಜಲಧಾರ ಯೋಜನೆಯ ಬಾವಿಯಲ್ಲಿ ನೀರಿನ ಒರತೆ ಸ್ವಲ್ಪ ಉತ್ತಮವಾಗಿದ್ದು ಗ್ರಾಮದ ನೀರಿನ ಸಮಸ್ಯೆ ನೀಗಲು ಸಾಧ್ಯವಾಗಿದೆ.

ಗೋಕುಲ ನಗರ, ಪೊಸ್ರಾಲಿನಲ್ಲಿ ಸಮಸ್ಯೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಕುಲ ನಗರ ಪರಿಸರದಲ್ಲಿ ಪ್ರತೀ ವರ್ಷವೂ ಬೇಸಗೆ ಸಂದರ್ಭ ನೀರಿನ ಸಮಸ್ಯೆಯಾಗುತ್ತಿದ್ದು ಪರಿಹರಿಸಲು ಪಂಚಾಯಿತಿ ಆಡಳಿತ ಮುಂದಾಗುತ್ತಿದ್ದು. ಪ್ರಸ್ತುತ ಈ ವರ್ಷವೂ ನೀರಿನ ಸಮಸ್ಯೆ ಬಹು ಬೇಗನೆ ಕಾಡಿದೆ. ಗೋಕುಲ ನಗರದ ಜನರು ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಸ್ಥಳಿಯಾಡಳಿತಕ್ಕೆ ದೂರು ನೀಡಿದ್ದು ಪಂಚಾಯಿತಿ ಟ್ಯಾಂಕರ್ ಮೂಲಕ ವಾರಕ್ಕೆ ಎರಡು ಬಾರಿ ನೀರು ನೀಡಲು ಮುಂದಾಗಿದೆ. ನಳ್ಳಿ ನೀರಿನ ಸಂಪರ್ಕವಿದ್ದರೂ ಎತ್ತರ ಪ್ರದೇಶವಾದ ಪರಿಣಾಮ ಕೆಲವೊಂದು ಮನೆಗಳಿಗೆ ನೀರು ಬರುತ್ತಿಲ್ಲ ಹೀಗಾಗಿ ಪಂಚಾಯಿತಿ ಟ್ಯಾಂಕರ್ ಮೂಲಕ ನೀಡುತ್ತಿದೆ. ಇನ್ನು ಪೊಸ್ರಾಲು ಪರಿಸರದಲ್ಲಿ ಖಾಸಗಿ ಜಮೀನಿನಲ್ಲಿ ತೆರೆದ ಬಾವಿಯನ್ನು ತೋಡಿ ಪಂಚಾಯಿತಿಗೆ ನೀರು ನೀಡುತ್ತಿದ್ದ ಬಾವಿಯಲ್ಲೂ ಶಾಂಭವಿ ನದಿ ಬತ್ತಿದ ಪರಿಣಾಮ ಬಾರಿಯಲ್ಲೂ ನೀರಿನ ಒರತೆ ಕಡಿಮೆಯಾಗಿದೆ ಹೀಗಾಗಿ ಪೊಸ್ರಾಲಿನ ಪರಿಸರದಲ್ಲಿ ನೀರು ಪೂರೈಕೆಗೆ ಕಷ್ಟವಾಗುತ್ತಿದೆ.

ಚುನಾವಣಾ ಬಹಿಷ್ಕಾರ

ಗೋಕುಲ ನಗರ ಪರಿಸರದಲ್ಲಿ ಹಲವು ದಿನಗಳಿಂದ ನೀರಿನ ಸಮಸ್ಯೆಯಿದ್ದು ಸಮಸ್ಯೆ ದೂರವಾಗದಿದ್ದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎನ್ನುವ ಬೋರ್ಡು ಅಳವಡಿಸಿದ್ದು ಕೂಡಲೇ ಎಚ್ಚೆತ್ತ ಪಂಚಾಯಿತಿ ಆಡಳಿತ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗೋಕುಲ ನಗರಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದೆ, ಇದರ ಬೆನ್ನಲ್ಲೇ ಚುನಾವಣಾ ಬಹಿಷ್ಕಾರ ಬೋರ್ಡು ನಾಪತ್ತೆಯಾಗಿದೆ.

ರಸ್ತೆ ಕಾಮಗಾರಿಯಿಂದ ಸಮಸ್ಯೆ

ಬೆಳ್ಮಣ್‌ನಿಂದ ಮುಂಡ್ಕೂರು ಸಂಕಲಕರಿಯವರೆಗೆ ರಸ್ತೆಯ ಕಾಮಗಾರಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದು ಈ ಸಂದರ್ಭ ರಸ್ತೆಯನ್ನು ಅಗೆಯುವಾಗ ಪದೇ ಪದೇ ಪೈಪ್ ಲೈನ್‌ಗಳು ಹೊಡೆದು ಹೋಗುತ್ತಿದ್ದು ಪಂಚಾಯಿತಿ ಸರಿಪಡಿಸಿ ನೀರು ಪೂರೈಸಲು ಸಾಹಸ ಪಡುತ್ತಿದೆ.

ಗೋಕುಲನಗರ ಹಾಗೂ ಪೊಸ್ರಾಲಿನಲ್ಲಿ ನೀರಿನ ಸಮಸ್ಯೆಯಿದ್ದು ಗೋಕುಲ ನಗರದಲ್ಲಿ ಕಾಂಕ್ರೀಟ್ ರಸ್ತೆಯ ಅಡಿಯಲ್ಲಿ ಪೈಪ್ ಲೈನ್ ಹಾದು ಹೋಗಿದ್ದು ಸರಿ ಪಡಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನದಲ್ಲಿ ಜೆಜೆಎಂ ಮೂಲಕ ಹೊಸ ಪೈಪ್‌ಲೈನ್ ಆಗುವ ಸಂದರ್ಭ ಸರಿಪಡಿಸಲಾಗುತ್ತದೆ.ಪೊಸ್ರಾಲು ಭಾಗಕ್ಕೆ ನೀರು ಪೂರೈಕೆಗಾಗಿ ಅಲಂಗಾರುಗುಡ್ಡೆ ಪರಿಸರದಲ್ಲಿ ಖಾಸಗಿ ಬೋರ್‌ವೆಲ್‌ಗೆ ಪಂಪ್ ಅಳವಡಿಸಿ ಆ ಭಾಗದ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ಪ್ರಯತ್ನಗಳು ನಡೆಯುತ್ತಿವೆ. -ಸತೀಶ್, ಮುಂಡ್ಕೂರು ಪಂ. ಅಭಿವೃದ್ಧಿ ಅಧಿಕಾರಿ

ಸಮಸ್ಯೆಯಿರುವ ಜಾಗಕ್ಕೆ ಟ್ಯಾಂಕರ್ ಮೂಲಕ ನೀರು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು ಪದೇ ಪದೇ ಪೈಪ್‌ಗಳು ಹೊಡೆದುಹೋಗುವುದರಿಂದ ಕೆಲವೊಂದು ಸಂದರ್ಭ ವಿಳಂಬವಾಗುತ್ತಿದೆ. ಆದರೂ ಎಲ್ಲೂ ಸಮಸ್ಯೆಯಾಗದ ರೀತಿಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.-ಭಾಸ್ಕರ್ ಶೆಟ್ಟಿ, ಮುಂಡ್ಕೂರು ಪಂ.ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net