ಕೊಟ್ಟೂರು ತಾಲೂಕಲ್ಲಿ ಜಲ ಸಮಸ್ಯೆ, ನಿತ್ಯ 10 ಲಕ್ಷ ಲೀಟರ್ ನೀರಿನ ಕೊರತೆ

march 19 kottur 01
ಕೊಟ್ಟೂರಿನ 24 ತಾಸು ಕುಡಿಯುವ ನೀರು ಸರಬರಾಜು ಯೋಜನೆಯ ನಿರ್ಮಾಣದ ಹಂತದ ಟ್ಯಾಂಕ್.
Published on

ಉಜ್ಜಿನಿ ರುದ್ರಪ್ಪ ಕೊಟ್ಟೂರು
ಮಳೆ ಆಧಾರಿತ ಕೃಷಿ ಇರುವ ತಾಲೂಕಲ್ಲಿ ಅಂತರ್ಜಲವಿದ್ದರಷ್ಟೆ ಕುಡಿಯುವ ನೀರು ಸಿಗುವ ಸ್ಥಿತಿ ಇದ್ದು, ನದಿ, ಹಳ್ಳ-ಕೊಳ್ಳ, ತೊರೆ ಇರದ ಇಲ್ಲಿನ ಪ್ರತಿ ಹಳ್ಳಿಯಲ್ಲೂ 12 ತಿಂಗಳು ಕುಡಿಯುವ ನೀರಿನ ಸಮಸ್ಯೆ ಇದೆ.

36 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ತುಂಗಭದ್ರಾ ನದಿ ಹರಿಯುವ ಬನ್ನಿಗೋಳದಿಂದ ನೀರು ಸರಬರಾಜು ಆಗುತ್ತದೆ. ನಿತ್ಯ 27.70 ಲಕ್ಷ ಲೀಟರ್ ಕುಡಿಯುವ ನೀರು ಬೇಕು. ಆದರೆ, ನಿತ್ಯ 17 ಲಕ್ಷ ಲೀಟರ್ ಸರಬರಾಜಾಗುತ್ತದೆ. 2010-11 ಜನಗಣತಿ ಪ್ರಕಾರ ಕೊಟ್ಟೂರು ಪಟ್ಟಣದಲ್ಲಿ 18 ಸಾವಿರ ಜನ ಸಂಖ್ಯೆಗೆ ಅನುಗುಣವಾಗಿ ನೀರು ಸರಬರಾಜು ಯೋಜನೆ ಸಿದ್ಧಪಡಿಸಲಾಗಿದೆ. ಈಗಿನ ಜನಸಂಖ್ಯೆ 36 ಸಾವಿರಕ್ಕೇರಿದ್ದರೂ ಅದೇ ಪ್ರಮಾಣದಲ್ಲಿ ನೀರು ಸರಬರಾಜಾಗುತ್ತಿದೆ. ತುಂಗಭದ್ರಾ ಹಿನ್ನೀರಿರು ಬನ್ನಿಗೋಳದಿಂದ ಕೊಟ್ಟೂರಿಗೆ ಸಿಹಿನೀರು ಸರಬರಾಜಾಗುತ್ತದೆ. ಕೊಟ್ಟೂರಿನಲ್ಲಿ 4 ದಿನಕ್ಕೊಮೆ ಕುಡಿಯುವ ನೀರು ಬರುತ್ತದೆ. ಕೆಲ ವಾರ್ಡಗಳಲ್ಲಿ 6-8 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ಬಳಕೆ ನೀರಿಗಾಗಿ ಪಪಂ 86 ಕೊಳವೆ ಬಾವಿಗಳನ್ನು ಕೊರೆಸಿದೆ. ಈ ಪೈಕಿ 62 ಕೊಳವೆಬಾವಿಗಳಿಂದ ನೀರು ಬಿಡಲಾಗುತ್ತದೆ. 103 ಸಿಸ್ಟನ್ ಟ್ಯಾಂಕ್ ನಿರ್ಮಿಸಿದ್ದು ಈ ನೀರು ಬಳಕೆ ನೀರಾಗಿ ಉಪಯೋಗಿಸಲಾಗುತ್ತದೆ.

ನಿರುಪಯುಕ್ತ ಶುದ್ಧ ಕುಡಿವ ನೀರಿನ ಘಟಕಗಳು
ಕೊಟ್ಟೂರು ಧಾರ್ಮಿಕ, ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿರುವುದರಿಂದ ಪ್ರತಿ ದಿವಸ 8 ರಿಂದ10 ಸಾವಿರ ಜನ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಕುಡಿಯುವ ನೀರಿಗಾಗಿ 17 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಒಂದು ಮಾತ್ರ ಪಪಂ ವಶದಲ್ಲಿದೆ. ಉಳಿದ 16 ಚಾಲೂ ಇಲ್ಲ. ಕೆಲವು ಘಟಕಗಳಲ್ಲಿ ನೀರು ಶುದ್ಧೀಕರಿಸುವ ಯಂತ್ರವಿಲ್ಲ. ಕೆಲವಕ್ಕೆ ನೀರೇ ಸರಬರಾಜಾಗುವುದಿಲ್ಲ. ಉಳಿದವು ನಾಯಿ ಮಲಗುವ ತಾಣವಾಗಿವೆ. ಪಟ್ಟಣ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂಡಳಿಗೆ ನೋಟೀಸ್ ನೀಡಿ, ದುಸ್ಥಿತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪಪಂ ವಶಕ್ಕೆ ಕೊಡಿ ಎಂದು ಇಲಾಖೆಗೆ ಕೇಳಿಕೊಳ್ಳುತ್ತಿದ್ದರೂ ಉತ್ತರವೇ ಬಂದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ನಿರುಪಯುಕ್ತವಾಗಿದ್ದರಿಂದ ಜನ ಜಿಲ್ಲಾಧಿಕಾರಿ, ಸಚಿವರು, ಶಾಸಕರಿಗೆ ದೂರು ನೀಡಿದ್ದರೂ ಸ್ಪಂದನೆ ಸಿಕ್ಕಿಲ್ಲ.

ಕೊಟ್ಟೂರಿನ 24 ತಾಸು ಕುಡಿಯುವ ನೀರು ಸರಬರಾಜು ಯೋಜನೆಯ ನಿರ್ಮಾಣದ ಹಂತದ ಟ್ಯಾಂಕ್.
ಕೊಟ್ಟೂರಿನ 24 ತಾಸು ಕುಡಿಯುವ ನೀರು ಸರಬರಾಜು ಯೋಜನೆಯ ನಿರ್ಮಾಣದ ಹಂತದ ಟ್ಯಾಂಕ್.

ಗುತ್ತಿಗೆದಾರನಿಗೆ ಕೋಟಿ ರೂ.ದಂಡ
24 ಗಂಟೆ ಕುಡಿಯುವ ನೀರನ್ನು ಸರಬರಾಜು ಮಾಡಲು 2018 ಮಾರ್ಚ್‌ನಲ್ಲಿ 13.45 ಕೋಟಿ ರೂ. ವೆಚ್ಚದ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, 18 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಎಂಬ ಷರತ್ತಿನೊಂದಿಗೆ ಟೆಂಡರ್ ಕರೆಯಲಾಗಿತ್ತು. ಯೋಜನೆ ನನೆಗುದಿಗೆ ಬಿದ್ದಿದೆ. ಇದರಡಿ ನಿರ್ಮಿಸಿರುವ ಟ್ಯಾಂಕ್ 3 ವರ್ಷಗಳಿಂದ ಹಾಗೆ ಇವೆ. ಓಣಿ ಓಣಿಗಳಲ್ಲಿ ಪೈಪ್‌ಲೈನ್ ಮಾಡಿ, ಮನೆಮನೆಗೂ ನಳ ಕೂಡಿಸಿ, ಮೀಟರ್ ಅಳವಡಿಸಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸದ ಕಾರಣ ಆಂಧ್ರಪ್ರದೇಶ ಮೂಲದ ಗುತ್ತಿಗೆದಾರನಿಗೆ ಕೋಟಿ ರೂ. ದಂಡ ವಿಧಿಸಲಾಗಿದೆ. ಡೆಪಾಸಿಟ್ ಹಣ ಮುಟ್ಟುಗೋಲು ಹಾಕಲಾಗಿದೆ. ಅನೇಕ ಸಾರಿ ವಾರ‌್ನಿಂಗ್ ನೋಟೀಸ್ ನೀಡಲಾಗಿದೆ. ಇದ್ಯಾವುದೂ ಪ್ರಯೋಜನವಾಗಿಲ್ಲ.

ಹಳ್ಳಿಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು
ಕೊಟ್ಟೂರು ತಾಲೂಕಿನ ಬೆರಳೆಣಿಕೆಯಷ್ಟು ಹಳ್ಳಿಗಳನ್ನು ಹೊರತು ಪಡಿಸಿದರೆ, ಸದಾ ಕಾಲವೂ ಕುಡಿಯುವ ನೀರಿನ ಸಮಸ್ಯೆ ಇದ್ದೇ ಇದೆ. ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ 65 ಹಳ್ಳಿಗಳಿವೆ. ಚಿರಬಿ ಗ್ರಾಮ ಸದಾ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಬೇಸಿಗೆಯಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚು. ಆದ್ದರಿಂದ ಖಾಸಗಿ ಕೊಳವೆಬಾವಿ ಮಾಲೀಕನಿಗೆ ತಿಂಗಳಿಗೆ 9 ಸಾವಿರ ರೂ. ಕೊಟ್ಟು, ನೀರು ಸರಬರಾಜು ಮಾಡಲಾಗುತ್ತದೆ. ಇದೇ ಪರಿಸ್ಥಿತಿ ನಾಗರಕಟ್ಟೆ, ಕುರುಬನಹಳ್ಳಿ ಗ್ರಾಮಗಳಲ್ಲೂ ಇದೆ.

ಚಿರಬಿ ಗ್ರಾಮದಲ್ಲಿ ಕುಡಿಯುವ ನೀರು ತುಂಬಿಕೊಳ್ಳುತ್ತಿರುವ ಯುವತಿ, ಮಕ್ಕಳು.
ಚಿರಬಿ ಗ್ರಾಮದಲ್ಲಿ ಕುಡಿಯುವ ನೀರು ತುಂಬಿಕೊಳ್ಳುತ್ತಿರುವ ಯುವತಿ, ಮಕ್ಕಳು.

ಕೊಳವೆಬಾವಿ ಕೊರೆಯಿಸಲು ಡಿಸಿ ಸೂಚನೆ
ಏಪ್ರಿಲ್ ಮತ್ತು ಮೇನಲ್ಲಿ ಅಂತರ್ಜಲ ಮಟ್ಟ ಕಮ್ಮಿಯಾಗಲಿರುವ ಕಾರಣ ತಾಲೂಕಿನ 29 ಹಳ್ಳಿಗಳನ್ನು ಕೆಂಪುಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಸಮಸ್ಯೆ ನೀಗಲು 15ನೇ ಹಣಕಾಸು ಯೋಜನೆಯಡಿ ಹಣ ಕಾಯ್ದಿರಿಸಲಾಗಿದೆ. ಇದರಿಂದ ನೀರಿನ ಸಮಸ್ಯೆ ಇರುವ ಕಡೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕೊಳವೆಬಾವಿಗಳನ್ನು ಕೊರೆಯಿಸಿ ನೀರು ಸರಬರಾಜು ಮಾಡಲು ವಿಜಯನಗರ ಜಿಲ್ಲಾಧಿಕಾರಿ ಸಂಪೂರ್ಣ ಸಮ್ಮತಿ ಸೂಚಿಸಿಸಿದ್ದಾರೆ.

29 ಗ್ರಾಮಗಳಲ್ಲಿ ಅಭಾವ ಸಂಭವ
ಕೊಟ್ಟೂರು ತಾಲೂಕಿನ 29 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಂಭವವಿದೆ. ಅಲಬೂರು, ಸಂಗಮೇಶ್ವರ, ಅಂಬಳಿ, ದೂಪದಹಳ್ಳಿ, ಗೊಲ್ಲರಹಳ್ಳಿ, ಬೇವೂರು, ದೂಪದಹಳ್ಳಿ ತಾಂಡಾ, ಹ್ಯಾಳ್ಯಾ, ಲೊಟ್ಟನಕೇರಿ, ಮಲ್ಲನಾಯಕನಹಳ್ಳಿ, ಮೋತಿಕಲ್ಲು ತಾಂಡಾ, ಕೆ.ಅಯ್ಯನಹಳ್ಳಿ ಚಪ್ಪರದಳ್ಳಿ, ಹರಾಳು, ಕನ್ನನಾಯ್ಕನಕಟ್ಟೆ, ಮರೂರು, ರಾಮನಾಯ್ಕನಹಳ್ಳಿ, ಕಾಳಾಪುರ, ಚಿನ್ನೇನಹಳ್ಳಿ, ಕಂದಗಲ್ಲು ಭತ್ತನಹಳ್ಳಿ, ನಾಗರಕಟ್ಟೆ, ಕುರಬನಹಳ್ಳಿ, ನಿಂಬಳಗೇರಿ, ಗಾಣಗಟ್ಟೆ, ಮಂಗಾಪುರ, ಬೆಳದೇರಿ,. ತೂಲಹಳ್ಳಿ, ಉಜ್ಜಿನಿ, ಬೈರಿದೇವರಗುಡ್ಡ, ಬೆನಕನಹಳ್ಳಿ ಆ ಗ್ರಾಮಗಳಾಗಿವೆ.

ಈಡೇರದ ಸಿಎಂ ಬೊಮ್ಮಾಯಿ ಭರವಸೆ
ತಾಲೂಕಿನಲ್ಲಿ ಸಂಜೀವಿನಿ ಜಲ ಯೋಜನೆ, ಅಮೃತ ಸರೋವರ ಯೋಜನೆ, ಚೆಕ್ ಡ್ಯಾಂ ನಿರ್ಮಾಣ, ಕೃಷಿಹೊಂಡ, ಇಂಗುಗುಂಡಿ ನಿರ್ಮಾಣ ಮೊದಲಾದ ಯೋಜನೆಗಳಿವೆ. ಕಳೆದ ವರ್ಷ ಹೆಚ್ಚು ಮಳೆಯ ಪರಿಣಾಮ, ಕೆರೆ-ಕಟ್ಟೆಗಳು ತುಂಬಿದ್ದವು. ಇದರಿಂದ ತಕ್ಕ ಮಟ್ಟಿಗೆ ಅಂತರ್ಜಲ ವೃದ್ಧಿಯಾಗಿತ್ತು. ಭವಿಷ್ಯತ್ತಿನಲ್ಲಿ ನೀರಿನ ಸಮಸ್ಯೆ ಬಗೆಹರಿಯಲು ಕೆರೆಗಳು ಸದಾ ತುಂಬಿರುವಂತೆ ನೋಡಿಕೊಳ್ಳಬೇಕು. ಕೊಟ್ಟೂರು ಮತ್ತು ತಾಲೂಕಿನ ಇತರೆ ಗ್ರಾಮಗಳ ಕೆರೆಗೆ ನೀರು ತುಂಬಿಸುವ ಯೋಜನೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮಂಡನೆಯಾಗಿತ್ತು. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕೆರೆಗಳಿಗೆ ನೀರು ತುಂಬಿಸುವುದು ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯರರ ಮೂಲ ಉದ್ದೇವೂ ಇದೆ ಆಗಿತ್ತು. ಕೊಟ್ಟೂರು ಮಾರ್ಗವಾಗಿ ಕೂಡ್ಲಿಗಿ ತಾಲೂಕಿಗೆ ಹಾದು ಹೋಗಿರುವ 7 ಕಿ.ಮೀ. ಉದ್ದದ ನೀರು ಸಂಗ್ರಹದಿಂದ ಬೃಹತ್ ಪೈಪ್ ನಿರ್ಮಾಣ ಮಾಡಿ ಕೊಟ್ಟೂರು ಕೆರೆ ತುಂಬಿಸಲಾಗುವುದು ಎಂದು ತರಳಬಾಳು ಹುಣ್ಣಿಮೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ.

ಕೊಟ್ಟೂರಲ್ಲಿ ನಿರ್ಮಿಸಿರುವ ಶುದ್ಧಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿರುವುದು.
ಕೊಟ್ಟೂರಲ್ಲಿ ನಿರ್ಮಿಸಿರುವ ಶುದ್ಧಕುಡಿಯುವ ನೀರಿನ ಘಟಕ ನಿರುಪಯುಕ್ತವಾಗಿರುವುದು.

ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ನನ್ನ ಮೊದಲ ಗುರಿ. 378 ಕೋಟಿ ರೂ. ಯೋಜನೆಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಡಿಪಿಆರ್ ಕೂಡ ಆಗಿದೆ. ಬಜೆಟ್‌ನಲ್ಲೂ ಘೋಷಿಸಲಾಗಿದೆ. ನಾನು ಕಾಂಗ್ರೆಸ್ ಶಾಸಕ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಆದರೆ, ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುದಾನ ನೀಡಿದೆ.ಎಸ್. ಭೀಮಾನಾಯ್ಕಹಗರಿಬೊಮ್ಮನಹಳ್ಳಿ ಶಾಸಕರು

ಕೊಟ್ಟೂರು ಸೇರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಸಮರ್ಥವಾಗಿ ಬಗೆಹರಿಸಲು ಶೀಘ್ರದಲ್ಲೇ ತಾಪಂ ಇಒ, ಪಪಂ ಮುಖ್ಯಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡುತ್ತೇನೆ.ಎಂ. ಕುಮಾರ ಸ್ವಾಮಿಕೊಟ್ಟೂರು ತಹಸೀಲ್ದಾರ್

ಕೊಟ್ಟೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ 29 ಹಳ್ಳಿಗಳನ್ನು ಗುರುಸಲಾಗಿದೆ. 15ನೇ ಹಣಕಾಸಿನಲ್ಲಿ ಕುಡಿಯುವ ನೀರು ಸಮಸ್ಯೆ ನೀಗಲು ಅನುದಾನವಿದೆ. ಅಗತ್ಯಬಿದ್ದರೆ ಕೊಳವೆಬಾವಿಗಳನ್ನು ಕೊರೆಸಲಾಗುವುದು.ಪರಮೇಶ್ವರಪ್ಪಕೊಟ್ಟೂರು ತಾಪಂ ಇಒ

ಪಟ್ಟಣದ ಜನಸಂಖ್ಯೆಗೆ ತಕ್ಕಂತೆ ನೀರು ಸರಬರಾಜು ಆಗುತ್ತಿಲ್ಲ. ಇದಕ್ಕೆ ತಾಂತ್ರಿಕ ತೊಂದರೆ ಇದೆ. 17 ಶುದ್ಧ ಕುಡಿಯುವ ನೀರನ ಘಟಕಗಳಿವೆ. ಆದರೆ, ಅವು ಕಾರ್ಯನಿರ್ವಹಿಸುತ್ತಿಲ್ಲ. ಆ ಇಲಾಖೆಗೆ ನೋಟೀಸ್ ನೀಡಿದರೂ ಕ್ಯಾರೆ ಅನ್ನುತ್ತಿಲ್ಲ. ಇದನ್ನು ಶಾಸಕರ ಗಮನಕ್ಕೆ ತರಲಾಗಿದೆ. 24 ತಾಸು ನೀರು ಸರಬರಾಜು ಯೋಜನೆ ಸ್ಥಗಿತವಾಗಿದೆ. ಇವುಗಳ ನಡುವೆ ಸಮಪರ್ಕವಾಗಿ ನೀರು ಕೊಡಲು ವ್ಯವಸ್ಥೆ ಮಾಡಲಾಗುವುದು.ನಸರುಲ್ಲಾಕೊಟ್ಟೂರು ಪಪಂ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net