

ಕಲಬುರಗಿ: ನಗರದ ಸೇಡಂ ರಸ್ತೆಯಲ್ಲಿರುವ ಗುಬ್ಬಿ ಕಾಲನಿಯಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸಮರ್ಪಕವಾಗಿ ಪೂರೈಸಲು ಕ್ರಮ ಕೈಗೊಂಡು ಅನುವು ಮಾಡಿಕೊಡುವಂತೆ ಬಡಾವಣೆಯ ನಾಗರಿಕರು ಒತ್ತಾಯಿಸಿದರು. ಇಲ್ಲದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಬಡಾವಣೆಯ ನಿವಾಸಿಗಳಾದ ಜಗದೇವ ಗುತ್ತೇದಾರ, ಸಿದ್ಧರಾಜ ಬಿರಾದಾರ, ಗುರುಸ್ವಾಮಿ, ಅನಿಲಕುಮಾರ ರಟಕಲï ಮೊದಲಾದವರು ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ೩೨ರಲ್ಲಿ ಬರುವ ಗುಬ್ಬಿ ಕಾಲನಿ ಸೇರಿದಂತೆ ಸುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪರಿಹಾರ ಕಂಡಿಲ್ಲ. ಗುಬ್ಬಿ ಕಾಲನಿಗೆ ನೀರು ಸರಬರಾಜು ಮಾಡುತ್ತಿಲ್ಲ. ಬೇರೆ ವಾರ್ಡ್ಗಳಿಗೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಆದರೆ, ನಮ್ಮ ಬಡಾವಣೆಗೆ ಮಾತ್ರ 6 ದಿನಕ್ಕೊಮ್ಮೆ ಬರುತ್ತಿದೆ ಹೀಗಾದರೆ ಹೇಗೆ ಎಂದು ಜಗದೇವ ಗುತ್ತೇದಾರ ಖಾರವಾಗಿ ಪ್ರಶ್ನಿಸಿದರು. ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.
ಸಾಯಿ ನಗರದಲ್ಲಿ ಬೃಹತ ಟ್ಯಾಂಕ್ ನಿರ್ಮಿಸಲಾಗಿದೆ. ಐದು ವರ್ಷವಾದರೂ ಬಳಕೆ ಮಾಡುತ್ತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಇದಕ್ಕೆ ಯಾರು ಹೊಣೆ ಎಂದು ಖಾರವಾಗಿ ಪ್ರಶ್ನಿಸಿದರು.
ಬೀದಿ ನಾಯಿ ಮತ್ತು ಹಂದಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಿಸಬೇಕು. ಒಳಚರಂಡಿ ಪೈಪ್‌ಲೈನ್ ಹಾಕಿಸಬೇಕು. ರಾಜಕಾಲುವೆ ಮೇಲೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಬೀದಿ ದೀಪದ ಕಂಬಗಳಿಗೆ ಸಂಖ್ಯೆ ಹಾಕಿ ಎಲ್‌ಇಡಿ ಬಲ್ಬ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಡಾವಣೆಯ ಪ್ರಮುಖರಾದ ಶಿವರುದ್ರಪ್ಪ, ಮಲ್ಲಿಕಾರ್ಜುನ ಕಲಬುರ್ಗಿ, ಬಸವರಾಜ ಕೋರವಾರ, ವಿದ್ಯಾಸಾಗರ ಸಿದ್ರಾಮಗೋಳ, ಧನಂಜಯ ಪುರಾಣಿಕ, ವಿಶ್ವನಾಥ ಹಾಲಪ್ಪಗೋಳ, ವಿಜಯಕುಮಾರ ಸಂಗಶೆಟ್ಟಿ, ಚಂದ್ರಕಾಂತ ಡಿಗ್ಗಿ, ಜಗದೀಶ ಕೋರಿ, ಸಿದ್ರಾಮ ಕರಣಿಕರ, ಸುಭಾಷ ಕಡಗಂಚಿ, ಸೂರ್ಯಕಾಂತ ಸಿರಗಾಪುರ ಮೊದಲಾದವರಿದ್ದರು.