ಬೊಂಬೆ ನಗರಿಯಲ್ಲಿ ನೀರಿಗೆ ತತ್ವಾರ : ಪೊಲೀಸರಿಗೆ ಕಗ್ಗಂಟಾದ ವಾಟರ್ ಟ್ಯಾಂಕ್ ಪ್ರಕರಣ: ಕಾಲು ಪತ್ತೆಯಾದ ದಿನದಿಂದ ನೀರಿನ ಸಂಪರ್ಕ ಬಂದ್

20-cpt-4p
Published on

ಚನ್ನಪಟ್ಟಣ: ಇಡೀ ಬೊಂಬೆನಗರಿಯನ್ನು ಬೆಚ್ಚಿ ಬೀಳಿಸಿದ ನೀರಿನ ಟ್ಯಾಂಕ್‌ನ ವಾಲ್ವ್‌ನಲ್ಲಿ ಶವದ ಕಾಲು ಪತ್ತೆ ಪ್ರಕರಣ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಪ್ರಕರಣದ ತಳಬುಡ ಅರ್ಥವಾಗದಿರುವುದು ಒಂದೆಡೆಯಾದರೆ, ಪ್ರಕರಣದಿಂದ ಎರಡು ಬಡಾವಣೆಗಳ ನಿವಾಸಿಗರಿಗೆ ನೀರಿನ ತತ್ವಾರ ಉಂಟಾಗಿದೆ.

ಅ.9ರಂದು ನಗರದ ಹೊಸನ್ಯಾಯಾಲಯದ ಹಿಂಭಾಗದಲ್ಲಿರುವ ಓವರ್‌ಹೆಡ್ ಟ್ಯಾಂಕ್‌ನ ವಾಲ್ವ್‌ನಲ್ಲಿ ಶವದ ಕಾಲು ಪತ್ತೆಯಾಗಿತ್ತು. ಈ ಪ್ರಕರಣ ಇಡೀ ಬೊಂಬೆನಗರಿಯನ್ನು ಬೆಚ್ಚಿ ಬೀಳಿಸಿತ್ತು. ನೂರಾರು ಮನೆಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಆಗುತ್ತಿದ್ದ ನೀರಿನ ಪೈಪ್‌ಲೈನ್‌ನಲ್ಲಿ ಸಿಕ್ಕ ಮೃತದೇಹದ ಕಾಲು ಜನತೆಯನ್ನು ಆತಂಕಕ್ಕೆ ದೂಡಿತ್ತು. ಜಾಡು ಹಿಡಿದು ಹೊರಟ ಪೊಲೀಸರಿಗೆ 70 ದಿನಗಳು ಕಳೆದರೂ ಈ ಪ್ರಕರಣ ಕಗ್ಗಂಟಾಗಿ ಉಳಿದಿದೆ.

ಕುಡಿಯುವ ನೀರಿನ ಸಮಸ್ಯೆ: ಈ ನೀರಿನ ಟ್ಯಾಂಕ್‌ನಿಂದ ಹಲವು ಬಡಾವಣೆಗಳ ನೂರಾರು ಮನೆಗಳಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತಿತ್ತು. ಘಟನೆ ನಂತರ ಈ ಮನೆಗಳಿಗೆ ನೀರಿನ ಸಂಪರ್ಕ ಬಂದ್ ಆಗಿದೆ. ಅಂದಿನಿಂದ ಸಂಬಂಧಪಟ್ಟವರು ಕುಡಿಯುವ ಕಾವೇರಿ ನೀರಿಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಎರಡು ಬಾರಿಗೆ ಭೇಟಿ ನೀಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜನರ ಮಾನಸಿಕ ಗೊಂದಲಗಳನ್ನು ಗಮನಿಸಿ, ಟ್ಯಾಂಕ್ ಮತ್ತು ಪೈಪ್‌ಲೈನ್‌ನ್ನು ಹೊಸದಾಗಿ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಟ್ಯಾಂಕ್‌ನಿಂದ ಸಂಪರ್ಕವಿರುವ 10 ಮತ್ತು 11ನೇ ವಾರ್ಡ್‌ನ ನಿವಾಸಿಗಳಿಗೆ ಅಂದಿನಿಂದ ಬೋರ್‌ವೆಲ್ ನೀರು ಮಾತ್ರ ಸರಬರಾಜಾಗುತ್ತಿದ್ದು, ಕೆಲದಿನ ಮಾತ್ರ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗಿತ್ತು. ಇದೀಗ, ಎರಡು ತಿಂಗಳು ಕಳೆದರೂ ಕುಡಿಯುವ ನೀರಿಗೆ ಬದಲಿ ವ್ಯವಸ್ಥೆ ಇಲ್ಲದಿರುವುದು ಈ ಬಡಾವಣೆಯ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಟ್ಯಾಂಕ್ ಸ್ವಚ್ಛಗೊಳಿಸಿ: ಕುಡಿಯುವ ನೀರಿನ ಸರಬರಾಜು ಇಲ್ಲದೇ ಹೈರಾಣಾಗಿರುವ ಕೋಟೆ ಬಡಾವಣೆಯ 10 ಹಾಗೂ 11 ನೇ ವಾರ್ಡಿನ ನಿವಾಸಿಗಳು ಭಾನುವಾರ ಕೋಟೆ ವರದರಾಜಸ್ವಾಮಿ ದೇವಸ್ಥಾನದ ಬಳಿ ಸಭೆ ಸೇರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನೀರಿನ ಟ್ಯಾಂಕ್ ಮಲಿನಗೊಂಡು ಎರಡು ತಿಂಗಳಾದರೂ ಕುಡಿಯುವ ಕಾವೇರಿ ನೀರು ಸರಬರಾಜಾಗುತ್ತಿಲ್ಲ, ಇರುವ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ ನೀರು ಬಿಡುವುದು ಸೂಕ್ತ. ಹೊಸ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಲಕ್ಷಾಂತರ ಅನುದಾನದ ಅವಶ್ಯಕತೆ ಇದ್ದು, ಸದ್ಯಕ್ಕೆ ಅದು ಸಾಕಾರಗೊಳ್ಳುವ ನಂಬಿಕೆ ಇಲ್ಲ ಇದರಿಂದ ಸಮಸ್ಯೆ ಬಗೆಹರಿಯುತ್ತದೆ ಎಂದು ಸ್ಥಳೀಯ ನಾಗರಿಕರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net