

ಮಂಡ್ಯ: ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಲು ಅನುಕೂಲವಾಗುವಂತೆ ಕೆಆರ್‌ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಆದರೂ ಅನಿವಾರ್ಯವಾಗಿ ನಾಲೆಗಳಿಗೆ ನೀರು ಹರಿಸಬೇಕಿತ್ತು, ಅದರಂತೆ ನೀರು ಬಿಡಲಾಗಿದೆ. ಸಧ್ಯದ ಡ್ಯಾಂನಲ್ಲಿರು ನೀರಿನ ಸಂಗ್ರಹ ಗಮನಿಸಿದರೆ ಮೂರ್ನಾಲ್ಕು ಟಿಎಂಸಿ ಮಾತ್ರ ಬಳಸಿಕೊಳ್ಳಬಹುದಾಗಿದೆ. ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದಷ್ಟೇ ನಮಗೆ ಶಕ್ತಿ ಇದೆ. ಎರಡು ಮೂರು ದಿನದಲ್ಲಿ ದೇವರು ಕರುಣೆ ತೋರಿಸಿದರೆ ನಾವು ನೀವೆಲ್ಲ ನೆಮ್ಮದಿಯಾಗಿ ಇರಬಹುದು ಎಂದರು.
ಮಂಡ್ಯದಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ, ಮುಲಾಜಿಲ್ಲದೆ ಅದಕ್ಕೆಲ್ಲ ಕಡಿವಾಣ ಹಾಕುತ್ತೇವೆ. ಘಟನೆ ನಡೆಯದಂತೆ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಗೆ ಸೂಚನೆ ಕೊಡುತ್ತೇನೆ. ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದರೇ ಅವರ ಮೇಲಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳುತ್ತೇವೆ. ಕಾಂಗ್ರೆಸ್-ಬಿಜೆಪಿ ನಾಯಕರ ಅಡ್ಜೆಸ್ಟ್ಮೆಂಟ್ ರಾಜಕಾರಣದ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆಕ್ಕೆ ಪ್ರತಿಕ್ರಿಯಿಸಿ, ರೀ ಬಿಜೆಪಿಯವರೇ ಫಸ್ಟ್ ಅಡ್ಜೆಸ್ಟ್ಮೆಂಟ್. ಕುಮಾರಸ್ವಾಮಿ ತಾವು ಅಡ್ಜೆಸ್ಟ್ಮೆಂಟ್ ಎಂದು ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಒಂದೇ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ಳದೆ ಇರುವ ಪಕ್ಷ. ನಾವೂ ನೇರವಾಗಿ ಫೈಟ್ ಮಾಡಿದ್ದೇವೆ. ಅದಕ್ಕೆ ರಾಜ್ಯದ ಜನರು 135 ಸೀಟು ಕೊಟ್ಟಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ಸುರ್ಜೇವಾಲ ಭಾಗಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧಿಕೃತ ಸಭೆಯಲ್ಲಿ ಭಾಗಿಯಾಗುವುದು ಸರಿಯಲ್ಲ. ಆದರೆ ಖಾಸಗಿ ಸಭೆಯ ಸಮಯದಲ್ಲಿ ನಮ್ಮ ಪಕ್ಷದ ಲೀಡರ್ ಇದ್ದರೇ ಅದು ಅಪರಾಧ ಅಲ್ಲ. ಸುರ್ಜೆವಾಲ ಮಾಜಿ ಸಂಸದರು ಹಾಗೂ ಹಾಲಿ ರಾಜ್ಯಸಭಾ ಸದಸ್ಯರು. ಶಾಸಕರ ಸಭೆಯಲ್ಲಿ ಕುಳಿತಿಕೊಳ್ಳುವುದು ಅಪರಾಧವಲ್ಲ. ಜಮೀರ್ ಖಾನ್ ಏಕೆ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಡಿಲಿಟ್ ಮಾಡಿದ್ದಾರೋ ಎನ್ನುವುದು ಗೊತಿಲ್ಲ. ಎಲ್ಲ ಮಂತ್ರಿಗಳ ವಿಚಾರಕ್ಕೆ ನಾನು ಉತ್ತರ ಕೊಡುವುದಕ್ಕೆ ಆಗುತ್ತಾ?. ಜಮೀರ್ ನನ್ನ ಸ್ನೇಹಿತರಾದರೂ ಅವರಿಗೆ ಜವಾಬ್ದಾರಿ ಅವರಿಗಿದೆ. ಆದ್ದರಿಂದ ಅವರೆ ಉತ್ತರ ಕೊಡುತ್ತಾರೆ ಎಂದರು.
ಜಿಲ್ಲೆಯ ಸಾರ್ವಜನಿಕರ ಸೇವೆ ಮಾಡುವ ಕಚೇರಿ ಪ್ರಾರಂಭವಾಗಿದೆ. ಇಲ್ಲಿ ನನ್ನ ಆಪ್ತ ಸಹಾಯಕರು ಇರುತ್ತಾರೆ. ಜನರ ಸೇವೆಗೆ ಸದಾ ತೆರೆದಿರುತ್ತದೆ. ಯಾರೇ ಸಾರ್ವಜನಿಕರು ಬಂದು ಸಮಸ್ಯೆ ಹೇಳಿಕೊಂಡರೂ ಅದನ್ನ ಪರಿಹಾರ ಹುಡುಕ ಕೆಲಸ ಮಾಡುತ್ತೇವೆ. ನಾನು ಮಂಡ್ಯಕ್ಕೆ ಬಂದಾಗ ಈ ಕಚೇರಿಗೆ ಬಂದು ಹೋಗುತ್ತೇನೆ ಎಂದು ಹೇಳಿದರು.
ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೃಷ್ಣ ಇರರಿದ್ದರು.