

ಬೆಳಗಾವಿ: ಪ್ರತಿವರ್ಷ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಉಭಯ ರಾಜ್ಯಗಳ ಪ್ರತಿನಿಧಿಗಳ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ನಗರದ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಹಾರಾಷ್ಟ್ರದೊಂದಿಗೆ ಕೃಷ್ಣಾ ನದಿ ನೀರು ವಿನಿಮಯ ಕುರಿತು ಶೀಘ್ರದಲ್ಲಿಯೇ ಆ ರಾಜ್ಯ ನೀರಾವರಿ ಸಚಿವರ ಜತೆ ಬೆಂಗಳೂರಿನಲ್ಲಿ ಚರ್ಚಿಸಲಾಗುವುದು.
ಅಥಣಿ, ಜಮಖಂಡಿ ಭಾಗಕ್ಕೆ ನೀರು ಕಲ್ಪಿಸುವಂತೆ ಮನವಿ ಮಾಡಲಾಗುವುದು. ಆದರೆ, ಸಭೆಯ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಸಭೆಯಲ್ಲಿ ಪರಸ್ಪರ ಚರ್ಚಿಸಿದ ಬಳಿಕವೇ ನೀರು ವಿನಿಮಯ ಕುರಿತು ಸರ್ಕಾರ ತೀರ್ಮಾನ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರೈತರ ಹಿತರಕ್ಷಣೆ ಮತ್ತು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರ ಆಶಯದ ಪ್ರಕಾರವೇ ಕೆಲಸ ಮಾಡಲಾಗುತ್ತಿದೆ.
ರಾಜ್ಯದ ಎಲ್ಲ ಜಲಾಶಯಗಳಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದೇನೆ. ಮುಂದಿನ ವಾರ ಮೈಸೂರು ಭಾಗಕ್ಕೆ ಭೇಟಿ ನೀಡುತ್ತೇನೆ ಎಂದರು. ಗೋಕಾಕ ತಾಲೂಕಿನ ಘಟ್ಟಿ ಬಸವಣ್ಣ ಡ್ಯಾಂ ನಿರ್ಮಾಣ ಯೋಜನೆಯಿಂದ ಅರಣ್ಯ ಪ್ರದೇಶಕ್ಕೆ ಹಾಗೂ ಗ್ರಾಮಗಳಿಗೆ ಯಾವುದೇ ಹಾನಿ ಇಲ್ಲ. ನಿರ್ವಾಣೇಶ್ವರ ದೇವಸ್ಥಾನ ಮುಳುಗಡೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ನವಲಿ ಡ್ಯಾಂ ನಿರ್ಮಾಣಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.
ರಸ್ತೆ ಮೂಲಕ ದೆಹಲಿಗೆ ಪ್ರಯಾಣ: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಜಲ ಆಯೋಗದ ಜತೆ ಚರ್ಚಿಸಿ, ಮನವರಿಕೆ ಮಾಡಬೇಕಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಿರುವುದರಿಂದ ರಸ್ತೆ ಮಾರ್ಗದ ಮೂಲಕವೇ ದೆಹಲಿಗೆ ತೆರಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದರು. ವೈದ್ಯರ ಸಲಹೆ ಮತ್ತು ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಕರೊನಾ ತಡೆಗಟ್ಟುವುದು ದೊಡ್ಡ ಸವಾಲು ಅಲ್ಲ. ಎಲ್ಲರೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.