ನೀರಿನ ಬವಣೆ ನೀಗಿದ ಗ್ರಾಮಸ್ಥರು

borewell new
Published on

ಅನ್ಸಾರ್ ಇನೋಳಿ, ಉಳ್ಳಾಲ

ಬೇಸಿಗೆಯಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ಕಾಡುವುದು ಸಾಮಾನ್ಯ. ಪಿಲಾರ್‌ನಲ್ಲಿಯೂ ಅಂತಹ ಸಮಸ್ಯೆಯಿದ್ದು, ಸಮಸ್ಯೆ ಅರಿತ ಸ್ಥಳೀಯರು ತಾವೇ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವ ಮೂಲಕ ಎಲ್ಲವೂ ಸರ್ಕಾರವೇ ಕೊಡಬೇಕು ಎಂದು ಕಾಯುವ ಜನರ ನಡುವೆ ಭಿನ್ನವಾಗಿದ್ದಾರೆ.

ಪಿಲಾರ್ ಪ್ರದೇಶ ಪೆರ್ಮನ್ನೂರು ಗ್ರಾಮಕ್ಕೊಳಪಟ್ಟಿದ್ದು ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆ ಅಧೀನದಲ್ಲಿದೆ. ಈ ಪ್ರದೇಶದಲ್ಲಿ 90 ಮನೆಗಳಿವೆ. ಸೋಮೇಶ್ವರ ಪುರಸಭೆ ಮತ್ತು ಉಳ್ಳಾಲ ನಗರಸಭೆಯ ಕೊಳವೆ ಬಾವಿಯಿದ್ದರೂ, ಅದರಲ್ಲಿ ಸಿಗುವ ನೀರು ಸ್ಥಳೀಯರಿಗೆ ಸಾಕಾಗುವುದಿಲ್ಲ. ಹೊಸ ಕೊಳವೆಬಾವಿ ತೋಡುವುದು ಸ್ಥಳೀಯಾಡಳಿತಕ್ಕೆ ಸುಲಭದ ಕೆಲಸವಲ್ಲ. ಅಲ್ಲದೆ ಸೂಕ್ತ ನೀರು ಸಿಗುವ ಜಮೀನಿನ ಸಮಸ್ಯೆಯೂ ಕಾಡಿದೆ. ಇದನ್ನು ಅರ್ಥಮಾಡಿಕೊಂಡ ಸ್ಥಳೀಯ ಮಸೀದಿ, ಸಮಿತಿ ದಾನಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ತಾವೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಅದರಂತೆ ನೀರು ಸಿಗುವ ಜಮೀನು ಗುರುತಿಸಿ ಜಮೀನಿಗೆ ಸಂಬಂಧಪಟ್ಟ ಮಾಲೀಕರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದು ಕೊಳವೆಬಾವಿ ನಿರ್ಮಿಸಿದ್ದಾರೆ.

ಅಡ್ಡಿಯಿಂದಾಗಿ ಕೆಲಸ ವಿಳಂಬ: ಕೊಳವೆ ಬಾವಿ ನಿರ್ಮಿಸಲು ವಾಹನ ಬಂದಾಗ ಮಾರು ದೂರದಲ್ಲಿದ್ದ ಕೆಲವು ಮಂದಿ ಅಡ್ಡಿಪಡಿಸಿದರು. ಇದರಿಂದಾಗಿ ಕಾನೂನು ಪ್ರಕಾರ ಕೊಳವೆ ಬಾವಿ ನಿರ್ಮಿಸಲು ಮುಂದಾದ ಮಸೀದಿ ಸಮಿತಿ ಜಮೀನಿನ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಿ ಮತ್ತೊಮ್ಮೆ ಕೆಲಸ ಆರಂಭಿಸಿತು. ಇದರಿಂದ ಬಾವಿ ನಿರ್ಮಾಣ ಒಂದು ವಾರ ವಿಳಂಬವಾಗಿತ್ತು.

ಪಂಪ್ ಅಳವಡಿಕೆ ಬಾಕಿ: ಈಗಾಗಲೇ 1.07 ಲಕ್ಷ ರೂ. ವೆಚ್ಚದಲ್ಲಿ ಕೊಳವೆ ಬಾವಿ ನಿರ್ಮಾಣವಾಗಿದ್ದು, ಎರಡು ಇಂಚು ನೀರು ಸಿಕ್ಕಿದೆ. ಇದು ಸ್ಥಳೀಯ ಭಾಗದಲ್ಲಿ ವಾಸವಿರುವ ಎಲ್ಲ ಮನೆಗಳಿಗೂ ಸಾಕು ಎನ್ನುವುದು ಮಸೀದಿ ಸಮಿತಿ ಅಭಿಪ್ರಾಯ. ಮುಂದಕ್ಕೆ ಪಂಪ್ ಮತ್ತು ಪೈಪ್‌ಲೈನ್ ವ್ಯವಸ್ಥೆ ಆಗಬೇಕಿದ್ದು ಅದಕ್ಕೆ ಕನಿಷ್ಠ ಎಂದರೂ 1.5 ಲಕ್ಷ ರೂ. ಬೇಕು. ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಸಮಿತಿ ಯೋಜನೆ ರೂಪಿಸಿದೆ. ಎಲ್ಲ ಕೆಲಸ ಪೂರ್ಣಗೊಂಡ ಬಳಿಕ ಸಮಿತಿ ರಚಿಸಿ ಅದರ ಉಸ್ತುವಾರಿಯಲ್ಲಿ ನೀರು ಸರಬರಾಜು ಮಾಡುವ ಯೋಚನೆ ಮಸೀದಿ ಸಮಿತಿಯದ್ದು.

ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಸೀದಿ ಸಮಿತಿಯ ಯೋಜನೆಗೆ ಖಾಸಗಿ ಜಮೀನು ದಾನವಾಗಿ ದೊರಕಿದೆ. ಸ್ಥಳೀಯರು, ದಾನಿಗಳ ಸಹಕಾರದಿಂದ ಕೊಳವೆಬಾವಿ ನಿರ್ಮಾಣಗೊಂಡಿದೆ. ಮುಂದಕ್ಕೆ ಪೈಪ್‌ಲೈನ್ ಕೆಲಸ ಆಗಬೇಕಿದೆ. ಮುಹಮ್ಮದ್ ಅಸ್ಲಂ, ಅಧ್ಯಕ್ಷ, ಪಿಲಾರ್ ಮದನಿ ಮಸೀದಿ ಸರ್ಕಾರದ ಯೋಜನೆಗೆ ಕಾದರೆ ನೀರಿನ ಸಮಸ್ಯೆ ಬಿಗಡಾಯಿಸುವ ಹಿನ್ನೆಲೆಯಲ್ಲಿ ಸ್ಥಳೀಯರೇ ಒಂದಾಗಿ ಕೊಳವೆ ಬಾವಿ ನಿರ್ಮಿಸಿದ್ದೇವೆ. ಪೈಪ್‌ಲೈನ್ ಆದ ಬಳಿಕ ಅಗತ್ಯ ಇರುವ ಎಲ್ಲರಿಗೂ ನೀರು ಒದಗಿಸಲಾಗುತ್ತದೆ. ಯು.ಪಿ.ಅಬ್ಬಾಸ್ ಕೆನರಾ, ಕೋಶಾಧಿಕಾರಿ, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net