100 ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ

6CBP1
Published on

ಚಿಕ್ಕಬಳ್ಳಾಪುರ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ, ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಈಗ ವಾರಕ್ಕೊಮ್ಮೆ ಬರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ 15 ದಿನಗಳಿಗೊಮ್ಮೆ ಪೂರೈಕೆಯಾಗುವುದರಲ್ಲಿ ಅನುಮಾನವಿಲ್ಲ.

ಸತತ ಬರಗಾಲದಿಂದ ಅಂತರ್ಜಲ ಮಟ್ಟ ಕುಸಿತ ಮತ್ತು ಕೊಳವೆ ಬಾವಿಗಳ ವೈಲ್ಯದಿಂದ ನಗರ ಪ್ರದೇಶಗಳ ಜತೆಗೆ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗುತ್ತಿದೆ. ನೀರಿಗಾಗಿ ಕಿಲೋ ಮೀಟರ್‌ಗಟ್ಟಲೆ ಅಲೆಯುವಂತಾಗಿದೆ. ಜತೆಗೆ ದುಪ್ಪಟ್ಟು ಹಣ ನೀಡಿ ಟ್ಯಾಂಕರ್ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ಟ್ಯಾಂಕರ್ ನೀರಿಗೆ 500 ರಿಂದ 600 ರೂ. ಬೇಸಿಗೆ ಪ್ರಾರಂಭದಿಂದ 800ರೂ.ಗೆ ಏರಿಕೆಯಾಗಿದೆ.

ಹಿಂದೆ ವಾರ್ಡ್‌ಗಳಲ್ಲಿ 2 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿತ್ತು. ಆದರೆ, ಈಗ ಆರೇಳು ದಿನಗಳಿಗೊಮ್ಮೆ ಬರುತ್ತಿದ್ದು, ಹಲವೆಡೆ ನೀರಿಗಾಗಿ ಬಿಂದಿಗೆ ಹಿಡಿದು ನಿಲ್ಲುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದಾಗಿ ಟ್ಯಾಂಕರ್ ನೀರು ಮತ್ತು ಖಾಸಗಿ ಕೊಳವೆ ಬಾವಿಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ 73 ಗ್ರಾಮಗಳನ್ನು ಗುರುತಿಸಲಾಗಿದೆ. ಖಾಸಗಿ ಕೊಳವೆ ಬಾವಿಗಳಿಂದ 53 ಮತ್ತು ಟ್ಯಾಂಕರ್ ಮೂಲಕ 20 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬುದು ಕಳೆದ 20 ದಿನಗಳ ಹಿಂದಿನ ಲೆಕ್ಕ. ಆದರೆ, ಪ್ರಸ್ತುತ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 100ರ ಗಡಿ ದಾಟಿದ್ದು ಮುಂಬರುವ ದಿನಗಳಲ್ಲಿ ದುಪ್ಪಟ್ಟಾಗುವ ಆತಂಕ ಕಾಡುತ್ತಿದೆ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳು ಕೈ ಕೊಡುತ್ತಿರುವುದರಿಂದ ಅಧಿಕಾರಿಗಳಿಗೆ ಪರಿಸ್ಥಿತಿ ಎದುರಿಸುವುದು ಸವಾಲಾಗಿದೆ.

2 ತಾಲೂಕುಗಳಲ್ಲಿ ಗಂಭೀರ : ಜಿಲ್ಲೆಯ 6 ತಾಲೂಕುಗಳ ಪೈಕಿ ಸದ್ಯ ಚಿಂತಾಮಣಿ, ಬಾಗೇಪಲ್ಲಿಯಲ್ಲಿ ಸಮಸ್ಯೆ ಗಂಭೀರವಾಗಿದ್ದು ಉಳಿದ ತಾಲೂಕುಗಳಲ್ಲೂ ಉಲ್ಬಣಗೊಳ್ಳುತ್ತಿದೆ. ಜಿಲ್ಲೆಯ ಸಮಸ್ಯಾತ್ಮಕ 73 ಗ್ರಾಮಗಳ ಪೈಕಿ 54 ಚಿಂತಾಮಣಿ ತಾಲೂಕಿಗೆ ಸೇರಿವೆ. ಪರಿಹಾರಕ್ಕೆ 18 ಟ್ಯಾಂಕರ್ ಮತ್ತು 36 ಖಾಸಗಿ ಕೊಳವೆ ಬಾವಿಗಳನ್ನು ಬಳಸಿಕೊಳ್ಳುತ್ತಿದ್ದು ನಗರದ 31 ವಾರ್ಡ್‌ಗಳ ಪೈಕಿ 30 ವಾರ್ಡ್‌ಗಳಿಗೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಪ್ರತಿದಿನ 20 ವಾರ್ಡ್‌ಗಳಿಗೆ 60 ಟ್ಯಾಂಕರ್ ನೀರು ಬೇಕಿದೆ. ಬಾಗೇಪಲ್ಲಿ ತಾಲೂಕಿನಲ್ಲಿ 17 ಸಮಸ್ಯಾತ್ಮಕ ಗ್ರಾಮಗಳಿದ್ದು 15 ಖಾಸಗಿ ಕೊಳವೆ ಬಾವಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಿಗೆ ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಸಿಕ್ಕಾಪಟ್ಟೆ ಕಾಡುತ್ತಿದೆ. ಸಮರ್ಪಕವಾಗಿ ಪೂರೈಕೆಯಾದ ಹಿನ್ನೆಲೆಯಲ್ಲಿ ದುಬಾರಿ ಹಣ ಕೊಟ್ಟು ಖರೀದಿಸುವಂತಾಗಿದೆ. ವಿಜಯಲಕ್ಷ್ಮೀ, ಗೃಹಿಣಿ, ಚಿಂತಾಮಣಿ

ಸಿಆರ್‌ಎ್ನಡಿ ಹಣ ಖರ್ಚು: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸಿಆರ್‌ಎ್ನಡಿ 28.58 ಕೋಟಿ ರೂ. ಬಿಡುಗಡೆಯಾಗಿದ್ದು ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಬಿಲ್ ಸೇರಿ ವಿವಿಧ ಕೆಲಸಗಳಿಗೆ 14.04 ಕೋಟಿ ರೂ. ಖರ್ಚಾಗಿದೆ. ಕುಡಿಯುವ ನೀರಿನ ಪುನಶ್ಚೇತನದ 635 ಕಾಮಗಾರಿಗಳ ಪೈಕಿ 614 ಪೂರ್ಣಗೊಂಡಿದ್ದು 7.91 ಕೋಟಿ ರೂ. ಖರ್ಚಾಗಿದೆ. ರೀ ಡ್ರಿಲ್ ಮಾಡಲಾದ 284 ಕೊಳವೆ ಬಾವಿಗಳ ಪೈಕಿ 195 ವಿಲವಾಗಿವೆ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ, ರಾಜ್ಯ ವಲಯ ಟಾಸ್ಕ್ ಫೋರ್ಸ್ ಘಟಕದಡಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸಲಾಗುತ್ತಿದೆ ಎನ್ನುವುದು ಅಧಿಕಾರಿಗಳು ಮಾತು.

ಜಿಲ್ಲೆ ಮೊದಲೇ ಬರಪೀಡಿತ ಪ್ರದೇಶ. ಇದಕ್ಕೆ ಬೇಸಿಗೆಯಲ್ಲಿ ಉದ್ಭವಿಸಿರುವ ನೀರಿನ ಹಾಹಾಕಾರವನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕೈಗೊಳ್ಳಲು ಸೂಚಿಸಲಾಗಿದೆ. ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net