

ವಿಜಯವಾಣಿ ಸುದ್ದಿಜಾಲ ಮಧುರೆ
ಡೆಂಘೆ, ಚಿಕೂನ್‌ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿರುವ ಗ್ರಾಮೀಣ ಜನರಿಗೆ ಶುದ್ಧ ನೀರಿನ ಘಟಕದಲ್ಲಿನ ನೀರು ಕುಡಿಯಲೂ ಆತಂಕ ಎದುರಿಸುವಂತಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಮಧುರನಹೊಸಹಳ್ಳಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಅವ್ಯವಸ್ಥೆ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಶುಚಿತ್ವ ಕಾಯ್ದುಕೊಳ್ಳಿ, ಶುದ್ಧ ನೀರನ್ನು ಸೇವಿಸಿ ಎಂದು ಪಂಚಾಯಿತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಆದರೆ ವಾಸ್ತವವಾಗಿ ಇದೆಲ್ಲವನ್ನೂ ಕಡೆಗಣಿಸಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ನಿರ್ವಹಣೆಗೆ ನಿರ್ಲಕ್ಷ್ಯ:
ಖಾಸಗಿ ಸಂಸ್ಥೆಯೊಂದು ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ ಆದರೆ ಸೂಕ್ತ ರೀತಿ ನಿರ್ವಹಣೆ ಮಾಡಿ ಸುಸ್ಥಿತಿಯಲ್ಲಿಡುವುದನ್ನು ನಿರ್ಲಕ್ಷ್ಯ ಮಾಡಿದೆ ಇದರಿಂದ ಹೆಸರಿಗೆ ಮಾತ್ರ ಶುದ್ಧ ಕುಡಿವ ನೀರಿನ ಘಟಕವಾಗಿದೆ ವಾಸ್ತವದಲ್ಲಿ ಇದರಿಂದ ಗ್ರಾಮಸ್ಥರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ ಎಂದು ಸ್ಥಳೀಯ ಮುಖಂಡರು ಕಿಡಿಕಾರುತ್ತಿದ್ದಾರೆ.
ಯಂತ್ರಗಳು ಹಾಳಾಗಿವೆ:
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ನೀರು ಸಂಸ್ಕರಿಸುವ ಯಂತ್ರಗಳು ಹಾಳಾಗಿವೆ. ನೀರು ಶೇಖರಿಸುವ ಟ್ಯಾಂಕ್‌ನಲ್ಲಿ ಗಲೀಜು ತುಂಬಿದೆ. ಆದ್ದರಿಂದ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಘಟಕದ ಬಾಗಿಲು ಮುರಿದು ವಾರಗಳೇ ಕಳೆದಿದೆ. ಇಷ್ಟಲ್ಲ ಅವ್ಯವಸ್ಥೆ ಇದ್ದರೂ ನಿರ್ವಹಣೆ ಹೊಣೆ ಹೊತ್ತವರು ಇತ್ತ ಕಡೆ ತಲೆ ಹಾಕಿಲ್ಲ. ಇದರಿಂದ ಶುದ್ಧ ಕುಡಿವ ನೀರಿನ ಘಟಕವಿದ್ದರೂ ಇಲ್ಲಿಂದ ಶುದ್ಧ ಕುಡಿವ ನೀರನ್ನು ಪಡೆಯಲು ಸಾಧ್ಯವಾಗದೆ ಜನರು ಪರಿತಪಿಸುವಂತಾಗಿದೆ.
ಮನವಿಗೆ ಸ್ಪಂದನೆ ಇಲ್ಲ:
ನೀರನ್ನು ಶುದ್ಧೀಕರಿಸುವ ಯಂತ್ರಗಳು ಹಾಳಾಗಿವೆ ಹಲವು ತಿಂಗಳು ಕಳೆದಿದ್ದರೂ ಈ ಬಗ್ಗೆ ಗ್ರಾಮಸ್ಥರು ಮನವಿ ಮಾಡಿ ಹೊಸ ಯಂತ್ರಗಳನ್ನ ಬದಲಾಯಿಸಿ ಕೊಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಈ ಬಗ್ಗೆ ಗಮನ ನೀಡುತ್ತಿಲ್ಲ. ಸ್ವಚ್ಛತೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ಮೂಲೆ ಸೇರುವಂತ ಪರಿಸ್ಥಿತಿ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಹಾಳಾಗಿರುವ ಯಂತ್ರಗಳನ್ನು ಬದಲಿಸಿ ಶುದ್ಧ ನೀರನ್ನು ಪೂರೈಸಿಕೊಡುವಂತೆ ಗುತ್ತಿಗೆ ಪಡೆದಿರುವ ಸಂಸ್ಥೆಗೆ ಸೂಚಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಾಚಿ ಕಟ್ಟಿದ ಕಲುಷಿತ ನೀರು:
ಶುದ್ಧ ಕುಡಿವ ನೀರು ಕಲುಷಿತವಾಗಿ ಬರುತ್ತಿದೆ ಇದನ್ನು ಸೇವಿಸಲು ಯೋಗ್ಯವಾಗಿಲ್ಲ. ನೀರು ಚೆನ್ನಾಗಿಲ್ಲ ಎಂದು ಅಕ್ಕಪಕ್ಕದ ಊರುಗಳಿಗೆ ಹೋಗಿ ಅಲ್ಲಿಂದ ನೀರು ತರುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕದ ಬಾಗಿಲು ಮುರಿದು ವಾರಗಳೇ ಕಳೆದಿದೆ ಈವರೆಗೂ ಸರಿ ಮಾಡಿಲ್ಲ. ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಮೇಲಾಧಿಕಾರಿಗಳು ಬಂದು ವಾಸ್ತವ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಜಿ.ಶಿಲ್ಪಾ ಗ್ರಾಪಂ ಸದಸ್ಯೆ ಮಧುರನಹೊಸಹಳ್ಳಿ