ಕುಡಿಯುವ ನೀರಿಗೆ ಗ್ರಾಪಂಗೆ ಮುತ್ತಿಗೆ - 3ನೇ ವಾರ್ಡ್‌ನ ಹಲಸಿನಕಟ್ಟೆ ನಿವಾಸಿಗಳಿಂದ ಪ್ರತಿಭಟನೆ

PTR_3 APR_3
Published on


ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩ನೇ ವಾರ್ಡ್‌ನ ಹಲಸಿನಕಟ್ಟೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಯಾವುದೇ ಸ್ಪಂದನೆ ನೀಡುತ್ತಿಲ್ಲ. ನೀರಿಲ್ಲದ ಒಣಪ್ರದೇಶದಲ್ಲಿ ಕೊಳವೆಬಾವಿ ಕೊರೆದು ಸಾರ್ವಜನಿಕರ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಕೊಡಪಾನ, ಬಕೆಟ್ ಹಿಡಿದು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿದರು.


ಕುಡಿಯುವ ನೀರು ಕೇಳಿದರೂ ಸರಿಯಾಗಿ ನೀಡದ ಪಂಚಾಯಿತಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಸ್ಥಳೀಯ ಸದಸ್ಯರಲ್ಲಿ ಒಬ್ಬರನ್ನು ಬಿಟ್ಟು ಮತ್ಯಾರೂ ಜನರ ಬಳಿ ಬರುತ್ತಿಲ್ಲ ಎಂದು ಪ್ರತಿಭಟನೆ ಮಾಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.


ರಾಮಣ್ಣ ಪಿಲಿಂಜ, ಲೋಹಿತ್ ಪೂಜಾರಿ, ನವೀನ್ ಗೌಡ, ಪದ್ಮಾವತಿ, ಶೀನ ಮೂಲ್ಯ, ಸೀತಾ, ಗೀತಾ ರುಕ್ಮಯ್ಯ ಗೌಡ, ತಾರಾನಾಥ ಹಾಗೂ ಕೃಷ್ಣಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಽಕಾರಿ ಸುಜಯ ಮತ್ತು ಅಧ್ಯಕ್ಷ ಪುನೀತ್ ಮಾಡತ್ತಾರು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಹಾಳಾಗಿರುವ ಪಂಪ್ ಸರಿಪಡಿಸಿ ನೀರಿನ ವ್ಯವಸ್ಥೆ ಸರಿಪಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.


ನೀರಿಗಾಗಿ ಬಡಪಾಯಿ ಜನರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ವಾಹನದಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಅದು ನಮಗೆ ಸಾಕಾಗುತ್ತಿಲ್ಲ. ಕಳೆದ ಚುನಾವಣೆ ಸಮಯದಲ್ಲಿ ನೀರು ನೀಡಲು ಸರತಿಯಲ್ಲಿ ನಿಂತಿದ್ದವರು ಈ ಬಾರಿ ಕಾಣುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ಕೆಲವು ಸದಸ್ಯರು ಜೀವ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಕ್ಷಣವೇ ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು.
| ಎಲ್ಯಣ್ಣ ಪೂಜಾರಿ, ಗ್ರಾಮಸ್ಥರು


ಕೆಮನಾಜೆ, ಶಾಂತಿಯಡ್ಕ, ಹಲಸಿನಕಟ್ಟೆ, ಬೇರಿಕೆ ಮತ್ತು ಪಿಲಿಂಜ ಭಾಗದಲ್ಲಿ ನೀರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸುತ್ತಮುತ್ತಲಿನಲ್ಲಿ ತೆರೆದ ಬಾವಿ ಕೂಡ ಇಲ್ಲ. ನೀರಿಗಾಗಿ ೨ ಕಿ.ಮೀ ದೂರ ಹೋಗಬೇಕು. ಕೊಳವೆಬಾವಿಗೆ ಹಾಕಿದ ಪಂಪ್ ಹಾಳಾಗಿದೆ ಎಂದು ಹೇಳಿದರೂ ಯಾರೂ ಇತ್ತ ಕಡೆ ಸುಳಿಯುವುದಿಲ್ಲ.
| ನಳಿನಿ, ಗ್ರಾಮಸ್ಥೆ


ನೀರಿನ ಸಮಸ್ಯೆ ಬಗ್ಗೆ ಪಿಡಿಒ ಗಮನಕ್ಕೆ ತಂದಿದ್ದು, ಬಳಿಕ ಅವರು ನೀರಿನ ಒರತೆ ಇಲ್ಲದ ಜಾಗದಲ್ಲಿ ಕೊಳವೆಬಾವಿ ಕೊರೆಸಿದ್ದಾರೆ. ಆದರೆ ಅಲ್ಲಿ ನೀರು ಸಿಗುತ್ತಿಲ್ಲ. ಇಲ್ಲಿ ನೀರಿನ ಒರತೆ ಇಲ್ಲ. ಇಲ್ಲಿ ಕೊಳವೆ ಬಾವಿ ಕೊರೆಯಬೇಡಿ ಎಂದರೂ ಕೊರೆಸಿದ್ದಾರೆ. ನಮ್ಮ ಮಾತಿಗೆ ಬೆಲೆ ಇಲ್ಲಂತಾಗಿದೆ. ಇದೀಗ ನೀರಿಗಾಗಿ ನಾವು ಪರದಾಟ ನಡೆಸುತ್ತಿದ್ದೇವೆ. ತಕ್ಷಣವೇ ನಮಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು.
| ರಮೇಶ್ ನಾಯಕ್, ಮಾಜಿ ಅಧ್ಯಕ್ಷ, ಗ್ರಾಪಂ


ವಿಟ್ಲ ಮುಡ್ನೂರು ಗ್ರಾಪಂ ವ್ಯಾಪ್ತಿಯ ಮೂರನೇ ವಾರ್ಡ್‌ನ ಹಲಸಿನಕಟ್ಟೆ ಭಾಗದ ೩೦ ಮನೆಗೆ ಎರಡು ದಿನಕ್ಕೊಮ್ಮೆ ೯ ಪಿಕಪ್‌ನಲ್ಲಿ ತಲಾ ೨ ಸಾವಿರ ಲೀಟರ್ ನೀರು ನೀಡಲಾಗುತ್ತಿದೆ. ಶಾಂತಿಯಡ್ಕದಲ್ಲಿ ಹೊಸ ಕೊಳವೆಬಾವಿ ತೆಗೆದಿದ್ದು, ೬೦೦ ಅಡಿ ಹೋದರೂ ನೀರೇ ಇಲ್ಲ. ಹಳೆಯ ಕೊಳವೆಬಾವಿಗೆ ಕಬ್ಬಿಣ ಹಾಕಿದ್ದು, ಅದನ್ನು ತೆಗೆಯಲು ಪರಿಣತರು ಆಗಮಿಸಬೇಕಾಗಿದೆ. ಪಂಪ್‌ನಲ್ಲಿ ನೀರು ಬರದೇ ಹೋದರೆ ನಾವು ಏನು ಮಾಡುವುದು?
| ಸುಜಯ, ಪಿಡಿಒ ವಿಟ್ಲಮುಡ್ನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net