ನೀರಿನ ಸಮಸ್ಯೆ ಕೋಲಾಹಲ!: ಅಪೂರ್ಣ ಕಾಮಗಾರಿಗೆ ಸಾಮಾನ್ಯ ಸಭೆಯಲ್ಲಿ ಅಸಮಾಧಾನ : ಡಿಸಿಯೊಡನೆ ಚರ್ಚೆ ವಿಳಂಬಕ್ಕೆ ಆಕ್ರೋಶ

9
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಒಂದನೇ ಹಂತದ ಕುಡಿಯುವ ನೀರಿನ ಯೋಜನೆಯ ಅಪೂರ್ಣತೆ ಹಾಗೂ ಇದರಿಂದಾಗಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪುರಸಭೆ ನಿಯೋಗ ಜಿಲಾಧಿಕಾರಿ ಬಳಿ ತೆರಳಿ ಚರ್ಚಿಸುವ ಬಗ್ಗೆ ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಆ ಬಳಿಕ ಇನ್ನೊಂದು ಸಾಮಾನ್ಯ ಸಭೆ ನಡೆದರೂ ಇನ್ನೂ ಜಿಲ್ಲಾಧಿಕಾರಿ ಬಳಿ ಹೋಗದಿರುವ ಬಗ್ಗೆ ಸೋಮವಾರ ಪುರಸಭೆ ಅಧ್ಯಕ್ಷ ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮತ್ತೆ ವಿಷಯ ಪ್ರಸ್ತಾಪವಾಗಿ ಭಾರಿ ಚರ್ಚೆ ನಡೆಯಿತು.

ವಿಪಕ್ಷ ಸದಸ್ಯ ಹರಿಪ್ರಸಾದ್ ಜಿಲ್ಲಾಧಿಕಾರಿಯನ್ನು ಭೇಟಿಯಾಗದಿರುವ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದಾಗ ಏಳು ಸಲ ನಿರಂತರವಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದ್ದೇನೆ. ಹೊಸ ಮುಖ್ಯಾಧಿಕಾರಿ ಬಂದ ಮೇಲೆಯೂ ಮನವಿ ನೀಡಿದ್ದೇವೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೂ ಮನವಿ ಕೊಟ್ಟು ಕುಡಿಯುವ ನೀರಿನ ವಿತರಣಾ ಅವ್ಯವಸ್ಥೆ ಕುರಿತು ತಿಳಿಸಿದ್ದೇನೆ ಎಂದರು.

ಈ ಬಗ್ಗೆ ಸುದೀರ್ ಚರ್ಚೆ ನಡೆದು ವಿಪಕ್ಷ ಸದಸ್ಯರ ಟೀಕೆಗೆ ಭಾವುಕರಾದ ಅಧ್ಯಕ್ಷ ವಾಸು ಪೂಜಾರಿ, ಈ ಬಗ್ಗೆ ಏನು ಮಾಡಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ಸುಮ್ಮನೆ ಆರೋಪ ಮಾಡಬೇಡಿ ಎಂದು ತಿರುಗೇಟು ನೀಡಿ 15 ದಿನದೊಳಗಾಗಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ನೀರಿನ ಸಮಸ್ಯೆ ಬಗೆಹರಿಸೋಣ, ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾನೇ ಧರಣಿ ಕೂರುತ್ತೇನೆ ಎಂದು ವಾಸು ಪೂಜಾರಿ ಹೇಳಿದರು. ಆ ಬಳಿವೂ ಚರ್ಚೆ ಮುಂದುವರಿದಾಗ ದಾಖಲೆ ಇಲ್ಲದೆ ಅಧ್ಯಕ್ಷರ ಮೇಲೆ ಆರೋಪ ಮಾಡಬಾರದು. ಜಿಲ್ಲಾಧಿಕಾರಿ ಭೇಟಿ ಮಾಡುವ ಬಗ್ಗೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಪ್ರಯತ್ನದಲ್ಲಿದ್ದಾರೆ. ಅವರಿಗೂ ಅವಕಾಶ ನೀಡಿ ಎಂದು ಆಡಳಿತ ಸದಸ್ಯ ಲುಕ್ಮಾನ್ ಹಾಗೂ ಮಹಮ್ಮದ್ ಶರೀಫ್ ಹೇಳಿದರು.

ಕುಡಿಯುವ ನೀರು ಕಲುಷಿತವಾಗುವ ವಿಚಾರದ ಕುರಿತು ಕ್ರಮ ವಹಿಸಲು ಇಲಾಖೆಗಳಿಗೆ ತಿಳಿಸಲಾಗಿದೆ. ಮಾಂಸದಂಗಡಿ ಸಹಿತ ಹಲವು ಕಡೆಗಳಿಂದ ನೀರಿಗೆ ಕೊಳಚೆ ಬಿಡದಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಉಪಾಧ್ಯಕ್ಷ ಮೂನೀಶ್ ಅಲಿ, ಮುಖ್ಯಾಧಿಕಾರಿ ನಝೀರ್ ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಗೋವಿಂದ ಪ್ರಭು, ಹರಿಪ್ರಸಾದ್, ಮಹಮ್ಮದ್ ಶರೀಫ್, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ವಿದ್ಯಾವತಿ, ಚರ್ಚೆಯಲ್ಲಿ ಪಾಲ್ಗೊಂಡರು.

16 ಕೆಲಸಗಳು ಬಾಕಿ

ಪುರಸಭೆಯ ಕಚೇರಿ ಹಿಂಭಾಗದಲ್ಲಿ ಬಳಕೆಯಾಗದೆ ತುಕ್ಕು ಹಿಡಿಯುತ್ತಿರುವ ಹಿಟಾಚಿ ಯಂತ್ರಕ್ಕೆ ಡ್ರೈವರ್ ನೇಮಕ ಮಾಡಲು ಟೆಂಡರ್ ಕರೆಯದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮಳೆಗಾಲದ ವೇಳೆಗೆ ಕವರ್ ಹಾಕಿ ಇಡಿ ಎಂದು ರಾಮಕೃಷ್ಣ ಆಳ್ವ ಸಲಹೆ ನೀಡಿದರೆ, ಹಿಟಾಚಿ ಯಂತ್ರ ನಿಂತಲ್ಲೇ ಇಂಚು ಇಂಚಾಗಿ ಆಳಕ್ಕೆ ಹೋಗುತ್ತಿದೆ ಎಂದು ಹರಿಪ್ರಸಾದ್ ಕುಟುಕಿದರು. ಪ್ರತ್ರಿಕ್ರಿಯಿಸಿದ ಮುಖ್ಯಾಧಿಕಾರಿ ಈ ಬಗ್ಗೆ ಟೆಂಡರ್ ಕರೆಯಲು ಕ್ರಮ ವಹಿಸಲಾಗಿದೆ. ಪುರಸಭೆಯಲ್ಲಿ ಒಟ್ಟು 16 ಕೆಲಸಗಳು ಹಲವು ಸಮಯದಿಂದ ಟೆಂಡರ್ ಕರೆಯದೆ ಬಾಕಿ ಉಳಿದ್ದಿತ್ತು ಎಂದು ಮಾಹಿತಿ ನೀಡಿದರು.

400 ಕೆವಿಗೆ ಆಕ್ಷೇಪ

ಪುರಸಭಾ ವ್ಯಾಪ್ತಿಯಲ್ಲಿರುವ ಕುದನೆ, ಕಾರಂಬಡೆ ಬಳಿ 17 ಎಕರೆ ಜಾಗವನ್ನು ಬಡವರ ಮನೆ ನಿರ್ಮಾಣಕ್ಕಾಗಿ ನಿವೇಶನ ಕಾದಿರಿಸಲಾಗಿದ್ದು, ಈ ಜಮೀನಿನಲ್ಲಿ ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಹಾಗೂ ಟವರ್ ಅಳವಡಿಕೆಗೆ ನಿರಾಕ್ಷೇಪಾ ಪತ್ರ ನೀಡಲು ಕಂಪನಿ ಪತ್ರ ಬರೆದಿದ್ದು, ಕೌನ್ಸಿಲ್ ಆಕ್ಷೇಪ ವ್ಯಕ್ತಪಡಿಸಿತು. 

ಕೋಣದ ಮುಂದೆ ಕಿನ್ನರಿ ಬಾರಿಸಿದಂತೆ!

ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೀನು, ಮಾಂಸ ರುಕಟ್ಟೆಯ ತ್ಯಾಜ್ಯ ನೀರು ನದಿ ನೀರಿಗೆ ಸೇರಿ ಕಲುಷಿತವಾಗುವ ಬಗ್ಗೆ ಚರ್ಚೆ ನಡೆಯಿತು. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಮಂಗಳೂರಿನಿಂದ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಮಂಗಳೂರಿನ ಹಿರಿಯ ನಾಗರಿಕರ ತಂಡವೂ ಭೇಟಿ ನೀಡಿದೆ. ಆದರೂ ಪುರಸಭೆ ಚರ್ಚೆಯ ನಡಾವಳಿಯಲ್ಲಿ ಈ ವಿಷಯ ಪ್ರಸ್ತಾಪ ಮಾಡದಿರುವ ಬಗ್ಗೆ ಗೋವಿಂದ ಪ್ರಭು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೋಣದ ಮುಂದೆ ಕಿನ್ನರಿ ಬಾರಿಸಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯೊಂದಿಗೆ ವಿಲೀನ ಮಾಡಿ

ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಯಲ್ಲಿರುವ ಅಂಬೇಡ್ಕರ್ ಭವನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳಲು ಪುರಸಭೆಗೆ ಪತ್ರ ಬರೆಯುತ್ತಾರೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಗೆ ಅನುದಾನ ಕೋರಿ ಪುರಸಭೆಗೆ ಪತ್ರ ಬರೆಯುತ್ತಾರೆ. ಇಲಾಖೆಯ ವಸತಿ ಶಾಲೆಯ ಹಳೇ ಕಟ್ಟಡವನ್ನು ನೆಲಸಮಗೊಳಿಸಲು ಅನುದಾನ ಒದಗಿಸಲು ಪುರಸಭೆಗೆ ಪತ್ರ ಬರೆಯುತ್ತಾರೆ. ಎಲ್ಲ ಕೆಲಸಗಳಿಗೆ ಪುರಸಭೆಯನ್ನು ಅವಲಂಬಿಸಿರುವ ಬಂಟ್ವಾಳದ ಸಮಾಜ ಕಲ್ಯಾಣ ಇಲಾಖೆಯನ್ನು ಪುರಸಭೆಯೊಂದಿಗೆ ವಿಲೀನಗೊಳಿಸುವುದು ಒಳ್ಳೆಯದು ಎಂದು ಸದಸ್ಯ ಗೋವಿಂದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು. ಎಸ್.ಎಫ್.ಸಿ. ಅನುದಾನದಡಿ ಸಭೆಯ ಗಮನಕ್ಕೆ ತಾರದೆ ಪೌರಕಾರ್ಮಿಕರಿಗೆ ವೇತನ ನೀಡಲಾಗಿರುವ ಕುರಿತು ಚರ್ಚೆ ನಡೆಯಿತು.

140 ಕೆ.ಜಿ.ಸ್ಯಾನಿಟರಿ ಪ್ಯಾಡ್, ಡೈಪರ್ಸ್

ಬಂಟ್ವಾಳ ಪುರಸಭೆಯಲ್ಲಿ 140 ಕೆ.ಜಿ.ಸ್ಯಾನಿಟರಿ ಪ್ಯಾಡ್, ಡೈಪರ್ಸ್ ಸಂಗ್ರಹವಾಗುತ್ತಿದ್ದು, ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಇತ್ತೀಚೆಗೆ ತ್ಯಾಜ್ಯ ಸಂಸ್ಕರಣಾ ಟಕಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಈ ಬಗ್ಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ. ಸ್ಯಾನಿಟರ್ ಪ್ಯಾಡ್ ಬಳಕೆಯ ಬಗ್ಗೆ ಜನಜಾಗೃತಿ ಮೂಡಿಸಿದರೂ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ವೈಜ್ಞಾನಿಕವಾಗಿ ವಿಲೇಗೊಳಿಸಲು ಖಾಸಗಿ ಸಂಸ್ಥೆಗೆ ನೀಡುವ ಬಗ್ಗೆ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಸಭೆಯ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net