ನೀರಿಗಾಗಿ ಪರದಾಡಿದ್ದ ಶಾಲಾ ಮಕ್ಕಳು

tubgere 1 problem 3 jpg
Published on

 ವಿಜಯವಾಣಿ ಸುದ್ದಿಜಾಲ ತೂಬಗೆರೆ

ಕೇಂದ್ರ ಮಾಜಿ ಸಚಿವರಾಗಿದ್ದ ಜಾಲಪ್ಪ ಅವರಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅನೇಕ ಸಾಧಕರು ಪ್ರಾಥಮಿಕ ಶಿಕ್ಷಣ ಮುಗಿಸಿದ ತೂಬಗೆರೆ ಸರ್ಕಾರಿ ಶಾಲೆಯ ಮಕ್ಕಳು ಸತತ 20 ದಿನ ಕುಡಿವ ನೀರಿಗಾಗಿ ಪರದಾಡಿದ್ದ ದೃಶ್ಯಗಳು ಹೋಬಳಿಯಲ್ಲಿ ದೊಡ್ಡ ಸದ್ದು ಮಾಡಿದೆ.

ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಬರೋಬ್ಬರಿ 20 ದಿನ ಕಳೆದರೂ ದುರಸ್ತಿಗೆ ಮೀನಮೇಷ ಎಣಿಸಿದ್ದ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಪಾಲಕರು ಛೀಮಾರಿ ಹಾಕಿದ್ದಾರೆ. ಗ್ರಾಮಸ್ಥರಿಂದ ಸ್ಥಳೀಯ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಡಿ.9ರ ಸಂಜೆ ವೇಳೆಗೆ ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಏನಿದು ಪ್ರಕರಣ? ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತು 300 ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದು, ಪ್ರಾಥಮಿಕ ಶಾಲೆಯಲ್ಲಿ 170 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನ.20 ರಂದು ಇಲ್ಲಿನ ಶಾಲೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಟ್ರಾನ್‌ಸ್ಾರ್ಮರ್ ಸುಟ್ಟುಹೋಗಿತ್ತು. ಇದರಿಂದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕೊಳವೆಬಾವಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಪಂಚಾಯಿತಿಗೆ ಶಾಲಾ ಸಿಬ್ಬಂದಿ ದೂರು ನೀಡಿದ್ದರು. ಪಂಚಾಯಿತಿ ಅಧಿಕಾರಿಗಳು ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳ ಗಮನ ಸೆಳೆದಿದ್ದರು. ಆದರೆ ಬೆಸ್ಕಾಂ ಅಧಿಕಾರಿಗಳು ಟ್ರಾನ್‌ಸ್ಾರ್ವರ್ ಸರಿಪಡಿಸಲು ಸುಮಾರು 20 ದಿನ ಕಾಲಾವಧಿ ತೆಗೆದುಕೊಂಡಿದ್ದಾರೆ. ಇಷ್ಟೂ ದಿನಗಳ ಕಾಲ ಶಾಲಾ ಮಕ್ಕಳು ಕುಡಿವ ನೀರಿಗಾಗಿ ಪರದಾಡಿದ್ದಾರೆ.

ಟ್ಯಾಂಕರ್ ನೀರು ಸುರಕ್ಷಿತವೇ? ಸತತ 20 ದಿನಗಳಿಂದ ನೀರು ಇಲ್ಲದೆ ಪಂಚಾಯಿತಿ ವತಿಯಿಂದ ತಾತ್ಕಾಲಿಕವಾಗಿ ಶಾಲೆಗೆ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿತ್ತು ಎನ್ನಲಾಗಿದೆ. ಆದರೆ ಟ್ಯಾಂಕರ್ ನೀರು ಎಷ್ಟು ಸುರಕ್ಷಿತ ಎಂಬುದು ಪಾಲಕರ ಪ್ರಶ್ನೆಯಾಗಿದೆ. ಇದೇ ನೀರನ್ನು ಕುಡಿಯಲು ಹಾಗೂ ಬಿಸಿಯೂಟ ತಯಾರಿಸಲು ಬಳಸಲಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರಿರಬಹುದು ಎಂಬುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಟ್ಯಾಂಕರ್ ನೀರು ಬಳಕೆ ಮಾಡುತ್ತಾರೆ. ಇದರಿಂದ ಭಾಗಶಃ ಟ್ಯಾಂಕರ್‌ಗಳು ಸ್ವಚ್ಛಗೊಂಡಿರುವುದಿಲ್ಲ. ನೀರು ಸಂಗ್ರಹಣೆಯ ಒಳಭಾಗ ತುಕ್ಕು ಹಿಡಿದಿರುತ್ತದೆ. ಇದರಲ್ಲಿ ಸಂಗ್ರಹಗೊಂಡ ನೀರನ್ನು ನೇರವಾಗಿ ಅಡುಗೆ ಹಾಗೂ ಕುಡಿಯಲು ಬಳಸುವುದು ಸುರಕ್ಷಿತವಲ್ಲ ಆದ್ದರಿಂದ ಇಂಥ ಪರಿಸ್ಥಿತಿಗೆ ಕಾರಣವಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಟಿಸಿ ಸಮಸ್ಯೆ ಸಾಮಾನ್ಯ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್‌ಸ್ಾರ್ಮರ್) ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಟ್ರಾನ್‌ಸ್ಾರ್ಮರ್ ಕೆಟ್ಟುಹೋದರೆ ಇದರ ದುರಸ್ತಿಗೆ ತಿಂಗಳುಗಟ್ಟಲೆ ಹಿಡಿಯುತ್ತದೆ. ಬೆಸ್ಕಾಂ ಸಿಬ್ಬಂದಿ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಆದರೆ ಸರ್ಕಾರಿ ಶಾಲಾ ಮಕ್ಕಳ ಕುಡಿಯುವ ನೀರಿಗೂ ಕುತ್ತು ಬಂದಿದೆ ಎಂಬುದು ಅಧಿಕಾರಿಗಳ ಗಮನಕ್ಕೆ ತಂದರೂ ಅದೇ ನಿರ್ಲಕ್ಷ್ಯ ಧೋರಣೆ ತಾಳಿರುವುದು ಎಷ್ಟು ಸರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೂಬಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20 ದಿನಗಳಿಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಲ್ಲ. ನೀರಿಲ್ಲದಿರುವ ಬಗ್ಗೆ ಪಂಚಾಯಿತಿಗೆ ಎಷ್ಟು ಬಾರಿ ಹೇಳಿದರೂ ಅವರು ತಲೆಕೆಡಿಸಿಕೊಂಡಿರಲಿಲ್ಲ, ಸಮಸ್ಯೆಯಾಗಿದೆ ಸರಿಪಡಿಸೋಣ ಬಿಡಿ ಎಂದು ಹಾರಿಕೆ ಉತ್ತರ ಕೊಡುತ್ತಿದ್ದರು.

ಹನುಮಂತರಾಜ, ತೂಬಗೆರೆ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net