ಜಲಮಾಲಿನ್ಯ ತಡೆಗೆ ಬೂದು ಮಾರ್ಗ:ಚರಂಡಿ ನೀರು ನಿರ್ವಹಣೆಗೆ ಕಂಪ್ಲಿ ತಾಪಂ ಕ್ರಮ

kmp
ದೇವಸಮುದ್ರ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗೆ ಕಾಲುವೆ ನಿರ್ಮಿಸಿರುವುದು.
Published on

ಕಂಪ್ಲಿ: ಕೊಳಚೆ ನೀರು ನೇರವಾಗಿ ಕೆರೆ, ಹಳ್ಳ, ಹೊಂಡ, ನದಿ ಸೇರಿ ಜಲಮೂಲಗಳು ಕಲುಷಿತವಾಗುತ್ತಿವೆ. ಇದನ್ನು ತಡೆಯಲು ಸರ್ಕಾರ ಬೂದು ನೀರು ನಿರ್ವಹಣಾ ಯೋಜನೆ ಆರಂಭಿಸಿದ್ದು, ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಅನುಷ್ಠಾನಕ್ಕೆ ತಾಪಂ ಮುಂದಾಗಿದೆ. ಈಗಾಗಲೇ 10 ಗ್ರಾಪಂ ಪೈಕಿ ಎಂಟು ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಕಾಲುವೆ ನಿರ್ಮಿಸಿ ಜಲ ಸಂರಕ್ಷಣೆಗೆ ಕ್ರಮವಹಿಸಲಾಗಿದೆ.

ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 55 ಲೀ. ನೀರು ಬಳಕೆ

ಜನರು ನಿತ್ಯದ ಕೆಲಸಗಳಿಗೆ ಬಳಸುವ, ಕುಡಿಯಲು ಬಳಕೆಯಾಗದ, ಶೌಚಗೃಹ ಸಂಪರ್ಕಕ್ಕೆ ಬಾರದ ನೀರು ಬೂದು(ಗ್ರೇ ವಾಟರ್)ನೀರಾಗಿದೆ. ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ನಿತ್ಯ ಸರಾಸರಿ 55 ಲೀ. ನೀರು ಬಳಸುತ್ತಿದ್ದು, ಇದರಲ್ಲಿ ಶೇ.70 ಬೂದು ನೀರಾಗಿ ಪರಿವರ್ತನೆಯಾಗುತ್ತದೆ. ಬೂದು ನೀರು ಮಾನವ ಬಳಕೆಯಿಂದ ಕಲುಷಿತ, ಕುಡಿಯಲು ಯೋಗ್ಯವಲ್ಲದ ನೀರಾಗಿದ್ದು ಇದರಲ್ಲಿ ದ್ರವ ತ್ಯಾಜ್ಯ, ಜಿಡ್ಡು, ತೈಲ, ಸೂಕ್ಷ್ಮಾಣು ಜೀವಿ, ಲೋಹ, ಜೈವಿಕ ವಸ್ತು, ರಂಜಕ, ಸಾರಜನಕ, ಹೈಡ್ರೋಕಾರ್ಬನ್, ದ್ರವ ತ್ಯಾಜ್ಯ ಮಾಲಿನ್ಯಕಾರಕಗಳು ಒಳಗೊಂಡಿರುತ್ತದೆ. ಇಂತಹ ನೀರನ್ನು ನೇರವಾಗಿ ಕೆರೆ, ಹೊಂಡ, ನದಿಗಳಿಗೆ ಸೇರಿಸಿದಲ್ಲಿ ಜಲ ಮಾಲಿನ್ಯವಾಗುತ್ತದೆ.

ಕಲುಷಿತ ನೀರು ಈ ನಾಲೆಗಳ ಮೂಲಕ ಮೂರು ಹಂತಗಳಲ್ಲಿ ನೀರನ್ನು ಸಂಸ್ಕರಿಸಲಾಗುತ್ತದೆ

ಇದನ್ನು ಪರಿಣಾಮಕಾರಿಯಾಗಿ ತಪ್ಪಿಸಲು ಬೂದು ನೀರು ನಿರ್ವಹಣಾ ಕ್ರಮ ಅನುಸರಿಸಲಾಗುತ್ತಿದೆ.ಕೊಳಚೆ ನೀರು ಸಂಸ್ಕರಣೆ ಹೇಗೆ?: ಚರಂಡಿ ನೀರು ಹರಿದು ಗ್ರಾಮದ ಹೊರ ಅಂಚಿಗೆ ಬಂದಾಗ ಅಲ್ಲಿಂದ ಬೂದು ನೀರು ನಿರ್ವಹಣಾ ಕೆಲಸ ಆರಂಭವಾಗುತ್ತದೆ. ಇದಕ್ಕಾಗಿ ಸಿಮೆಂಟ್ ಕಾಲುವೆಗಳನ್ನು ನಿರ್ಮಿಸಲಾಗಿದೆ. ಕಲುಷಿತ ನೀರು ಈ ನಾಲೆಗಳ ಮೂಲಕ ಮೂರು ಹಂತಗಳಲ್ಲಿ ನೀರನ್ನು ಸಂಸ್ಕರಿಸಲಾಗುತ್ತದೆ. ಮೊದಲ ಹಂತದ ಸಿಲ್ಟ್ ಟ್ಯಾಂಕ್‌ನಲ್ಲಿ ಘನ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ನಂತರ ಎರಡು ಮತ್ತು ಮೂರನೇ ಹಂತದಲ್ಲಿ ಕ್ರಮೇಣ ನೀರನ್ನು ಸಂಸ್ಕರಿಸಿ ಜಲಮೂಲಕ್ಕೆ ಸೇರಿಸಲಾಗುತ್ತದೆ. ಜಲಮೂಲಕ್ಕೆ ಸೇರುವಾಗ ಬೂದು ನೀರು ತಿಳಿಯಾಗಿರುತ್ತದೆ.

ಜೈವಿಕ ಕೊಳಚೆಯನ್ನು ಕಡಿಮೆಗೊಳಿಸಲು ಕೊಲೋಕೇಶಿಯಾ ಸಸ್ಯ ಬೆಳೆಸಲಾಗುತ್ತದೆ.

ಬೂದು ನೀರು ನಿರ್ವಹಣಾ ಕಟ್ಟಡ ಆಕರ್ಷಕವಾಗಿದೆ. ಜೈವಿಕ ಕೊಳಚೆಯನ್ನು ಕಡಿಮೆಗೊಳಿಸಲು ಕೊಲೋಕೇಶಿಯಾ ಸಸ್ಯ ಬೆಳೆಸಲಾಗುತ್ತದೆ. ಈ ಜಲ ಸಸ್ಯ ನೀರನ್ನು ತಿಳಿಗೊಳಿಸಿ ಮಾಲಿನ್ಯರಹಿತವಾಗಿಸುವ ಗುಣ ಹೊಂದಿದೆ. ತಾಲೂಕಿನ ಹತ್ತು ಗ್ರಾಪಂಗಳಲ್ಲಿ ಮೆಟ್ರಿ, ರಾಮಸಾಗರ ಹೊರತುಪಡಿಸಿ ಎಂಟು ಗ್ರಾಪಂಗಳ ಕೇಂದ್ರ ಸ್ಥಾನಗಳಲ್ಲಿ ನರೇಗಾ ಯೋಜನೆಯಡಿ ಬೂದು ನೀರು ನಿರ್ವಹಣಾ ಕಾಮಗಾರಿ ನಿರ್ಮಿಸಲಾಗಿದೆ. ಅಲ್ಲದೆ 5000 ಮಾನವ ದಿನಗಳ ಸೃಜನೆಯಾಗಿದೆ. ತಲಾ ಐದರಿಂದ ಎಂಟು ಲಕ್ಷ ರೂ. ವೆಚ್ಚ ತಗುಲಲಿದೆ.

ಬೂದು ಮಾರ್ಗದ ಉಪಯೋಗವೇನು?

ಬೂದು ನೀರು ನಿರ್ವಹಣೆಯಿಂದ ಜಲ ಮಾಲಿನ್ಯ ತಡೆಯಬಹುದು. ಅಲ್ಲದೆ ಜನರ ಜೀವನಮಟ್ಟ ಸುಧಾರಣೆ, ನೀರಿನ ವೈಜ್ಞಾನಿಕ ನಿರ್ವಹಣೆ, ಗುಣಮಟ್ಟ ಸಂರಕ್ಷಣೆ, ದ್ರವ ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ, ಪರಿಸರ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುತ್ತದೆ. ಜಲಮೂಲಗಳನ್ನು ಮಾಲಿನ್ಯದಿಂದ ತಪ್ಪಿಸುವ ಜತೆಗೆ ಬೂದು ನೀರನ್ನು ಇಂಗುಗುಂಡಿ ಮೂಲಕ ಬೋರ್‌ವೆಲ್ ರೀಚಾರ್ಜ್ ಮಾಡಬಹುದು. ಕೈತೋಟಕ್ಕೆ, ಬೆಳೆಗಳಿಗೆ ಬಳಸಬಹುದಾಗಿದೆ. ಮನೆ ಮಟ್ಟದಲ್ಲಿ ಬೂದು ನೀರನ್ನು ಇಂಗುಗುಂಡಿ ಮೂಲಕ ಭೂಮಿಗೆ ಸೇರಿಸಿದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ.

ಚರಂಡಿ ಕೊಳಚೆಯನ್ನು ನೇರವಾಗಿ ನದಿ, ಕಾಲುವೆ, ಹಳ್ಳಗಳಿಗೆ ನೇರವಾಗಿ ಬಿಡುವುದರಿಂದ ಜಲಮಾಲಿನ್ಯವಾಗಲಿದೆ. ಇದನ್ನು ಪರಿಣಾಮಕಾರಿಯಾಗಿ ತಪ್ಪಿಸಲು ಬೂದು ನೀರು ನಿರ್ವಹಣಾ ಕಾಮಗಾರಿ ಉಪಯುಕ್ತವಾಗಿದೆ. ಗ್ರಾಮೀಣ ಜನರು ಈ ಯೋಜನೆ ಕುರಿತು ಜಾಗೃತಿ ಹೊಂದಿದಲ್ಲಿ ಜಲ ಮಾಲಿನ್ಯವನ್ನು ಕಡಿಮೆ ಮಾಡಬಹುದು. ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿದೆ.ಕೆ.ಎಸ್.ಮಲ್ಲನಗೌಡ.ತಾಪಂ ಇಒ, ಕಂಪ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net