ನಾಯಕನಹಟ್ಟಿಯಲ್ಲಿ ಅಬ್ಬರಿಸಿದ ಮಳೆ

dj nyk rain
Published on

ನಾಯಕನಹಟ್ಟಿ: ಪಟ್ಟಣದ ಹಾಗೂ ಸುತ್ತಲಿನ ಗ್ರಾಮದಲ್ಲಿ ಮಳೆ ಅಬ್ಬರ ಜೋರಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ. ತಳಕು, ತಿಮ್ಮಣ್ಣನ ಹಳ್ಳಿ, ವಲಸೆ, ನಾಯಕನಹಟ್ಟಿ ಚಿಕ್ಕ ಕೆರೆ, ಗುಂತಕೋಲಮ್ಮನಹಳ್ಳಿ ಕೆರೆಗಳಿಗೆ ಅರ್ಧದಷ್ಟು ನೀರು ಹರಿದಿದೆ.

ಮನಮೈನಹಟ್ಟಿ ಕೆರೆ ತುಂಬಿ ಕೋಡಿ ಹರಿದ ಪರಿಣಾಮ, ಗ್ರಾಮದ ಏಕಾಂತೇಶ್ವರ ನಗರದ 35ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚಳ್ಳಕೆರೆ- ಅರಭಾವಿ ರಾಜ್ಯ ಹೆದ್ದಾರಿ ಮೇಲಿನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಕ್ಕಳು ಶಾಲೆಗೆ ಹೋಗಲು ಪರದಾಡುತ್ತಿದ್ದ ಪರಿಸ್ಥಿತಿ ಕಂಡು ಬಂದಿತು.

ಬೆಳಗಿನ ಜಾವ ಭಾರೀ ವಾಹನಗಳು ಗೌರೀಪುರ, ಎನ್.ಮಹದೇವಪುರ ಗ್ರಾಮವನ್ನು ಸುತ್ತು ಬಳಸಿ ನಾಯಕನಹಟ್ಟಿಯನ್ನು ಸೇರಿದವು.

ಬೆಳಗ್ಗೆ 9 ಗಂಟೆ ನಂತರ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ ತಲುಪಿದೆ. 10 ಗಂಟೆ ನಂತರ ಚಿಕ್ಕ ವಾಹನಗಳಾದ ಕಾರು, ಲಗೇಜ್ ವಾಹನಗಳ ಸಂಚಾರ ಪುನಾರಂಭವಾಗಿದೆ.

ಮನೆಗಳಿಗೆ ನುಗ್ಗಿದ ನೀರು: ಏಕಾಂತೇಶ್ವರ ಬಡಾವಣೆಯಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಇಡೀ ರಾತ್ರಿ ಪರದಾಡುವಂತಾಯಿತು. ರಸ್ತೆ ಅಡ್ಡಲಾಗಿ ದೊಡ್ಡ ಪ್ರಮಾಣದ ಸೇತುವೆ ನಿರ್ಮಿಸಬೇಕು. ಹಳ್ಳ ಮತ್ತು ಚರಂಡಿಯ ನೀರು ಹರಿಯುವುದಕ್ಕೆ ರಾಜಕಾಲುವೆ ಮಾಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಒತ್ತಾಯವಾಗಿದೆ.

ನಾಯಕನಹಟ್ಟಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ದೊಡ್ಡ ಚರಂಡಿ ಬ್ಲಾಕ್ ಆಗಿದೆ. ಹೀಗಾಗಿ ಚರಂಡಿಯ ಮೂಲಕ ಹರಿಯಬೇಕಿದ್ದ ನೀರು ಠಾಣೆ ಆವರಣಕ್ಕೆ ನುಗ್ಗಿದೆ. ಆದ್ದರಿಂದ ಇಡೀ ಠಾಣೆ ಜಲಾವೃತಗೊಂಡಿತ್ತು. ಮೊಳಕಾಲುದ್ದದ ನೀರನ್ನು ದಾಟಿ ಠಾಣೆಗೆ ಹೋಗಬೇಕಾಗಿತ್ತು. ಮಾಳಪ್ಪನಹಟ್ಟಿ ಬಳಿ ಮತ್ತು ಪಟ್ಟಣದ ಸಮೀಪವಿರುವ 5 ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ.

ಎನ್.ಮಹಾದೇವಪುರ, ಹಿರೇಹಳ್ಳಿ, ಎನ್.ದೇವರಹಳ್ಳಿ ಸೇರಿ ಹತ್ತಾರು ಗ್ರಾಮಗಳ ಚೆಕ್ ಡ್ಯಾಂಗಳು ತುಂಬಿವೆ. ಹೋಬಳಿಯಲ್ಲಿ 20ಕ್ಕೂ ಹೆಚ್ಚು ಚೆಕ್ ಡ್ಯಾಂ ಹಾಗೂ ಗೋಕಟ್ಟೆಗಳು ತುಂಬಿವೆ. ಮೆ ಮಳೆ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಶೇಂಗಾ, ಸೂರ್ಯಕಾಂತಿ, ತೊಗರಿ ಬೆಳೆಗಳು ರೈತರ ಕೈ ಸೇರುವ ಹಂತದಲ್ಲಿವೆ.

ತಳಕು ಹೋಬಳಿ ರಾಷ್ಟ್ರೀಯ ಹೆದ್ದಾರಿ 150 ಎ ಪಕ್ಕದಲ್ಲಿ ದೊಡ್ಡ ಕಾಂಪೌಂಡ್ ಗೋಡೆ ಕುಸಿದಿದೆ. ಬೇಡರೆಡ್ಡಿಹಳ್ಳಿ ಹಳ್ಳ ತುಂಬಿಹರಿದಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net